ಆನೆಗಳು ಕಾಡನ್ನು ದಾಟದಂತೆ ತಡೆಯಲು ಉಕ್ಕಿನ ಹಗ್ಗ ಬಳಕೆ

ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಿಂದ ಕಾಡಾನೆಗಳು ಮಾನವ ವಾಸಸ್ಥಾನಗಳಿಗೆ ದಾಳಿ ನಡೆಸದಂತೆ ತಡೆಯಲು ಮತ್ತು ಅವುಗಳು ಅರಣ್ಯ ಪ್ರದೇಶದಲ್ಲೇ ಉಳಿಯುವಂತೆ ಮಾಡಲು ಕರ್ನಾಟಕ ಅರಣ್ಯ ಇಲಾಖೆಯು ತಮಿಳುನಾಡಿನ ಮಾದರಿಯನ್ನು ಅನುಸರಿಸಲು ಮುಂದಾಗಿದೆ.

ಹಲವು ಪ್ರಯತ್ನಗಳ ನಂತರವೂ ಆನೆಗಳು ಅರಣ್ಯ ಪ್ರದೇಶವನ್ನು ದಾಟಿ ನಾಡಿಗೆ ಬರುವುದನ್ನು ತಡೆಯಲಾಗದೆ, ರಾಜ್ಯದ ಅರಣ್ಯ ಇಲಾಖೆ ಹೊಸ ಮಾದರಿ ಅನುಸರಿಸುತ್ತಿದೆ. ಹೊಸೂರು ಬಳಿಯ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ತಮಿಳುನಾಡು ಅರಣ್ಯಾಧಿಕಾರಿಗಳು ಉಕ್ಕಿನ ತಂತಿಗಳನ್ನು ಬಳಸಿ ಬೇಲಿಗಳನ್ನು ನಿರ್ಮಿಸಿ ಆನೆಗಳು ಅರಣ್ಯ ಪ್ರದೇಶವನ್ನು ದಾಟದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಪ್ರಯತ್ನವನ್ನು ಕರ್ನಾಟಕದ ಅರಣ್ಯ ಅಧಿಕಾರಿಗಳು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎನ್‌ಟಿಆರ್) ಶೀಘ್ರದಲ್ಲೇ ಅನುಸರಿಸಲು ಮುಂದಾಗಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೋಲಾರ್ ಅಥವಾ ರೈಲು ಬ್ಯಾರಿಕೇಡ್‌ಗಳ ಬದಲಿಗೆ ಉಕ್ಕಿನ ತಂತಿ ಬೇಲಿಗಳನ್ನು ಮೊದಲ ಬಾರಿಗೆ ಬಳಸಲಾಗುತ್ತಿದೆ. “ಈ ವಿಧಾನದಲ್ಲಿ, ಆನೆಗಳು ನಿಲ್ಲಲು ಅಥವಾ ಬ್ಯಾರಿಕೇಡ್‌ಗಳನ್ನು ದಾಟಲು ಗಟ್ಟಿಯಾದ ಹಿಡಿತಗಳು ಸಿಗುವುದಿಲ್ಲ. ಉಕ್ಕಿನ ಹಗ್ಗಗಳು ತೋಯ್ದಾಡುವುದರಿಂದ ಪ್ರಾಣಿಗಳು ಗೊಂದಲಕ್ಕೀಡಾಗುತ್ತವೆ ಮತ್ತು ಕಾಡಿಗೆ ಹಿಂತಿರುಗುತ್ತವೆ. ಆನೆಗಳು ಹಗ್ಗಗಳ ಮೇಲೆ ಹತ್ತಲು ಯಾವುದೇ ಹಿಡಿತ ಸಿಗುವುದಿಲ್ಲ. ಹೀಗಾಗಿ, ಉಕ್ಕಿನ ಹಗ್ಗಗಳನ್ನು ನಾಗರಹೊಳೆಯಲ್ಲಿ ಅಳವಡಿಸಲು ನಮ್ಮ ಉನ್ನತಾಧಿಕಾರಿಗಳಿಂದ ಅನುಮತಿ ಪಡೆದಿದ್ದೇವೆ. ಈಗ ನಾವು ಅಂತಹ ಹಗ್ಗಗಳ ತಯಾರಕರನ್ನು ಹುಡುಕಬೇಕಾಗಿದೆ” ಎಂದು ಎನ್‌ಟಿಆರ್‌ನ ನಿರ್ದೇಶಕ ಡಿ ಮಹೇಶ್ ಕುಮಾರ್ ತಿಳಿಸಿದ್ದಾರೆ.

ಉಕ್ಕಿನ ಹಗ್ಗಗಳು ಸೇತುವೆಗಳನ್ನು ನಿರ್ಮಿಸಲು ಬಳಸುವ ರೀತಿಯಲ್ಲೇ ಇರಲಿವೆ. ಮಾನವ-ಆನೆ ಸಂಘರ್ಷದ ಸಮಸ್ಯೆ ಇರುವ ಎನ್‌ಟಿಆರ್‌ನ ವೀರನಹೊಸಹಳ್ಳಿ ವ್ಯಾಪ್ತಿಯಲ್ಲಿ 5 ಕಿ.ಮೀ. ಉಕ್ಕಿನ ಹಗ್ಗಗಳನ್ನು ಮೊದಲು ಅಳವಡಿಸಲಾಗುತ್ತದೆ. ಈ ಹಗ್ಗಗಳು ರೈಲು ಬ್ಯಾರಿಕೇಡ್‌ಗಳಿಗಿಂತ ಕಡಿಮೆ ವೆಚ್ಚ ಹೊಂದಿವೆ. ಒಂದು ಕಿ.ಮೀ ರೈಲು ಬ್ಯಾರಿಕೇಡ್‌ಗಳಿಗೆ ರೂ. 1.2 ಕೋಟಿಯಿಂದ ರೂ. 1.3 ಕೋಟಿ ವೆಚ್ಚವಾಗಲಿದೆ. ಆದರೆ, ತಮಿಳುನಾಡು ಅಳವಡಿಸಿರುವ ಉಕ್ಕಿನ ಹಗ್ಗಗಳ ಬೆಲೆ ಪ್ರತಿ ಕಿ.ಮೀ.ಗೆ ಕೇವಲ ರೂ. 50-55 ಲಕ್ಷ ಮಾತ್ರ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಕೆಲವು ವರ್ಷಗಳಿಂದ, ಅರಣ್ಯಾಧಿಕಾರಿಗಳು ಆನೆಗಳು ಕಾಡಿನಿಂದ ಹೊರಬರದಂತೆ ತಡೆಯಲು ಮೆಣಸಿನಕಾಯಿ- ತಂಬಾಕು ಹಗ್ಗದ ಬೇಲಿಗಳು, ಸೌರ ಬೇಲಿಗಳು, ಮುಳ್ಳುತಂತಿಗಳು, ಕಂದಕಗಳನ್ನು ಹೊಂದಿರುವ ನಾಲೆಗಳು, ರೈಲು ಬ್ಯಾರಿಕೇಡ್‌ಗಳು ಮತ್ತು ಜೇನುನೊಣಗಳ ಬೇಲಿಗಳಂತಹ ವಿವಿಧ ರೀತಿಯ ಬ್ಯಾರಿಕೇಡ್‌ಗಳನ್ನು ಬಳಸಿದ್ದಾರೆ. ಆದರೆ, ಆನೆಗಳು ಆ ಎಲ್ಲಾ ಬ್ಯಾರಿಕೇಡ್‌ಗಳನ್ನು ದಾಟಲು ಉಪಾಯ ಕಂಡುಕೊಂಡಿವೆ.

“ಆನೆಗಳು ಸೌರ ಬ್ಯಾರಿಕೇಡ್‌ಗಳನ್ನು ಮರದ ದಿಮ್ಮಿಗಳಿಂದ ಒಡೆಯುವುದು, ರೈಲು ಬ್ಯಾರಿಕೇಡ್‌ಗಳ ಮೇಲೆ ಏರುವುದು ಮತ್ತು ಮೆಣಸಿನಕಾಯಿ-ತಂಬಾಕು ಬ್ಯಾರಿಕೇಡ್‌ಗಳ ಮೇಲೆ ನೀರು ಎಸೆಯುವುದನ್ನು ನಾವು ಕ್ಯಾಮೆರಾ ಟ್ರ್ಯಾಪ್‌ಗಳ ಮೂಲಕ ಗಮನಿಸಿದ್ದೇವೆ” ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಇದೇ ಕಾರಣದಿಂದ ಈಗ ಹೊಸ ಪ್ರಯೋಗಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇದು ಯಶಸ್ವಿಯಾಗುವುದೇ ನೋಡಬೇಕಿದೆ.

ಆದರೆ ಪರಿಸರವಾದಿಗಳು ಈ ಪ್ರಯತ್ನಗಳಿಂದ ಹೆಚ್ಚು ಸಂತುಷ್ಟರಾಗಿಲ್ಲ. “ಹೆಚ್ಚುತ್ತಿರುವ ಅರಣ್ಯ ನಾಶವು ಪ್ರಾಣಿಗಳು ಮನುಷ್ಯನ ವಾಸಸ್ಥಾನಕ್ಕೆ ಪ್ರವೇಶಿಸುವಂತೆ ಮಾಡಿವೆ. ಹಾಗಾಗಿ, ಆನೆಗಳನ್ನು ಅಥವಾ ಇತರೆ ಯಾವುದೇ ಪ್ರಾಣಿಗಳನ್ನು ಕಾಡಿನೊಳಗೇ ಇರುವಂತೆ ತಡೆಯಬೇಕೆಂದರೆ ಮುಖ್ಯವಾಗಿ ಕಾಡನ್ನು ಬೆಳೆಸಬೇಕು. ಅರಣ್ಯ ನಾಶವನ್ನು ತಡೆಯಬೇಕು. ವನ್ಯಜೀವಿಗಳಿಗೆ ಕಾಡಿನಲ್ಲಿಯೇ ಆಹಾರ ದೊರೆಯುವಂತೆ ಮಾಡಬೇಕು, ಆಗ ಮಾತ್ರ ಪ್ರಾಣಿಗಳು ನಾಡಿಗೆ ಪ್ರವೇಶಿಸುವದನ್ನು ನಿಲ್ಲಿಸುತ್ತವೆ ಮತ್ತು ಕಾಡಿನಲ್ಲಿಯೇ ವಾಸಿಸುತ್ತವೆ” ಎಂದು ಪ್ರಾಣಿ ತಜ್ಞರು, ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

Related Posts

Leave a Reply

Your email address will not be published.

How Can We Help You?