ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ : ಮಂಗಳೂರಿನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ

ಕರಾವಳಿ ಭಾಗದ ಜೀವನಾಡಿ ಶಿರಾಡಿ ಘಾಟಿಯಲ್ಲಿ 14,000 ಕೋ.ರೂ. ವೆಚ್ಚದ ಸುರಂಗ ಮಾರ್ಗ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಸಿಕ್ಕ ಕೂಡಲೇ ಚಾಲನೆ ನೀಡಲಾಗು ವುದು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಸಹಿತ ಏಳು ಜಿಲ್ಲೆಗಳಿಗೆ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿಗಳ ವಿವಿಧ ಕಾಮಗಾರಿಗಳಿಗೆ ಮಂಗಳೂರಿನಲ್ಲಿ ಸೋಮವಾರ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು. ಶಿರಾಡಿ ಘಾಟಿಯಲ್ಲಿ ಈಗಾ ಗಲೇ 26 ಕಿ.ಮೀ. ಚತುಷ್ಪಥ ಯೋಜ ನೆಗೆ ಅನುಮೋದನೆ ನೀಡಲಾಗಿದೆ. ಜತೆಗೆ ಸುರಂಗ ಮಾರ್ಗ ಯೋಜನೆಯೂ ಇದ್ದು, ತಜ್ಞರು ಈಗಾಗಲೇ ಅಧ್ಯಯನ ನಡೆಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಯನ್ನು ಶೀಘ್ರ ದೊರಕಿಸಿ ಕೊಡಬೇಕು ಎಂದರು.
ಯಾವುದೇ ರಿಂಗ್ ರೋಡ್ ನಿರ್ಮಾಣ ಯೋಜನೆಗೆ ಈ ಹಿಂದೆ ಭೂಸ್ವಾಧೀನ ವೆಚ್ಚದ ಶೇ. 50ರಷ್ಟು ಭಾಗವನ್ನು ರಾಜ್ಯ ಸರಕಾರ ಭರಿಸಬೇಕಿತ್ತು. ಈಗ ವೆಚ್ಚದ ಶೇ. 25ರಷ್ಟು ಭಾಗವನ್ನು ರಾಜ್ಯ ಭರಿಸಿದರೆ ಸಾಕಾಗುತ್ತದೆ. ಅದೇ ರೀತಿ ರಾಯಲ್ಟಿ ಮತ್ತು ನಿರ್ಮಾಣ ಸಾಮಗ್ರಿಗಳ ಜಿಎಸ್ಟಿಯಲ್ಲೂ ರಿಯಾಯತಿ ನೀಡಲಾಗುವುದು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾ. ಹೆದ್ದಾರಿಗಳ ಪಕ್ಕದಲ್ಲಿ ನೀರಿನ ಮೂಲಗಳನ್ನು ಸಂರಕ್ಷಿಸಿ ಇದರ ಲಾಭವನ್ನು ರೈತರಿಗೆ ದೊರಕಿಸಿಕೊಡುವ ಜಲಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ಬಗ್ಗೆ ಸದ್ಯದಲ್ಲೇ ಸರಕಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಿಂಗ್ ರೋಡ್ಗಳಿಗೆ ಭೂಸ್ವಾಧೀನದ ಶೇ. 25ರಷ್ಟು ಮಾತ್ರ ನೀಡುವ ಹಾಗೂ ಜಿಎಸ್ಟಿ ಮತ್ತು ರಾಯಲ್ಟಿ ರಿಯಾಯತಿ ನೀಡುವ ಕೇಂದ್ರ ಸರಕಾರದ ಹೊಸ ನಿಯಮಗಳಂತೆ ಯೋಜನೆಗಳಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಇದರಲ್ಲಿ ಮಂಗಳೂರು ಬೈಪಾಸ್ ರಸ್ತೆ ಯೋಜನೆ ಕೂಡ ಸೇರಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಲೋಕೋಪಯೋಗಿ ಖಾತೆ ಸಚಿವ ಸಿ.ಸಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಚಿವರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಬಿ.ವೈ. ರಾಘವೇಂದ್ರ, ಮುನಿಸ್ವಾಮಿ, ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಹರೀಶ್ ಪೂಂಜ, ಲಾಲಾಜಿ ಮೆಂಡನ್, ಉಮಾನಾಥ ಕೋಟ್ಯಾನ್, ರಾಜೇಶ್ ನಾಕ್, ರೂಪಾಲಿ ಸಂತೋಷ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ಸಿಂಹ ನಾಯಕ್, ಮಂಜುನಾಥ ಭಂಡಾರಿ, ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.