ಅಕ್ರಮ ವಲಸೆ ಏಜೆಂಟ್‌ಗಳ ಬಳಿ ಒತ್ತೆಯಾಳಾಗಿದ್ದ 15 ಜನರ ರಕ್ಷಣೆ

ಒಂದೂವರೆ ವರ್ಷದ ಬಾಲಕಿ ಸೇರಿದಂತೆ ಗುಜರಾತ್‌ನ 15 ನಿವಾಸಿಗಳನ್ನು ಅಕ್ರಮ ವಲಸೆ ಏಜೆಂಟ್‌ಗಳ ತಂಡವು ಕಳೆದ ಕೆಲವು ತಿಂಗಳುಗಳಿಂದ ಅಪಹರಿಸಿ, ಒತ್ತೆಯಾಳಾಗಿ ಇರಿಸಿಕೊಂಡು ಚಿತ್ರಹಿಂಸೆ ನೀಡುತ್ತಿತ್ತು. ಅವರೆಲ್ಲರನ್ನೂ ದೆಹಲಿಯಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಏಜೆಂಟ್‌ಗಳ ತಂಡವು ಅವರೆಲ್ಲರನ್ನೂ ವಿದೇಶಕ್ಕೆ ಕಳುಹಿಸುವ ನೆಪದಲ್ಲಿ ಕುಟುಂಬದವರಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಗುಜರಾತ್ ಪೊಲೀಸರು ಅಂತಹ ಒಬ್ಬ ಏಜೆಂಟ್ ಅನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಏಜೆಂಟ್‌ಗಳು ಒಂದೂವರೆ ವರ್ಷದ ಬಾಲಕಿ ಸೇರಿದಂತೆ ಹದಿನೈದು ಜನರನ್ನು ವಿದೇಶಕ್ಕೆ ಕಳುಹಿಸುವುದಾಗಿ ಭರವಸೆ ನೀಡಿ ಗುಜರಾತ್‌ನಿಂದ ಅಪಹಿರಿಸಿ, ಒತ್ತೆಯಾಳಾಗಿ ಇರಿಸಿಕೊಂಡು ಚಿತ್ರಹಿಂಸೆ ನೀಡಿದ್ದಾರೆ. ಮಾತ್ರವಲ್ಲದೆ, ಗುಜರಾತ್‌ನಲ್ಲಿರುವ ಅವರ ಕುಟುಂಬದವರಿಗೆ ಹಲವು ಬಾರಿ ಕರೆ ಮಾಡಿ, ವಿದೇಶಕ್ಕೆ ಕಳುಹಿಸಬೇಕೆಂದರೆ ಹೆಚ್ಚಿನ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಬಳಿಕ ಸಂತ್ರಸ್ತರು ದೆಹಲಿ ಪೊಲೀಸರ ವಿಶೇಷ ಸೆಲ್‌ನ ಸಹಾಯದಿಂದ ಪಾರಾಗಿದ್ದಾರೆ. ಅವರೆಲ್ಲರನ್ನೂ ದೆಹಲಿಯಿಂದ ಗುಜರಾತ್‌ಗೆ ಕರೆತರಲಾಗಿದೆ” ಎಂದು ಗುಜರಾತ್‌ನ ಗಾಂಧಿನಗರ ಪೊಲೀಸ್ ವರಿಷ್ಠಾಧಿಕಾರಿ ಮಯೂರ್ ಚಾವ್ಡಾ ತಿಳಿಸಿದ್ದಾರೆ.

ಏಜೆಂಟ್‌ಗಳ ಗ್ಯಾಂಗ್, ಮೊದಲು ಅವರನ್ನು ಮುಂಬೈಗೆ ಕರೆದೊಯ್ದಿದೆ. ನಂತರ, ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದು ಒತ್ತೆಯಾಳಾಗಿ ಇರಿಸಿಕೊಂಡು ಚಿತ್ರಹಿಂಸೆ ನೀಡಿದೆ ಮತ್ತು ವಿದೇಶಕ್ಕೆ ಕಳುಹಿಸಲು ಕುಟುಂಬ ಸದಸ್ಯರಿಂದ ಅಪಾರ ಪ್ರಮಾಣದ ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಚಾವ್ಡಾ ಮಾಹಿತಿ ನೀಡಿದ್ದಾರೆ.

ಗ್ಯಾಂಗ್‌ನ ಏಜೆಂಟ್‌ಗಳು ಪಶ್ಚಿಮ ಬಂಗಾಳದಲ್ಲಿ, ಸಂತ್ರಸ್ತರ ಕುಟುಂಬ ಸದಸ್ಯರಿಂದ ಹೆಚ್ಚಿನ ಹಣವನ್ನು ಪಡೆದ ನಂತರ, ಆ ಜನರನ್ನು ಒಬ್ಬೊಬ್ಬರಾಗಿ ದೆಹಲಿಗೆ ಕರೆದೊಯ್ದಿದ್ದಾರೆ. ಅಲ್ಲಿ, ಐವರನ್ನು ಮಾರಾಟ ಮಾಡಲು ಯೋಜಿಸಿದ್ದರು. ಹೀಗಾಗಿ ಪ್ರಕರಣವನ್ನು ಮಾನವ ಕಳ್ಳಸಾಗಣೆ ಆಯಾಮದಿಂದಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಚಾವ್ಡಾ ತಿಳಿಸಿದ್ದಾರೆ.

ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಮಾನಸ ದಂಪತಿಗಳು ಡಿಸೆಂಬರ್‌ನಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು ತಮ್ಮ ಮನೆ ತೊರೆದಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ಮಾಡುವಾಗ ಪೊಲೀಸರಿಗೆ ಈ 15 ಸಂತ್ರಸ್ತರ ಬಗ್ಗೆ ತಿಳಿದು ಬಂದಿದೆ ಎಂದು ಎಸ್‌ಪಿ ಹೇಳಿದ್ದಾರೆ.

“ನಮ್ಮ ಆದ್ಯತೆಯು ದಂಪತಿಗಳನ್ನು ಪತ್ತೆಹಚ್ಚುವುದಾಗಿತ್ತು. ಅದಕ್ಕಾಗಿ, ಸ್ಥಳೀಯ ಅಪರಾಧ ವಿಭಾಗದ ಪೋಲೀಸರ ಒಂದು ತಂಡ ಶನಿವಾರ ದೆಹಲಿಗೆ ಮತ್ತು ಇನ್ನೊಂದು ತಂಡ ಪಶ್ಚಿಮ ಬಂಗಾಳಕ್ಕೆ ದಂಪತಿಗಳನ್ನು ಪತ್ತೆಹಚ್ಚಲು ತೆರಳಿತು. ದಂಪತಿಗಳನ್ನು ಪತ್ತೆಹಚ್ಚಿದ ನಂತರ, ಕಳೆದ ವರ್ಷ ನವೆಂಬರ್‌ನಿಂದ 15 ಜನರು ಗ್ಯಾಂಗ್‌ಗೆ ಒತ್ತೆಯಾಳಾಗಿದ್ದಾರೆ ಎಂಬುದು ಗೊತ್ತಾಯಿತು” ಎಂದು ಚಾವ್ಡಾ ತಿಳಿಸಿದ್ದಾರೆ.

“ನಾವು ದೆಹಲಿ ಪೊಲೀಸರ ವಿಶೇಷ ಸೆಲ್‌ನ ಸಹಾಯವನ್ನು ಪಡೆದುಕೊಂಡೆವು. ಒಂದು ಮಗು, ಹಿರಿಯ ನಾಗರಿಕರು, ಪುರುಷರು ಮತ್ತು ಮಹಿಳೆಯರು ಸೇರಿದಂತೆ 15 ಜನರನ್ನು ಗ್ಯಾಂಗ್ ಒತ್ತೆಯಾಳಾಗಿ ಇರಿಸಿದೆ ಎಂದು ನಮಗೆ ಗೊತ್ತಾಯಿತು. ಸಂತ್ರಸ್ತರು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ತುಂಬಾ ತೊಂದರೆಗೀಡಾಗಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.

Related Posts

Leave a Reply

Your email address will not be published.

How Can We Help You?