ಕೇಂದ್ರ ವೇತನ ಆಯೋಗ ಜಾರಿ ಹಾಗೂ ಹೊಸ ಪಿಂಚಣಿ ಯೋಜನೆ ರದ್ದತಿ ಆದಲ್ಲಿ ಸರಕಾರಿ ನೌಕರರು ಇನ್ನೂ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಿದೆ : ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ

ಬಂಟ್ವಾಳ: ಸರಕಾರಿ ನೌಕರರ ಸಂಘದ ಪ್ರಮುಖ ಬೇಡಿಕೆಯಾದ ಕೇಂದ್ರ ವೇತನ ಆಯೋಗ ಜಾರಿ ಹಾಗೂ ಹೊಸ ಪಿಂಚಣಿ ಯೋಜನೆ ರದ್ದತಿ ಆದಲ್ಲಿ ಸರಕಾರಿ ನೌಕರರು ಇನ್ನೂ ಉತ್ತಮವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಿದೆ ಎಂದು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.

ಅವರು ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಈ ಬಗ್ಗೆ ಇಂದಿನ ಅಧಿವೇಶನದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾತನಾಡಿದ್ದಾರೆ. ಮುಖಮಂತ್ರಿಯವರು ಸ್ಪಂದಿಸುವ ಭರವಸೆ ಇದೆ, ಆದ್ದರಿಂದ ಈ ಬಾರಿ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ಸಿಗಬಹುದು ಎನ್ನುವ ವಿಶ್ವಾಸ ಇದೆ ಎಂದರು. ದೇಶದ 25 ರಾಜ್ಯಗಳಲ್ಲಿ ಈಗಾಗಲೇ ಕೇಂದ್ರ ಮಾದರಿಯಲ್ಲಿ ವೇತನ ಪಾವತಿಯಾಗುತ್ತಿದೆ, ಆದ್ದರಿಂದ ನಾವು ಕೇಳುವುದು ನಮ್ಮ ಹಕ್ಕು ಎಂದರು.
ಸರಕಾರಿ ನೌಕರರ ಪರಿಶ್ರಮದಿಂದ ಜಿಎಸ್‍ಟಿ ಸಂಗ್ರಹದಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಅಭಿವೃದ್ಧಿಯಲ್ಲಿ ಕರ್ನಾಟಕ 6 ನೇ ಸ್ಥಾನದಲ್ಲಿದೆ. 2.6 ಲಕ್ಷ ಹುದ್ದೆಗಳು ಖಾಲಿ ಇದ್ದು ಸಂಕಷ್ಟ ಸಮಯದಲ್ಲೂ ಉತ್ತಮವಾದ ಸೇವೆಯನ್ನು ರಾಜ್ಯದ ಸರಕಾರಿ ನೌಕರರು ನೀಡುತ್ತಿದ್ದಾರೆ ಎಂದರು.

C.S. Shadakshri
C.S. Shadakshri

ನೆರೆ ಹಾಗೂ ಕೋವಿಡ್ ಬಂದ ಸಂದರ್ಭದಲ್ಲಿ ರಾಜ್ಯರ ಸರಕಾರಿ ನೌಕರರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ತಮ್ಮ ಬೇಡಿಕೆಗಳ ಜೊತೆ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಎಂದರು. 87 ಇಲಾಖೆಗಳ 6 ಲಕ್ಷ ನೌಕರರಿರುವ ಬೃಹತ್ ಸಂಘಟನೆಯಾಗಿರುವ ಸರಕಾರಿ ನೌಕರರ ಸಂಘ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಶ್ರೀನಿವಾಸ್, ಬಸವರಾಜ್, ಸುಬ್ರಹ್ಮಣ್ಯ ಸೇರಿಗಾರ್, ದಿನಕರ್ ಶೆಟ್ಟಿ, ಷೆರ್ಲಿ ಸುಮಾಲಿನಿ, ಶಿವಪ್ರಸಾದ್ ಶೆಟ್ಟಿ, ವಿಮಲ್ ನೆಲ್ಯಾಡಿ, ಬಂಟ್ವಾಳ ಸಮಿತಿಯ ಅಧ್ಯಕ್ಷ ಉಮನಾಥ ರೈ, ಕಾರ್ಯದರ್ಶಿ ಸಂತೋಷ್ ಕುಮಾರ್ ತುಂಬೆ ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?