ಏರುಗತಿಯಲ್ಲಿರುವ ಸಿರಿವಂತರ ಸಂಖ್ಯೆ; ಆರ್ಥಿಕ ಅಸಮತೋಲನದ ಸೂಚಕವೇ?

ಕನಿಷ್ಠ ರೂ. 7 ಕೋಟಿ ನಿವ್ವಳ ಮೌಲ್ಯದ ಸಂಪತ್ತು ಹೊಂದಿರುವ ಕುಟುಂಬಗಳ ಸಮೀಕ್ಷೆ ಮಾಡಿರುವ ಐಐಎಫ್‌ಎಲ್‌ ವೆಲ್ತ್ ಹರುನ್ ಇಂಡಿಯಾ 2021ನೇ ಸಾಲಿನ ದೇಶದ ಮಿಲಿಯನೇರ್ ಕುಟುಂಬಗಳ ಪಟ್ಟಿ ಪ್ರಕಟಿಸಿದೆ.

ಈ ಪೈಕಿ ಭಾರತದ ಪ್ರಮುಖ ವಾಣಿಜ್ಯ ನಗರಿ ಮುಂಬೈ ನಗರದಲ್ಲಿ 20,300 ಮಿಲಿಯನೇರ್ ಕುಟುಂಬಗಳಿದ್ದು, ಇದು ದೇಶದ ಮಿಲಿಯನೇರ್ಗಳ ರಾಜಧಾನಿಯಾಗಿದೆ. ನಂತರದ ಸ್ಥಾನದಲ್ಲಿ ದೆಹಲಿ ಮತ್ತು ಕೋಲ್ಕತ್ತಾ ನಗರಳಲ್ಲಿ ಕ್ರಮವಾಗಿದ್ದು 17,400 ಮತ್ತು 10,500 ಮಿಲಿಯನೇರ್ ಕುಟುಂಬಗಳಿದ್ದು, ದೆಹಲಿ 167 ಸಿರಿವಂತರು ಈ ಪಟ್ಟಿಯಲ್ಲಿದ್ದಾರೆ.

ಆರ್ಥಿಕ ತಜ್ಞ ಟಿ. ಆರ್‌ ಚಂದ್ರಶೇಖರ್ ಎಂಟುಎಂ ನೆಟ್‌ವರ್ಕ್‌ನೊಂದಿಗೆ ಮಾತನಾಡಿ, ಬಂಡವಾಳಷಾಹಿಗಳ ಸಂಖ್ಯೆಯಲ್ಲಿನ ಏರಿಕೆ ಸಮಾಜದಲ್ಲಿ ಆರ್ಥಿಕ ಅಸಮತೋಲನ ಸೃಷ್ಟಿಸುತ್ತದೆ. ಬಡವರು ಕಡು ಬಡತನ ಎದುರಿಸಿದರೆ, ಶ್ರೀಮಂತರು ದುಪ್ಪಟ್ಟು ಸಿರಿವಂತಿಕೆ ಅನುಭವಿಸುವಂತಾಗಿದೆ. ಆರ್ಥಿಕ ಅಸಮತೋಲನ ಕಡಿಮೆ ಮಾಡುವ ನಿಟ್ಟಿನಲ್ಲಿ ಸಂವಿಧಾನದ ವಿಧಿ 38, 39 ರನ್ವಯ ಸರ್ಕಾರ ಸಂವಿಧಾನಾತ್ಮಕ ಕ್ರಮಕ್ಕೆ ಮುಂದಾಗಬೇಕು ಎಂದರು. ಇದು ಸರ್ಕಾರದ ಜವಾಬ್ದಾರಿ. ಅತಿ ಶ್ರೀಮಂತರ ಸಂಖ್ಯೆಯಲ್ಲಿ ಹೆಚ್ಚಳ ವರದಿ ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ವರದಿಯನ್ವಯ 2020 ವರ್ಷದಿಂದ 2021ರ ಅವಧಿಯಲ್ಲಿ ಕೋಟ್ಯಧಿಪತಿ ಕುಟುಂಬಗಳ ಸಂಪತ್ತು ಶೇ.11 ರಷ್ಟು ಅಧಿಕವಾಗಿದೆ. ಐಷಾರಾಮಿ ಗ್ರಾಹಕರ ಈ ಸಮೀಕ್ಷೆಯಲ್ಲಿ ಪಾವತಿ ವಿಧಾನವನ್ನೂ ಪರಿಗಣಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತೀಯ “ಡಾಲರ್-ಮಿಲಿಯನೇರ್” ಕುಟುಂಬಗಳ ಸಂಖ್ಯೆ ಶೇ.30ರಷ್ಟು ಹೆಚ್ಚಾಗಲಿದ್ದು, 2026 ರ ವೇಳೆಗೆ ಕೋಟ್ಯಧಿಪತಿ ಕುಟುಂಬಗಳ ಸಂಖ್ಯೆ 6 ಲಕ್ಷಕ್ಕೆ ಏರಲಿದೆ ಎಂದು ವರದಿ ತಿಳಿಸಿದೆ.

ದೆಹಲಿಯ ಅಗ್ರ ಐದು ಶ್ರೀಮಂತ ಕುಟುಂಬಗಳ ಪೈಕಿ ಮೊದಲ ಸ್ಥಾನದಲ್ಲಿ ಒಟ್ಟು ರೂ. 2,36,300 ಕೋಟಿ ಸಂಪತ್ತು ಹೊಂದಿರುವ ಶಿವನಾಡರ್ ಕುಟುಂಬ, ದೆಹಲಿಯ ಅತ್ಯಂತ ಶ್ರೀಮಂತ ಕುಟುಂಬವಾಗಿದೆ. ಇವರು ಎಚ್ ಸಿಎಲ್‌ ಕಂಪನಿ ಅನ್ನು ಹೊಂದಿದ್ದು, ಪ್ರಸಕ್ತ ವರ್ಷ ಇವರ ಮೌಲ್ಯ ಶೇ. 67 ರಷ್ಟು ಹೆಚ್ಚಿದೆ.

“ಏಷ್ಯಾದ ದೊಡ್ಡ ಶ್ರೀಮಂತ ಗೌತಮ್‌ ಅದಾನಿ ಕೋವಿಡ್‌ ಸಾಂಕ್ರಾಮಿಕ ಸನ್ನಿವೇಶದಲ್ಲಿ8 ಪಟ್ಟು ಅಧಿಕ ಆದಾಯ ಗಳಿಸುತ್ತಾರೆ. ನಂತರದ ಸ್ಥಾನದಲ್ಲಿರುವ ಉದ್ಯಮಿ ಮುಖೇಶ್‌ ಅಂಬಾನಿಯ ಆಸ್ತಿ ಕರ್ನಾಟಕ ರಾಜ್ಯದ ವಾರ್ಷಿಕ ಬಜೆಟ್‌ ನ ಮೂರು ಪಟ್ಟರಷ್ಟು ವಿಸ್ತರಿಸಿದೆ ಎಂದರೆ ಸರ್ಕಾರದ ನೀತಿಗಳು ಯಾವ ರೀತಿ ಇವೆ ಹಾಗೂ ಸಂವಿಧಾನಿಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ ಎಂಬುದನ್ನು ಇದು ತೋರಿಸುತ್ತದೆ” ಎಂದು ಟಿ. ಆರ್‌ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಡಾಬರ್ ಇಂಡಿಯಾದ ಮಾಲೀಕ ಆನಂದ್ ಬರ್ಮನ್, ವಿಸಿ ಬರ್ಮನ್, ಅಮಿತ್ ಬರ್ಮನ್, ಪ್ರದೀಪ್ ಬರ್ಮನ್ ಮತ್ತು ಕುಟುಂಬ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರ ಬಳಿ 74,400 ಕೋಟಿ ರೂ. ಸಂಪತ್ತು ಇದೆ. ಭಾರ್ತಿ ಏರ್ಟೆಲ್ ಸಮೂಹದ ಸುನಿಲ್ ಮಿತ್ತಲ್, ರಾಜನ್ ಮಿತ್ತಲ್, ರಾಕೇಶ್ ಮಿತ್ತಲ್ ಮತ್ತು ಕುಟುಂಬ ಮೂರನೇ ಸ್ಥಾನದಲ್ಲಿದ್ದು, 73,800 ಕೋಟಿ ರೂ. ಸಂಪತ್ತು ಹೊಂದಿದ್ದಾರೆ.

ಡಿಎಲ್ಎಫ್ ನ ಮಾಲೀಕರಾದ ರಾಜೀವ್ ಸಿಂಗ್, ರೇಣುಕಾ ತಲ್ವಾರ್, ಪಿಯಾ ಸಿಂಗ್ ಮತ್ತು ಕುಟುಂಬದವರು ನಾಲ್ಕನೇ ಸ್ಥಾನ ಪಡೆದಿದ್ದು, 65,900 ಕೋಟಿ ಮೌಲ್ಯದ ಸಂಪತ್ತು ಇದೆ.

ಬರ್ಗರ್ ಪೇಂಟ್ಸ್ನ ಗುರ್ಬಚನ್ ಸಿಂಗ್ ಧಿಂಗ್ರಾ, ಕುಲದೀಪ್ ಸಿಂಗ್ ಧಿಂಗ್ರಾ ಮತ್ತು ಕುಟುಂಬ ಐದನೇ ಸ್ಥಾನದಲ್ಲಿದ್ದು, ಇವರಿಗೆ 60,400 ಕೋಟಿ ರೂ. ಸಂಪತ್ತಿದೆ.

ಶೇ.36 ರಷ್ಟು ಧನಿಕರು ಇ ವ್ಯಾಲೆಟ್‌, ಯುಪಿಐ ಮೂಲಕ ಪಾವತಿ ಮಾಡುತ್ತಾರೆ. 2020 ರ ಅವಧಿಯಲ್ಲಿ ಇದು ಶೇ. 18 ರಷ್ಟಿತ್ತು. ಸಮೀಕ್ಷೆಗೊಳಪಟ್ಟ ಕುಟುಂಬಗಳ ಪೈಕಿ ಮೂರನೇ ಒಂದರಷ್ಟು ಅತ್ಯಧಿಕ ಶ್ರೀಮಂತರಿದ್ದಾರೆ. ಇವರ ಪೈಕಿ ಶೇ.70 ರಷ್ಟು ಜನ ತಮ್ಮ ಮಕ್ಕಳನ್ನು ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಕಳಿಸುವ ಆಶಯ ಹೊಂದಿದ್ದಾರೆ. ಇವರಲ್ಲಿ ರಿಯಲ್‌ ಎಸ್ಟೇಟ್‌ ಹಾಗೂ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ಹೊಂದಿದ್ದಾರೆ.

Related Posts

Leave a Reply

Your email address will not be published.

How Can We Help You?