ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ

ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ ಎಂದು ಪ್ರಸಿದ್ಧಿರಾದ ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ (93) ಅವರು ವಿಧಿವಶರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 93 ವರ್ಷದ ಚನ್ನವೀರ ಕಣವಿ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು. ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಜನವರಿ 14ರಂದು ದಾಖಲಿಸಲಾಗಿತ್ತು.

ಜೂನ್ 28,1928ರಂದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಚನ್ನವೀರ ಕಣವಿಯವರು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ಪ್ರಸರಣ ಮತ್ತು ಪ್ರಕಟಣಾ ವಿಭಾಗದ ಕಾರ್ಯದರ್ಶಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಭಾವಜೀವಿ, ಸಮನ್ವಯ ಕವಿ ಎಂದೇ ಅವರು ಖ್ಯಾತಿಗಳಿಸಿದ್ದಾರೆ.

1949ರಲ್ಲಿ ಡಾ. ಚನ್ನವೀರ ಕಣವಿ ಮೊದಲ ಕವಲ ಸಂಕಲನ ಕಾವ್ಯಾಕ್ಷಿ ಬಿಡುಗಡೆಗೊಂಡಿತು. ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಜೀವಧ್ವನಿ ಮುಂತಾದ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಂಪಿ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ನಾಡೋಜ ಚನ್ನವೀರ ಕಣವಿ ನಿಧನಕ್ಕೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.

Related Posts

Leave a Reply

Your email address will not be published.

How Can We Help You?