ಪುತ್ತೂರಿನಲ್ಲಿ ಭಜನಾ ಮಂದಿರ ವಿಚಾರವಾಗಿ ಹಲ್ಲೆ : ಆರೋಪಿಗಳನ್ನು ತಕ್ಷಣವೇ ಬಂಧಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ

ಪುತ್ತೂರು : ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕದಲ್ಲಿನ ಶ್ರೀ ಮಹಾಲಕ್ಷಿ ಭಜನಾ ಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ವಯಸ್ಸಿನ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಹಾಗೂ ಅವರಿಗೆ ಕುಮ್ಮುಕ್ಕು ನೀಡಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ವಿಶ್ವಕರ್ಮ ಯುವ ಮಿಲನ್ ಸ್ಥಾಪಕಾಧ್ಯಕ್ಷ ವಿಕ್ರಮ.ಐ.ಆಚಾರ್ಯ ಎಚ್ಚರಿಸಿದ್ದಾರೆ.

ಅವರು ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಿರಿಯ ಮಹಿಳೆಗೆ ಈ ರೀತಿಯಾಗಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯವಾಗಿದೆ. ವಿಶ್ವಕರ್ಮ ಸಮಾಜದವರಿಗೆ ನಿರಂತರ ಅನ್ಯಾಯ, ನಿಂದನೆಯಾಗುತ್ತಿದ್ದರೂ ನಮ್ಮ ಸಮಸ್ಯೆಗೆ ಸ್ಪಂದಿಸಲು ಯಾರೂ ಮುಂದೆ ಬರುತ್ತಿಲ್ಲ. ಭಜನಾ ಮಂದಿರದ ಜಾಗದ ವಿಚಾರದಲ್ಲಿ ನಮ್ಮ ಸಮಾಜ ಸಂಘಟನೆಗಳು ಕೈಹಾಕುವುದಿಲ್ಲ. ಸಂಬಂಧಪಟ್ಟವರೇ ಅದನ್ನು ನೋಡಿಕೊಳ್ಳುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯ ನೀಡುವ ತೀರ್ಮಾನಕ್ಕೆ ನಾವು ಬದ್ಧ ಎಂದು ಅವರು ತಿಳಿಸಿದರು.
ಹಲ್ಲೆಗೊಳಗಾದ ಸರೋಜಿನಿ ಆಚಾರ್ಯ ಅವರ ಪುತ್ರ ನಾಗರಾಜ್ ಅವರು ಮಾತನಾಡಿ, 1950ರಲ್ಲಿ ನಮ್ಮ ತಂದೆಯವರು ದೊಡ್ಡಡ್ಕಕ್ಕೆ ಬಂದು ನೆಲೆಸಿದ್ದು, ನಮ್ಮ ಮನೆದೇವರನ್ನು ಮನೆಯಂಗಳದಲ್ಲಿ ಪೂಜಿಸುತ್ತಿದ್ದರು. ಈ ನಡುವೆ 1994ರಲ್ಲಿ ತನ್ನ ತಂದೆ ಕೊಗ್ಗು ಆಚಾರ್ಯ ಅವರೇ ಗೌರವಾಧ್ಯಕ್ಷರಾಗಿದ್ದುಕೊಂಡು ಊರಿನವರನ್ನು ಸೇರಿಸಿಕೊಂಡು ಭಜನಾ ಮಂದಿರ ನಿರ್ಮಿಸಿದ್ದು, 1996ರಲ್ಲಿ ಈ ಭಜನಾ ಮಂದಿರವನ್ನೊಳಗೊಂಡು ಒಟ್ಟು 1.65 ಎಕ್ರೆ ಜಾಗ ಅವರ ಹೆಸರಿಗೆ ಅಕ್ರಮಸಕ್ರಮದಡಿ ಮಂಜೂರುಗೊಂಡಿತ್ತು. ನಮ್ಮ ಜಾಗದಲ್ಲಿರುವ ಭಜನಾ ಮಂದಿರ ಊರಿಗೆ ಸೇರಿದ್ದಲ್ಲ. ಆದರೆ ಇದೀಗ ಊರಿನ ಕೆಲವರು ಸೇರಿಕೊಂಡು ಈ ರೀತಿಯ ತಗಾದೆ ಆರಂಭಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಯುವ ಮಿಲನ್ ಅಧ್ಯಕ್ಷ ಸೂರಜ್.ಟಿ, ವಿಶ್ವ ಬ್ರಾಹ್ಮಣ ಸೇವಾ ಸಂಘದ ತಾಲೂಕು ಉಪಾಧ್ಯಕ್ಷ ಭುಜಂಗ ಆಚಾರ್ಯ, ವಿಶ್ವಕರ್ಮ ಮಹಿಳಾ ಮಂಡಳಿಯ ತಾಲೂಕು ಕಾರ್ಯದರ್ಶಿ ಇಂದಿರಾ ಪುರುಷೋತ್ತಮ್, ವಿಶ್ವ ಬ್ರಾಹ್ಮಣ ಸೇವಾ ಸಂಘದ ತಾಲೂಕು ಕಾರ್ಯದರ್ಶಿ ಶ್ರೀಧರ್, ವಿಶ್ವಕರ್ಮ ಯುವ ಮಿಲನ್ ತಾಲೂಕು ಅಧ್ಯಕ್ಷ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?