ನೀವು ಕೊಡುವ ಗುಲಾಬಿ ಹೂ ಹಿಡಿದು ಏನು ಮಾಡಲಿ: ಉಕ್ರೇನ್‌ನಿಂದ ವಾಪಸಾದ ವಿದ್ಯಾರ್ಥಿಯಿಂದ ಕೇಂದ್ರಕ್ಕೆ ಪ್ರಶ್ನೆ

ನವದೆಹಲಿ: ಉಕ್ರೇನ್ ವಿಚಾರವಾಗಿ ಒಂದೆಡೆ ಕೆಲವು ಮಾಧ್ಯಮಗಳು ಕೇಂದ್ರ ಸರಕಾರದ ಸಾಧನೆ ಬಣ್ಣಿಸುತ್ತಿದ್ದರೆ, ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆ ವ್ಯಕ್ತಪಡಿಸುತ್ತಿದ್ದಾರೆ.

ಭಾರತಕ್ಕೆ ತಲುಪಿದ ಬಳಿಕ ನಮಗೆ ಗುಲಾಬಿ ಹೂ ನೀಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಉಕ್ರೇನ್‌ನಿಂದ ಭಾರತಕ್ಕೆ ತಲುಪಿದ ಬಿಹಾರದ ವಿದ್ಯಾರ್ಥಿ ದಿವ್ಯಾಂಶ ಸಿಂಗ್ ಎಂಬ ವಿದ್ಯಾರ್ಥಿ ಎನ್‌ಡಿಟಿವಿ ಜೊತೆಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹಂಗೇರಿ ಗಡಿ ದಾಟಿದ ಬಳಿಕವೇ ನಮಗೆ ನೆರವು ಲಭಿಸಿದೆ. ಅದಕ್ಕಿಂತ ಮೊದಲು ಭಾರತೀಯ ರಾಯಭಾರ ಕಚೇರಿಯಿಂದ ಯಾವ ಸಹಾಯವೂ ಲಭಿಸಿಲ್ಲ. ನಾವು ಸ್ವಯಂ ಶ್ರಮವಹಿಸಿ ಗಡಿಗೆ ತಲುಪಿದ್ದೇವೆ. ಹತ್ತು ಮಂದಿಯ ಗುಂಪಾಗಿತ್ತು ನಮ್ಮದು. ಅಲ್ಲಿಯ ಜನರೇ ನಮಗೆ ಸಹಾಯ ನೀಡಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಪೋಲೆಂಡ್ ಗಡಿಯಲ್ಲಿ ಸಮಸ್ಯೆ ಉಂಟಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿ. ಅಮೆರಿಕಕ್ಕೆ ಮೊದಲೇ ಮಾಹಿತಿ ಇದ್ದಿದ್ದರಿಂದ ಅವರು ವಿದ್ಯಾರ್ಥಿಗಳನ್ನು ಕೂಡಲೇ ಕರೆಸಿಕೊಂಡಿತ್ತು. ಕೇಂದ್ರ ಸರ್ಕಾರವೇ ಕ್ಷಿಪ್ರವಾಗಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದರೆ, ಇವ್ಯಾವುವೂ ಸಂಭವಿಸುತ್ತಲೇ ಇರಲಿಲ್ಲ” ಎಂದವರು ಆಕ್ರೋಶದಿಂದ ಹೇಳಿದ್ದು, ಸದ್ಯ ದೇಶಾದ್ಯಂತ ಚರ್ಚೆಗೆ ವೇದಿಕೆಯೊದಗಿಸಿದೆ.

“ನಾವೀಗ ಭಾರತಕ್ಕೆ ತಲುಪಿದ್ದೇವೆ. ಇನ್ನು ನೀವು ಗುಲಾಬಿ ಹೂವು ಕೊಟ್ಟು ಏನು ಪ್ರಯೋಜನ? ನಮಗೇನಾದರೂ ಸಂಭವಿಸಿರುತ್ತಿದ್ದರೆ ಈ ಹೂವಿನಿಂದ ಏನು ಪ್ರಯೋಜನವಾಗುತ್ತಿತ್ತು” ಎಂದು ದಿವ್ಯಾಂಶು ಪ್ರಶ್ನಿಸಿದ್ದಾರೆ. ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿ ಸ್ವಾಗತಿಸಿದ ಕೇಂದ್ರ ಸಚಿವರಿಗೆ ಪ್ರತಿಕ್ರಿಯೆಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ.

ಇನ್ನೊಂದೆಡೆ ಹಂಗೇರಿ ಗಡಿ ಮೂಲಕ ದೆಹಲಿಗೆ ತಲುಪಿದ ಬೆಂಗಳೂರು ಮೂಲದ ವಿದ್ಯಾರ್ಥಿ ಅನೀಶ್ ಜಯಂತ್ ಅವರ ತಂದೆ ಹನುಮಂತಯ್ಯ ಟಿವಿ ಚಾನೆಲ್‌ಗಳಿಗೆ ಪ್ರತಿಕ್ರಿಯಿಸುತ್ತಾ, ಸಂಸದ ತೇಜಸ್ವಿ ಸೂರ್ಯ ವಿರುದ್ಧ ಬಹಿರಂಗವಾಗಿ ಕಿಡಿಗಾರಿದ್ದಾರೆ. “ನಮ್ಮ ಸಂಸದರು ಎಂಬ ನೆಲೆಯಲ್ಲಿ ತೇಜಸ್ವಿ ಸೂರ್ಯರಿಗೆ ಸಂದೇಶ ಕಳುಹಿಸಿದ್ದೆ. ಆದರೆ, ಅದಕ್ಕೆ ಈವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ. ಫೋನ್ ಮಾಡಿದರೆ ಸ್ವೀಕರಿಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೀಶ್ ಜಯಂತ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, “ಇವರು ಕೇವಲ ಪ್ರದರ್ಶನ ಮಾಡುತ್ತಿದ್ದಾರೆ” ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

“ಕೇಂದ್ರ ಸರ್ಕಾರ ಉಕ್ರೇನ್‌ನಲ್ಲಿ ಏನೂ ನೆರವು ನೀಡುತ್ತಿಲ್ಲ. ಉಕ್ರೇನ್‌ಗೆ ಕಾಲು ಕೂಡ ಇಡುತ್ತಿಲ್ಲ. ಗಡಿ ತಲುಪಿರುವ ವಿದ್ಯಾರ್ಥಿಗಳನ್ನು ಮಾತ್ರ ದೇಶಕ್ಕೆ ಮರಳಿ ಕರೆ ತರಲಾಗುತ್ತಿದೆ. ಗಡಿಗೆ ಬರಲಾಗದೇ ಇರುವ ವಿದ್ಯಾರ್ಥಿಗಳನ್ನು ಅಲ್ಲೇ ಸಾಯಿರಿ ಎಂದು ನಿರ್ಲಕ್ಷ್ಯ ವಹಿಸುತ್ತಿದೆ” ಎಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕ ಅನೀಶ್ ಜಯಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಕಾರೆಸ್ಟ್‌ನಿಂದ ಭಾರತೀಯ ವಾಯುಪಡೆಯ ಮೂಲಕ ಭಾರತಕ್ಕೆ ತಲುಪಿದ ವಿದ್ಯಾರ್ಥಿಗಳ ಪೈಕಿ ಒಬ್ಬರು, “ಸರ್ಕಾರವು ಕಾರ್ಯಾಚರಣೆ ಮಾಡಿ ತಂದೆವು ಎಂದು ಹೇಳಬಾರದು. ಅವರು ನಮ್ಮನ್ನು ಸುರಕ್ಷಿತ ದೇಶವಾದ ರೊಮೇನಿಯಾದಿಂದ ಇಲ್ಲಿಗೆ ವಿಮಾನಗಳಲ್ಲಿ ಕರೆ ತಂದಿದ್ದಾರೆ ಅಷ್ಟೆ. ಇದನ್ನು ಕಾರ್ಯಾಚರಣೆ ಎಂದು ಹೇಗೆ ಹೇಳುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

Related Posts

Leave a Reply

Your email address will not be published.

How Can We Help You?