ಕಳವು ಯತ್ನ ಪ್ರಕರಣ : ಪೊಲೀಸರ ವಿಚಾರಣೆ ಎದುರಿಸುತ್ತಿದ್ದ ಯುವಕ ಸಾವು

ಕಳವು ಯತ್ನಕ್ಕೆ ಸಂಬಂಧಿಸಿದಂತೆ ಪೆÇಲೀಸರ ವಿಚಾರಣೆ ಎದುರಿಸುತ್ತಿದ್ದ ಯುವಕನೊಬ್ಬ ಸಾವಿಗೀಡಾದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ. ಉರ್ವ ಮಾರಿಗುಡಿ ಬಳಿಯ ನಿವಾಸಿ ರಾಜೇಶ್ ಕುಮಾರ್ (32) ಮೃತ ಯುವಕ.
ಶುಕ್ರವಾರ ಮುಂಜಾನೆ ನಗರದ ಜ್ಯೋತಿ ಸಮೀಪ ರಾಜೇಶ್ ಕುಮಾರ್ ಮತ್ತು ಇನ್ನೋರ್ವ ಯುವಕ ಸುರತ್ಕಲ್ ಸಮೀಪದ ರೈಲ್ವೆ ಕ್ವಾರ್ಟ್ರಸ್ನ ಸತೀಶ್ (35) ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು. ಗಸ್ತು ನಿರತ ಪೊಲೀಸರು ಸಂಶಯದ ಮೇಲೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಮಾರ್ಟ್ ಸಿಟಿ ಕಾಮಗಾರಿಗೆ ಸಂಬಂಧಿಸಿ ಬಳಸಲಾಗುತ್ತಿರುವ ಕಬ್ಬಿಣದ ಸರಳುಗಳನ್ನು ಕಳವು ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು ಎನ್ನಲಾಗಿದ್ದು, ಅದರಂತೆ ಪೊಲೀಸರು ತಕ್ಷಣ ಇಬ್ಬರನ್ನೂ ಬಂದರು ಠಾಣೆಗೆ ಕರೆದೊಯ್ದಿದ್ದರು. ಮಧ್ಯಾಹ್ನದ ಬಳಿಕ ಪೊಲೀಸರ ವಶದಲ್ಲಿದ್ದ ರಾಜೇಶ್ ಸಾವಿಗೀಡಾಗಿದ್ದು, ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ”ರಾಜೇಶ್ ತನ್ನ ಸ್ನೇಹಿತನ ಜೊತೆ ಶುಕ್ರವಾರ ಮುಂಜಾನೆ 3:30ಕ್ಕೆ ನಗರದ ಜ್ಯೋತಿಯ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಈ ಸಂದರ್ಭ ಆರೋಪಿಗಳು ತಾವು ಕುಡಿತದ ಚಟ ಹೊಂದಿದ್ದು, ಕುಡಿತಕ್ಕಾಗಿ ಹಣಹೊಂದಿಸಲು ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಇಟ್ಟಿದ್ದ ಕಬ್ಬಿಣದ ಸರಳುಗಳನ್ನು ಕಳವು ಮಾಡಲು ಯತ್ನಿಸುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಗಳನ್ನು ಬಂದರು ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಲಾಗಿದೆ. ಅಲ್ಲದೆ ಊಟ, ತಿಂಡಿಯನ್ನು ನೀಡಲಾಗಿದೆ. ಮಧ್ಯಾಹ್ನ 3:20ರ ವೇಳೆಗೆ ರಾಜೇಶ್ ಎಂಬಾತನಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆತನನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಆತ ಸಾವಿಗೀಡಾಗಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಪೊಲೀಸರ ವಶದಲ್ಲಿರುವಾಗಲೇ ಯುವಕ ಸಾವಿಗೀಡಾಗಿರುವ ಬಗ್ಗೆ ಮನೆ ಮಂದಿ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ನಡೆಸಲು ಒತ್ತಾಯಿಸಿದ್ದಾರೆ.