ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಬೈಂದೂರಿನಲ್ಲಿ ಪರಿಸರ ರಕ್ಷಿಸಿ – ಜೀವನ ಉಳಿಸಿ ಅಭಿಯಾನ

ಕೃಷಿ ಮತ್ತು ಸಾಮಾನ್ಯ ಜನ ಜೀವನಕ್ಕೆ ಪೂರಕವಾಗಿರುವ ಅರಣ್ಯ ಭೂಮಿಯನ್ನು ಕೈಗಾರಿಕೆಗೆ ನೀಡುವುದು ಸೂಕ್ತವಲ್ಲ, ಕೈಗಾರಿಕೆಗೆಂದು ಅರಣ್ಯ ನಾಶ ಮಾಡುವುದರಿಂದ ಪ್ರಕೃತಿ ನಾಶದೊಂದಿಗೆ ಜನರ ನಿತ್ಯ ಜೀವನದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಬರಡು ಭೂಮಿಯನ್ನು ಕೈಗಾರಿಕೆಗೆ ಬಳಸಿಕೊಳ್ಳಲು ಯೋಜನೆ ರೂಪಿಸಬೇಕು ಎಂದು ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಎಲ್. ವಿ. ಅಮೀನ್ ಹೇಳಿದರು.ಹಳಗೇರಿಯ 53 ಎಕರೆ ದಟ್ಟ ಅರಣ್ಯ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಕಾದಿರಿಸಿರುವುದನ್ನು ಖಂಡಿಸಿ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ, ವನದುರ್ಗ ರೈತ ಶಕ್ತಿ ಗುಂಪು ಮತ್ತು ಹಳಗೇರಿ ಪರಿಸರ ಹಿತರಕ್ಷಣಾ ವೇದಿಕೆಯ ಸಹಯೋಗದಲ್ಲಿ ಗುರುವಾರ ನಾಗೂರಿನ ಮಹಾಲಸಾ ಕಲ್ಚರರ್ ಹಾಲ್ ನಲ್ಲಿ ನಡೆದ ಪರಿಸರ ರಕ್ಷಿಸಿ – ಜೀವನ ಉಳಿಸಿ ಅಭಿಯಾನ ಮತ್ತು ಬೃಹತ್ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನವಸತಿ ಇಲ್ಲದ ಪ್ರದೇಶ ಬಳಸಿ
ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಮಾತನಾಡಿ, ನಮಗೆ ಅರಣ್ಯವೂ ಬೇಕು, ಕೈಗಾರಿಕೆಯೂ ಬೇಕು; ಆದರೆ ಜನರ ಜೀವನಕ್ಕೆ ಸಮಸ್ಯೆಯನ್ನು ಉಂಟು ಮಾಡುವ ಪ್ರದೇಶದಲ್ಲಿ ಕೈಗಾರಿಕೆ ಸರಿಯಲ್ಲ. ಬೈಂದೂರಿನಲ್ಲಿ ಜನವಸತಿ ಇಲ್ಲದ ಜಾಗಗಳಿದ್ದು ಅಲ್ಲಿ ಕೈಗಾರಿಕೆಯನ್ನು ಪ್ರಾರಂಭಿಸಲು ನಮ್ಮ ಬೆಂಬಲ ಇರುತ್ತದೆ ಎಂದರು.

ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟಿಯಾನ್ ಮಾತನಾಡಿ, ಕೈಗಾರಿಕೆಗೆ ನಮ್ಮ ವಿರೋಧ ಇಲ್ಲ. ಜನರಿಗೆ ತೊಂದರೆಯಾದಾಗ ನ್ಯಾಯ ಒದಗಿಸಲು ಹೋರಾಟ ನಡೆಸುವುದೇ ನಮ್ಮ ಗುರಿ; ಅದರಲ್ಲಿ ಯಶಸ್ವಿಯೂ ಆಗಿದ್ದೇವೆ ಎಂದರು.’ಖಂಬದಕೋಣೆ ಗ್ರಾ.ಪಂ. ಅಧ್ಯಕ್ಷ ಸುಕೇಶ ಶೆಟ್ಟಿ ಮಾತನಾಡಿ, ಗ್ರಾ. ಪಂ. ನ ಗಮನಕ್ಕೆ ತರದೇ ಅಧಿಕಾರಿಗಳು ಈ ಪ್ರದೇಶವನ್ನು ಕೈಗಾರಿಕೆಗೆ ಕೊಟ್ಟಿದ್ದಾರೆ. ಇದಕ್ಕೆ ಎಲ್ಲ ಸದಸ್ಯರು ಸಂಪೂರ್ಣ ವಿರೋಧ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿಸಿದರು.

ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಅಖಿಕ ಭಾರತ ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಕ. ರಾ. ವೈ. ಸಂ., ಉಡುಪಿ ಜಿಲ್ಲಾಧ್ಯಕ್ಷ ಡಾ| ಸುಬ್ರಮಣ್ಯ ಭಟ್, ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಮುಂಬಯಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಹಿರಿಯಡ್ಕ ಮೋಹನ ದಾಸ್, ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯಾನ್, ಕಿರಿಮಂಜೇಶ್ವರ ಗ್ರಾ.ಪಂ.ಮಾಜಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಸದಸ್ಯ ಈಶ್ವರ ದೇವಾಡಿಗ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ನರಸಿಂಹ ಹಳಗೇರಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಉದಯ ಕುಮಾರ್ ಶೆಟ್ಟಿ ಅರಣ್ಯ ಪ್ರದೇಶದಲ್ಲಿ ಕೈಗಾರಿಕೆ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದರು.

ಹಳಗೇರಿ ಪರಿಸರ ಹಿತರಕ್ಷಣಾ ವೇದಿಕೆ ಪ್ರಮುಖ ಹೋರಾಟಗಾರ ನಳಿನ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ವನದುರ್ಗ ರೈತಶಕ್ತಿ ಗುಂಪು ಸಂಯೋಜಕ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯಾನ್ ವಂದಿಸಿದರುಅಗತ್ಯ ಬಿದ್ದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಸಭೆ ತೀರ್ಮಾನಿಸಿತು.

Related Posts

Leave a Reply

Your email address will not be published.

How Can We Help You?