ಗುಂಡ್ಲುಪೇಟೆ ತಾಲೂಕಲ್ಲಿ ಕಲ್ಲು ಗಣಿಗಾರಿಕೆ ಕ್ವಾರಿ ಕುಸಿದು 10ಕ್ಕೂ ಅಧಿಕ ಮಂದಿ ದುರ್ಮರಣ

ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ವೇಳೆ ಕಲ್ಲುಗುಡ್ಡವೊಂದು ಕುಸಿದು ಬಿದ್ದು10ಕ್ಕೂ ಅಧಿಕ ಕಾರ್ಮಿಕರು ಸಾವನ್ನಪ್ಪಿದ ಘಟನೆ ಶುಕ್ರವಾರ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಸಮೀಪದ ಮಡಹಳ್ಳಿಯ ಗುಮ್ಮೇಕಲ್ಲುನಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೆಸಿಬಿ, ಹಿಟಾಚಿ, ಟಿಪ್ಪರ್ ಲಾರಿಗಳು, ಕುಸಿದ ಕಲ್ಲುಗುಡ್ಡೆಯಲ್ಲಿ ಸಿಲುಕಿಕೊಂಡಿವೆ.
ಗಣಿಗಾರಿಕೆ ವೇಳೆ ಆಕಸ್ಮಿಕವಾಗಿ ಭಾರಿ ಗಾತ್ರದ ಕಲ್ಲು ಬಂಡೆಗಳ ಗುಡ್ಡವೇ ಕುಸಿದು ಬಿದ್ದಿದ್ದು, ಹಲವು ವರ್ಷಗಳಿಂದ ಕೇರಳ ಮೂಲದ ಉದ್ಯಮಿ ಹಕೀಮ್ ಕ್ವಾರಿ ಎಂಬ ವ್ಯಕ್ತಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು, 50 ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅಪಾಯಕರ ರೀತಿಯಲ್ಲಿ 200ಕ್ಕೂ ಅಧಿಕ ಹೆಚ್ಚು ಅಡಿ ಆಳದಲ್ಲಿ ಜೆಸಿಬಿ, ಇಟಾಚಿ ಬಳಸಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿತ್ತು. ಕಲ್ಲು ಬಂಡೆ ಕುಸಿದ ಶಬ್ಧಕ್ಕೆ ಸುತ್ತಮುತ್ತಲ ಗ್ರಾಮಗಳ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕಲ್ಲು-ಮಣ್ಣಿನ ಅಡಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ನಡೆದಿದೆ. ಸ್ಥಳಕ್ಕೆ ಪೊಲೀಸ್ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಯಲು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎನ್ನಲಾಗಿದೆ.
ಹುಣಸೋಡು ಸ್ಪೋಟ ನೆನಪಿಸಿದ ಘಟನೆ : ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ 2019 ರ ಜನವರಿ 21 ರಂದು ರಾತ್ರಿ 10.30ಕ್ಕೆ ಎಸ್ಎಸ್ ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ನಿಲ್ಲಿಸಿದ ಲಾರಿ ಸ್ಫೋಟಗೊಂಡು 6 ಕ್ಕೂ ಅಧಿಕ ಜನ ಅಸುನೀಗಿದ್ದ ಘಟನೆ ಸಂಭವಿಸಿತ್ತು. ಗಣಿಗಾರಿಕೆಗೆ ಬಳಸುವ ಜಿಲೆಟಿನ್ನನ್ನು ಲಾರಿಯಲ್ಲಿ ತುಂಬಿಸಿದ್ದೇ ಸ್ಪೋಟಕ್ಕೆ ಕಾರಣವಾಗಿತ್ತು. ಈ ಭೀಕರ ದುರ್ಘಟನೆಯಲ್ಲಿ ಕೆಲ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟಿದ್ದರು. ಸ್ಫೋಟದ ಭೀಕರತೆಯಲ್ಲಿ ಲಾರಿಯ ಅಸ್ತಿಪಂಜರವಷ್ಟೇ ಇತ್ತು. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಚದುರಿ ಬಿದ್ದಿದ್ದವು. ಮೃತದೇಹ ಪತ್ತೆ ಅಸಾಧ್ಯವಾದ ಸ್ಥಿತಿ ಇತ್ತು. ಐವರ ಗುರುತು ಪತ್ತೆ ಮಾಡಿ, ವಾರಸುದಾರರಿಗೆ ಒಪ್ಪಿಸಲಾಗಿತ್ತು.
ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಭಾರೀ ಪ್ರಮಾಣದಲ್ಲಿ ಜಿಲೆಟೆನ್ ಹೇರಿದ ಲಾರಿ ತಲುಪಿತ್ತು. ಲಾರಿಯನ್ನು ನಿಲ್ಲಿಸಿ ಸಿಬ್ಬಂದಿ ಹಾಗೂ ಕಾರ್ಮಿಕರು ನಿದ್ರಿಸುತ್ತಿದಾಗ ಸ್ಫೋಟ ಸಂಭವಿಸಿತ್ತು. ಸ್ಫೋಟದಿಂದ ಭಾರೀ ಶಬ್ಬ ಕೇಳಿ ಬಂದಿತ್ತು. ಸ್ಫೋಟದ ಸದ್ದಿನಿಂದ ಜಿಲ್ಲೆಯ ಸುತ್ತಮುತ್ತಲ ಹಲವು ಗ್ರಾಮಗಳ ಜನರಿಗೆ ಭೂಕಂಪನದ ಅನುಭವವಾಗಿತ್ತು.
ಅಕ್ರಮ ಸ್ಪೋಟಕ ಸಂಗ್ರಹ: ಹುಣಸೋಡು ಸ್ಪೋಟದ ಪ್ರಕರಣದ ತನಿಖೆಗೆ ಎಎಸ್ಸಿ ತಂಡ ರಚಿಸಲಾಗಿತ್ತು. ಪೊಲೀಸರು ಹಾಗೂ ಎಎಸ್ಸಿ ತಂಡ ತನಿಖೆ ವೇಳೆ ಸ್ಫೋಟಗೊಂಡ ಜಾಗದಲ್ಲಿ 175 ಡಿಟೋನೇಟರ್ಗಳು ಪತ್ತೆಯಾಗಿದ್ದವು. ಹುಣಸೋಡು, ಗಟ್ಟೇನಹಳ್ಳಿಯ ತೆಂಗಿನ ತೋಟ ಹಾಗೂ ಘಟನೆಯಲ್ಲಿ ಮತಪಟ್ಟ ಪ್ರವೀಣನ ಮನೆಯಲ್ಲಿ ಸಿಕ್ಕ ಡಿಟೋನೇಟರ್ ಸೇರಿ ಒಟ್ಟು 616 ಡಿಟಿನೇಟರ್ನ್ನು ಎಎಸ್ಸಿ ತಂಡ ಪತ್ತೆ ಮಾಡಿತ್ತು. ಅಲ್ಲದೇ ಒಟ್ಟು 415 ಜಿಲೆಟಿನ್ ಪೇಸ್ಟ್ಗಳು ಪತ್ತೆಯಾಗಿದ್ದವು. ಇದನ್ನು ಆರೋಪಿಗಳು ಕಳೆದ ಅನೇಕ ವರ್ಷಗಳಿಂದ ದಾಸ್ತಾನು ಮಾಡಿಟ್ಟಿದ್ದು, ತಮ್ಮದೇ ನೆಟ್ವರ್ಕ್ ಮೂಲಕ ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದರು ಎಂಬುದು ತಿಳಿದು ಬಂದಿತ್ತು. ಆರೋಪಿಗಳು ಅಂಧ್ರಪ್ರದೇಶ ಮತ್ತಿತರ ಕಡೆಗಳಿಂದ ಅಕ್ರಮವಾಗಿ ಭಾರೀ ಪ್ರಮಾಣದಲ್ಲಿ ಸ್ಫೋಟಕ ತರಿಸಿ ಕ್ವಾರಿ ಹಾಗೂ ಕ್ರಷರ್ನವರಿಗೆ ಪೂರೈಕೆ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿತ್ತು.