ಕೆಎಸ್ಆರ್ಟಿಸಿ ಸ್ಕ್ರಾಪ್ ಬಸ್ ಸರ್ಕಾರಿ ಶಾಲೆಯ ಸ್ಮಾರ್ಟ್ ಕ್ಲಾಸ್! : ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಪ್ರಯೋಗ

ಇಂಗ್ಲೀಷ್ ಮಾಧ್ಯiಗಳ ಅಬ್ಬರಕ್ಕೆ ನಶಿಸಿ ಹೋಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಶಿಕ್ಷಣ ಇಲಾಖೆ, ಹಳೆ ವಿದ್ಯಾರ್ಥಿಗಳು ನಾನಾ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ತರಗತಿ ಕೋಣೆಯ ಬಾಗಿಲಿಗೆ ರೈಲು ಮತ್ತು ಬಸ್ಗಳ ತ್ರೀಡಿ ಪೇಂಟಿಂಗ್ಗಳನ್ನು ಮಾಡಿ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಆಕರ್ಷಿಸಿಕೊಳ್ಳುವುನ್ನು ಹಲವು ಕಡೆಗಳಲ್ಲಿ ಕಂಡಿದ್ದೇವೆ. ಆದರೆ ನಿಜವಾದ ಬಸ್ನೊಳಗೆ ತರಗತಿ ನಡೆಸಿದರೆ ಹೇಗೆ? ಎಸ್.. ಇಂತಹುದೊಂದು ವಿನೂತನ ಪ್ರಯತ್ನಕ್ಕೆ ಕುಂದಾಪುರದ ಬಗ್ವಾಡಿಯ ಸರ್ಕಾರಿ ಶಾಲೆ ಮುಂದಾಗಿದೆ. ಈ ಕುರಿತಾದ ಒಂದು ಸ್ಪೆಶಲ್ ಸ್ಟೋರಿ ಇಲ್ಲಿದೆ ನೋಡಿ.

ಎದುರು ನಿಂತು ನೋಡಿದರೆ ಪಕ್ಕಾ ಇದೊಂದು ಸರ್ಕಾರಿ ಬಸ್. ಕೊಂಚ ಆಚೆ-ಈಚೆ ಕಣ್ಣಾಯಿಸಿದರೆ ಕರಾವಳಿ ವಿಶೇಷತೆಗಳನ್ನು ಬಿಂಬಿಸುವ, ಶಿಕ್ಷಣ ಪದ್ದತಿ ಬದಲಾದ ಕುರಿತ ಚಿತ್ರಗಳು. ಅರೆ ಇದೇನಪ್ಪಾ ಎಂದು ಬಸ್ ಒಳಗೆ ಕಾಲಿಟ್ಟರೆ ಜ್ಙಾನದೇಗುಲದಂತೆ ನಮ್ಮನ್ನು ಸೆಳೆಯುವ ಡಿಜಿಟಲ್ ತರಗತಿ. ಹೌದು, ಇದು ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಆಟಿಕೆಯ ತದ್ರೂಪಿ ಕೆಎಸ್ಆರ್ಟಿಸಿ ಬಸ್ ಮಾದರಿ ತಯಾರಿಸಿ ಸಾರಿಗೆ ಸಚಿವರ ಗಮನ ಸೆಳೆದು, ಅವರಿಂದಲೇ ಸ್ಕ್ರಾಪ್ಗೆ ಸೇರುವ ಬಸ್ ಉಚಿತವಾಗಿ ಪಡೆದಿದ್ದ ಕುಂದಾಪುರ ತಾಲೂಕಿನ ಬಗ್ವಾಡಿಯ ಕಲಾವಿದ ಪ್ರಶಾಂತ್ ಆಚಾರ್ ಅವರ ಸರ್ಕಾರಿ ಶಾಲೆ ಉಳಿಸಿ ಅಭಿಯಾನದ ಸೆಕ್ಸಸ್ಫುಲ್ ಸ್ಟೋರಿ. ಸಚಿವರಿಂದ ಉಚಿತವಾಗಿ ಪಡೆದಿದ್ದ ಬಸ್ ಅನ್ನು ಮರು ವಿನ್ಯಾಸಗೊಳಿಸಿ ತಾವು ಕಲಿತ ಬಗ್ವಾಡಿ ಸರ್ಕಾರಿ ಶಾಲೆಯ ಸ್ಮಾರ್ಟ್ ತರಗತಿಯಾಗಿ ಬದಲಾಯಿಸಿದ್ದಾರೆ. ಬಗ್ವಾಡಿಯ ಈ ಹಳ್ಳಿಹೈದನ ಕನ್ನಡ ಶಾಲೆ ಉಳಿಸಿ ಅಭಿಯಾನ ಶಿಕ್ಷಣಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕೆಎಸ್ಆರ್ಟಿ ತದ್ರೂಪಿ ಬಸ್ ಮಾದರಿಗಳನ್ನು ರಚಿಸಿ ಸುದ್ದಿಯಾದ ಬಗ್ವಾಡಿ ನಿವಾಸಿಗಳಾದ ಪ್ರಶಾಂತ್ ಆಚಾರ್ ಹಾಗೂ ಅವರ ಸಹೋದರ ಪ್ರಕಾಶ್ ಆಚಾರ್ ನೇರವಾಗಿ ಸಾರಿಗೆ ಸಚಿವರನ್ನು ಭೇಟಿಯಾಗಿ ಸ್ಕ್ರಾಪ್ ಬಸ್ನಲ್ಲಿ ಸ್ಮಾರ್ಟ್ ತರಗತಿ ಮಾಡುವ ಕುರಿತು ಬೇಡಿಕೆ ಇಟ್ಟಿದ್ದರು. ಕಲಾವಿದನ ಬೇಡಿಕೆಗೆ ಸ್ಪಂದಿಸಿದ್ದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಕೇವಲ ಹದಿನೈದು ದಿನದೊಳಗೆ ಬಗ್ವಾಡಿ ಸರ್ಕಾರಿ ಶಾಲೆಗೆ ಕೆಎಸ್ಆರ್ಟಿಸಿ ಸ್ಕ್ರಾಪ್ ಬಸ್ ಅನ್ನು ಉಚಿತವಾಗಿ ನೀಡಿದ್ದರು. ಸ್ವತಃ ಕಲಾವಿದ ಪ್ರಶಾಂತ್ ಆಚಾರ್ ಹಾಗೂ ಅವರ ಸಹೋದರ ಪ್ರಕಾಶ್ ಆಚಾರ್ ಬಿಡುವಿನ ವೇಳೆಯಲ್ಲಿ ಕೆಎಸ್ಆರ್ಟಿಸಿ ಬಸ್ ಅನ್ನು ಸ್ಮಾರ್ಟ್ ತರಗತಿಯಾಗಿ ನವೀಕರಣಗೊಳಿಸಿ ಇದೀಗ ಬಸ್ಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಕೆಎಸ್ಆರ್ಟಿಸಿ ಬಸ್ ತರಗತಿಯಲ್ಲಿ ೨೫ ವಿದ್ಯಾರ್ಥಿಗಳು ಕೂತು ಕೇಳಬಹುದಾದ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಪ್ರಾಜೆಕ್ಟರ್ ವ್ಯವಸ್ಥೆ, ಬಸ್ ಒಳಗಿನ ಸುತ್ತಲಿನ ಬದಿಯ ಮೇಲ್ಬಾಗದ ಗಾಜಿಗೆ ಸುತ್ತಲೂ ಸ್ವಾತಂತ್ರ್ಯ ಹೋರಾಟಗಾರರ, ಸಮಾಜ ಸುಧಾರಕರ, ಸಾಹಿತಿಗಳ ಚಿತ್ರಗಳನ್ನು ಅಳವಡಿಸಲಾಗಿದೆ. ಬಸ್ನೊಳಗೆ ಗ್ರಂಥಾಲಯದ ವ್ಯವಸ್ಥೆ ಮಾಡಲಾಗಿದ್ದು, ಬಸ್ನೊಳಗಿರುವ ಚಿತ್ರಗಳಲ್ಲಿರುವವರ ಕುರಿತು ವಿದ್ಯಾರ್ಥಿಗಳಿಗೆ ಏನಾದರೂ ಪ್ರಶ್ನೆಗಳು, ಸಂದೇಹಗಳಿದ್ದರೆ ಅವರ ಕುರಿತಾದ ಪುಸ್ತಕಗಳನ್ನು ಇದೇ ಗ್ರಂಥಾಲಯದೊಳಗೆ ಇರಿಸಲಾಗಿದ್ದು ವಿದ್ಯಾರ್ಥಿಗಳು ಅದರಲ್ಲಿ ಉತ್ತರಗಳನ್ನು ಕಂಡುಕೊಳ್ಳಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕು ಫ್ಯಾನ್ಗಳನ್ನು ಅಳವಡಿಸಲಾಗಿದ್ದು, ಗಾಳಿಯ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ವಾಶ್ ಬೇಸಿನ್ ವ್ಯವಸ್ಥೆ ಇದೆ. ಇನ್ನು ಬಸ್ನ ಮುಂಭಾಗ ಅದರ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿದ್ದು, ಸ್ಟೇರಿಂಗ್ ಚಾಲಕರ ಸೀಟನ್ನು ಹಾಗೆಯೇ ಬಿಡಲಾಗಿದೆ. ಅಲ್ಲಿ ಉಳಿದ ಅಷ್ಟಿಟ್ಟು ಜಾಗವನ್ನು ಸ್ಟೋರೇಜ್ ಕೋಣೆಯಾಗಿ ಪರಿವರ್ತಿಸಿಕೊಳ್ಳಾಗಿದೆ. ಇದಕ್ಕೆ ಪ್ರಾಜೆಕ್ಟರ್ ಕೋಣೆಯಿಂದಲೇ ಬಾಗಿಲ ವ್ಯವಸ್ಥೆ ಮಾಡಿಕೊಡಲಾಗಿದೆ. ಬಸ್ನ ಹೊರಭಾಗದ ಒಂದು ಬದಿಯಲ್ಲಿ ಶಿಕ್ಷಣ ಪದ್ದತಿಯ ಕುರಿತು ಚಿತ್ರಗಳನ್ನು ರಚಿಸಲಾಗಿದೆ. ಇನ್ನೊಂದು ಬದಿಯಲ್ಲಿ ಕರಾವಳಿಯ ವಿಶೇಷ, ರಥೋತ್ಸವ, ಯಕ್ಷಗಾನ, ಕೋಲ ಮುಂತಾದ ಚಿತ್ರಗಳನ್ನು ಬಿಡಿಸಲಾಗಿದೆ. ಹೊರಗಿನ ಮೇಲ್ಭಾಗದ ಬದಿಯ ಗಾಜಿನ ಮೇಲೆ ಪ್ರಶಾಂತ್ ಆಚಾರ್ ತಯಾರಿದ ಬಸ್ ಮಾದರಿ, ಸಚಿವರನ್ನು, ಅಧಿಕಾರಿಗಳನ್ನು ಭೇಟಿಯಾದ ಹಾಗೂ ಪತ್ರಿಕೆಯಲ್ಲಿ ಬಂದ ವರದಿಗಳ ಚಿತ್ರಗಳನ್ನು ಅಂಟಿಸಲಾಗಿದೆ. ಬಸ್ ಹೇಗೆ ಬಗ್ವಾಡಿಗೆ ಬಂತು ಎನ್ನುವುದು ಸಂಪೂರ್ಣ ಚಿತ್ರಣವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಶತಮಾನದ ಹೊಸ್ತಿಲಲ್ಲಿರುವ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಕುರಿತು ಕಾರ್ಯಪ್ರವೃತ್ತರಾದ ಆಚಾರ್ ಸಹೋದರರು ವಿದ್ಯಾರ್ಥಿಗಳನ್ನು ತಾವು ಕಲಿತ ಸರ್ಕಾರಿ ಶಾಲೆಗೆ ಆಕರ್ಷಿಸಲು ಒಂದಿಲ್ಲೊಂದು ವಿನೂತ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ಆಚಾರ್ ಸಹೋದರರ ಈ ಹೊಸ ಕಲ್ಪನೆಗೆ ಹಳೆ ವಿದ್ಯಾರ್ಥಿಗಳು, ಊರ ದಾನಿಗಳು, ಶಿಕ್ಷಣ ಪ್ರೇಮಿಗಳು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಫ್ಲೈವುಡ್ ಕೆಲಸ, ಮ್ಯಾಟ್ ಜೋಡಣೆ ಬಹುತೇಕ ಕೆಲಸಗಳನ್ನು ಆಚಾರ್ ಸಹೋದರರಿಬ್ಬರೆ ಉಚಿತವಾಗಿ ಕೆಲಸ ಮಾಡಿದ್ದರಿಂದ ಸ್ಮಾರ್ಟ್ ತರಗತಿಗೆ ಒಟ್ಟು ಎರಡು ಲಕ್ಷದ ವರೆಗೆ ಖರ್ಚಾಗಿದೆ.
ವಿನೂತನ ಮಾದರಿಯ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಶನಿವಾರ ನಡೆಯಲಿದೆ. ಉಸ್ತುವಾರಿ ಸಚಿವ ಎಸ್ ಅಂಗಾರ ಬಸ್ ಅನ್ನು ಉದ್ಘಾಟಿಸಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಮಾರ್ಟ್ ತರಗತಿ ಉದ್ಘಾಟಿಸಲಿದ್ದು, ಶಾಸಕ ಬಿಎಮ್ ಸುಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಗ್ರಂಥಾಲಯ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಕ್ಲಾಡಿ ಗ್ರಾ.ಪಂ ಅಧ್ಯಕ್ಷ ಚೇತನ್ ಕುಮಾರ್, ಕೆಎಸ್ಆರ್ಟಿಸಿ ವ್ಯವಸ್ಥಾಪನಾ ನಿರ್ದೇಶಕ ಶಿವಯೋಗಿ ಸಿ ಕಳಸದ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗೋವಿಂದ ಮಡಿವಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನಿ ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಬಗ್ವಾಡಿ ಹಳ್ಳಿಹೈದನ ಪ್ರತಿಭೆಯ ಕುರಿತು ದೃಶ್ಯಮಾಧ್ಯಮದಲ್ಲಿ ಮೊತ್ತಮೊದಲು ವಿ೪ ವಾಹಿನಿ ವಿಶೇಷ ವರದಿ ಭಿತ್ತರಿಸಿ ಕಲಾವಿದ ಪ್ರಶಾಂತ್ ಆಚಾರ್ ಅವರನ್ನು ಹುರಿದುಂಬಿಸಿತ್ತು. ಗ್ರಾಮೀಣ ಭಾಗದ ಕಡು ಬಡವರ ಮನೆಯ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಹವಾನಿಯಂತ್ರಿತ ರೂಮ್ನೊಳಗೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯಲ್ಲಿ ಕೂತು ಪಾಠ ಕೇಳುವುದನ್ನು ನೋಡುವುದು ಆಚಾರ್ ಸಹೋದರರ ಮುಂದಿನ ಗುರಿ. ದಾನಿಗಳು ಕೈಜೋಡಿಸಿದರೆ ಇದೇ ಬಸ್ನೊಳಗೆ ಎಸಿ ಜೋಡಣೆ ಮಾಡಿ ಹೈಟೆಕ್ ತರಗತಿಯಾಗಿ ಮಾರ್ಪಡಿಸುವ ಯೋಜನೆ ಹಾಗೂ ಯೋಚನೆಯಲ್ಲಿದ್ದಾರೆ. ಆಚಾರ್ ಸಹೋದರರ ಈ ವಿನೂತನ ಕಲ್ಪನೆಗಳಿಗೆ ಬಣ್ಣ ತುಂಬುವ ಕಾಯಕ ದಾನಿಗಳು ಮಾಡಬೇಕಿದೆಯಷ್ಟೇ.