ಚಾಲೇಜಿಂಗ್ ಸ್ಟಾರ್ ದರ್ಶನರಿಂದ ಅಭಿಮಾನಿಗಳಿಗೆ ಹುಟ್ಟುಹಬ್ಬದ ಗಿಫ್ಟ್

ಚಾಲೇಜಿಂಗ್ ಸ್ಟಾರ್ ನಟ ದರ್ಶನ್ ಜನ್ಮದಿನದಂದು ಪ್ರತೀಬಾರಿ ಅವರ ಮುಂದಿನ ಚಿತ್ರಗಳ ಮೋಷನ್ ಪೋಸ್ಟರ್, ಟೀಸರ್ ಅಥವಾ ಟ್ರೈಲರ್ ಬಿಡುಗಡೆಯಾಗುವುದು ಸಹಜ. ಹಾಗಾಗಿ ದರ್ಶನ್ ಅಭಿಮಾನಿಗಳಿಗೆ ಫೆಬ್ರವರಿ 16 ವಿಶೇಷ ದಿನ.

ಇಂದು ನಟ ದರ್ಶನ್‌ರವರು 45ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇದರ ವಿಶೇಷ ಎಂಬಂತೆ ದರ್ಶನ್‌ರ 55ನೇ ಸಿನಿಮಾ ‘ಕ್ರಾಂತಿ’ಯ ಪ್ರಥಮ ಲುಕ್ ಟೀಸರ್ ಬಿಡುಗಡೆಯಾಗಿದೆ ಮತ್ತು ’ಡಿ56’ ಥೀಮ್ ಪೋಸ್ಟರ್ ರಿವೀಲ್ ಆಗಿದೆ.

‘ಕ್ರಾಂತಿ’ ಚಿತ್ರದ ಪ್ರಥಮ ಲುಕ್ ಟೀಸರ್‌ನಲ್ಲಿ ನಟ ದರ್ಶನ್ ತುಂಬ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಅವರ ಕನ್ನಡ ಪ್ರೇಮ ಮತ್ತು ಶಾಲೆ ಮೇಲಿನ ಗೌರವವನ್ನು ನೋಡಬಹುದು. ನಟ ದರ್ಶನ್‌ಗೆ ನಾಯಕಿಯಾಗಿ ‘ಬುಲ್ ಬುಲ್’ ಬೆಡಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರಕ್ಕೆ ವಿ. ಹರಿಕೃಷ್ಣರ ನಿರ್ದೇಶನ ಮತ್ತು ಸಂಗೀತ ಸಂಯೋಜನೆ ಇದೆ. ಸಿನಿಮಾವನ್ನು ಬಿ. ಸುರೇಶ್ ಮತ್ತು ಶೈಲಜಾ ನಾಗ್ ನಿರ್ಮಿಸುತ್ತಿದ್ದಾರೆ.

ನಟ ದರ್ಶನ್, ಹರಿಕೃಷ್ಣ ಮತ್ತು ನಿರ್ಮಾಪಕರಾದ ಬಿ. ಸುರೇಶ್, ಶೈಲಜಾ ನಾಗ್ ಅವರ ಕಾಂಬಿನೇಷನ್‌ನಲ್ಲಿ ಈಗಾಗಲೇ ‘ಯಜಮಾನ’ ಸಿನಿಮಾ ಅದ್ಭುತವಾಗಿ ಮೂಡಿಬಂದಿದ್ದು, ದೊಡ್ಡ ಯಶಸ್ಸು ಕಂಡಿತ್ತು. ಅದೇ ಹಾದಿಯಲ್ಲಿ ‘ಕ್ರಾಂತಿ’ ಚಿತ್ರ ಕೂಡ ಬರಲಿದೆ ಎಂದು ಚಿತ್ರತಂಡ ಬಯಸುತ್ತಿದೆ.

ಇಷ್ಟೇ ಅಲ್ಲದೇ ನಟ ದರ್ಶನ್ ರ ಮತ್ತೊಂದು ಚಿತ್ರ ‘ಡಿ56’ನ ಥೀಮ್ ಪೋಸ್ಟರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಥೀಮ್‌ನಲ್ಲಿ ‘ಹಿಂದಿರೋವ್ರಿಗೆ ದಾರಿ , ಮುಂದಿರೋವೃದ್ದು ಜವಾಬ್ದಾರಿ…” ಎಂಬ ಪವರ್ ಫುಲ್ ಸಾಲುಗಳನ್ನೂ ನೋಡಬಹುದು. ಪೋಸ್ಟರ್‌ನಲ್ಲಿ ಒಂದು ದೊಡ್ಡ ನಾಯಿ ಮತ್ತು ಹಿಂದೆ ಇನ್ನಷ್ಟು ಪ್ರಾಣಿಗಳನ್ನು ತೋರಿಸಲಾಗಿದೆ. ಚಿತ್ರಕ್ಕೆ ತರುಣ್ ಕಿಶೋರ್ ಸುಧೀರ್ ನಿರ್ದೇಶನವಿದೆ. ಈ ಸಿನಿಮಾವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಿಸಲಿದ್ದಾರೆ ಎಂದು ಪೋಸ್ಟರ್‌ನಲ್ಲಿ ತಿಳಿಸಲಾಗಿದೆ.

Related Posts

Leave a Reply

Your email address will not be published.

How Can We Help You?