ಬೆಂಗಳೂರಿನಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆ: 90 ಎಲೆಕ್ಟ್ರಿಕ್ ಬಸ್‌ಗಳಲ್ಲಿ 30 ಮಾತ್ರ ಸಂಚಾರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಳೆದ ವರ್ಷ 90 ಎಲೆಕ್ಟ್ರಿಕ್ ಬಸ್‌ಗಳನ್ನು ಪಡೆದಿತ್ತು. ಅವುಗಳಲ್ಲಿ ಯಶವಂತಪುರ ಮತ್ತು ಕೆಆರ್ ಪುರಂನ ಡಿಪೋಗಳಲ್ಲಿ ಚಾರ್ಜಿಂಗ್ ಸೌಲಭ್ಯದ ಕೊರತೆಯಿಂದಾಗಿ 30 ಬಸ್ಸುಗಳು ಮಾತ್ರ ಸಂಚರಿಸುತ್ತಿವೆ ಎಂದು ವರದಿಯಾಗಿದೆ.

ಕೆಂಗೇರಿ ಡಿಪೋದಲ್ಲಿ ಚಾರ್ಜಿಂಗ್ ಸೌಲಭ್ಯ ಸಿದ್ಧವಾಗಿದ್ದು, ಮಾರ್ಚ್ ಮೊದಲ ವಾರದ ವೇಳೆಗೆ ಇತರೆ ಡಿಪೋಗಳಲ್ಲಿ ಸೌಲಭ್ಯ ಲಭ್ಯವಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ತಿಂಗಳೊಳಗೆ ಎಲ್ಲಾ ಬಸ್‌ಗಳನ್ನು ಓಡಿಸುವ ಭರವಸೆ ಇದೆ. ಪ್ರತಿ ಡಿಪೋದಿಂದ 30 ಬಸ್‌ಗಳು ಕಾರ್ಯನಿರ್ವಹಿಸಲಿದ್ದು, ಸದ್ಯಕ್ಕೆ ಕೆಂಗೇರಿ ಡಿಪೋದಿಂದ ಇ-ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಎನ್‌ಟಿಪಿಸಿ ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಎಂಟಿಸಿ ಸಂಸ್ಥೆಯು ಎಲೆಕ್ಟ್ರಿಕ್ ಬಸ್ ಗಾಗಿ ಕಿಲೋಮೀಟರ್‌ಗೆ 65 ರೂಪಾಯಿ ಖರ್ಚು ಮಾಡುತ್ತದೆ ಮತ್ತು ಪ್ರತಿ ಕಿಲೋಮೀಟರ್‌ಗೆ ಕೇವಲ ರೂ. 25 ಮಾತ್ರ ಗಳಿಸುತ್ತದೆ. ಪ್ರಸ್ತುತ ಡೀಸೆಲ್ ಬಸ್‌ಗೆ ಕಿಲೋಮೀಟರ್‌ಗೆ ರೂ. 60 ಖರ್ಚಾಗುತ್ತಿದೆ. ನಾವು ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುವುದರಿಂದ ಯಾವುದೇ ಲಾಭ ಗಳಿಸುತ್ತಿಲ್ಲ. ಮೂಲ ಸೌಕರ್ಯಗಳು ಜಾರಿಗೆ ಬಂದ ನಂತರ ಮತ್ತು ಸವಾರರು ಹೆಚ್ಚಾದಾಗ, ನಾವು ಲಾಭವನ್ನು ಪಡೆಯುತ್ತೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಎಮ್ 2 ಎಮ್ ಮಾಧ್ಯಮವು ಬಿಎಮ್‌ಟಿಸಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಜಿತ್ ರವರನ್ನು ಮಾತನಾಡಿಸಿದಾಗ, “ಸದ್ಯ 30 ಬಸ್ ಮಾತ್ರ ಓಡಾಡುತ್ತಿದೆ. ಉಳಿದ ಬಸ್ಸುಗಳು ಕೆಂಗೇರಿಯಲ್ಲಿ ಚಾಲನೆಗೆ ಸಿದ್ಧತೆ ನಡೆಸುತ್ತಿದೆ. ಎಲ್ಲಾ ಬಸ್ಸುಗಳಿಗೆ ಚಾರ್ಜ್ ಸೌಲಭ್ಯವಿಲ್ಲದ ಕಾರಣ ರಸ್ತೆಗೆ ಇಳಿಸಿಲ್ಲ, ಇದೀಗ ಚಾರ್ಜಿಂಗ್ ಸ್ಟೇಷನ್ ಮಾಡುತ್ತಿದ್ದೇವೆ. ಮುಂದಿನ ತಿಂಗಳಲ್ಲಿ ಸರಿಯಾಗಬಹುದು” ಎಂದಿದ್ದಾರೆ.

ಬಿಎಂಟಿಸಿ ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಎನ್‌ಟಿಪಿಸಿ ವೈಪರ್ ವಿದ್ಯುತ್ ನಿಗಮವು ರೂ. 51.67/ ಕಿಮೀ ಒಟ್ಟು ವೆಚ್ಚದ ಒಪ್ಪಂದದ (GCC) ದರದಲ್ಲಿ 10 ವರ್ಷಗಳ ಅವಧಿಗೆ ಪ್ರತಿದಿನ 180 ಕಿಲೋಮೀಟರ್‌ಗಳಿಗೆ ವಿದ್ಯುಚ್ಛಕ್ತಿಯನ್ನು ಖಾತರಿಪಡಿಸಿದೆ. ಬಸ್ ಒಂದು ಸಲ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಹೆಚ್ಚುವರಿ 60 ಕಿಮೀ ಓಡಲು ಬನಶಂಕರಿ, ಯಲಹಂಕ ಮತ್ತು ಬಿಟಿಎಂ ಲೇಔಟ್ ಬಸ್ ನಿಲ್ದಾಣಗಳಲ್ಲಿ 45 ನಿಮಿಷಗಳ ಚಾರ್ಜಿಂಗ್ ಸಮಯವನ್ನು (ಅಲ್ಪ ಅವಧಿಗೆ ಚಾರ್ಜಿಂಗ್) ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.

ಬಸ್ಸು ಹೊತ್ತಿ ಉರಿದ ಘಟನೆಗೆ ಕಾರಣವೇನು?

ಕಳೆದ ಜನವರಿ 21 ಹಾಗೂ ಫೆ. 2 ರಂದು ಬಿಎಂಟಿಸಿ ಬಸ್ ಹೊತ್ತಿ ಉರಿದ ಘಟನೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಎಲೆಕ್ಟ್ರಿಕ್ ಬಸ್ ಹೊತ್ತಿ ಉರಿದಿದೆ ಎಂಬ ಸುದ್ದಿ ಹರಡಿತ್ತು. ಬಸ್ ಹೊತ್ತಿ ಉರಿದ ಬಗ್ಗೆ ಜನರು ಭಯಭೀತರಾಗಿದ್ದರು. ಇದರ ಬಗ್ಗೆ ಅಜಿತ್ ಅವರಲ್ಲಿ ಪ್ರಶ್ನಿಸಿದಾಗ, ಹೊತ್ತಿ ಉರಿದ ಬಸ್ಸು ಎಲೆಕ್ಟ್ರಿಕ್ ಬಸ್ ಆಗಿರಲಿಲ್ಲ. ಅದು ಸುಳ್ಳು ಸುದ್ದಿ. ಅದು ಡೀಸೆಲ್ ಬಸ್ ಆಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

Related Posts

Leave a Reply

Your email address will not be published.

How Can We Help You?