ಅಳಿವಿನಂಚಿನಲ್ಲಿರುವ ನಾಗಲಿಂಗ ವೃಕ್ಷ ಬೆಳೆಸಿ ವಿತರಿಸುವ ಕಾಯಕ

ಅಳಿವಿನಂಚಿನಲ್ಲಿರುವ ಸುಗಂಧ ಭರಿತ ನಾಗಲಿಂಗ ವೃಕ್ಷ ಬೆಳೆಸಿ ವಿತರಿಸುವ ಮೂಲಕ ನಿಡ್ಡೋಡಿಯ ಯುವಕ ವಿನೆಶ್ ಪೂಜಾರಿ ಅವರು ಮಾದರಿಯಾಗಿದ್ದಾರೆ. ಅಪೂರ್ವವಾಗಿರುವ ಈ ವೃಕ್ಷ ಸಂತತಿ ಉಳಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಈ ಕಾಯಕಕ್ಕೆ ವಿನೀಶ್ ಪೂಜಾರಿ ಮುಂದಾಗಿದ್ದಾರೆ.

ವಿರಳವಾಗಿ ಕಾಣಸಿಗುವ ಶಿವಪೂಜೆಗೆ ಪವಿತ್ರ ಎಂದು ನಂಬಲ್ಪಡುವ ಅಲಂಕಾರಿಕವಾಗಿ ಬಳಕೆಯಾಗುವ ನಾಗಲಿಂಗ ಪುಷ್ಪವನ್ನು ಮಲ್ಲಿಕಾರ್ಜುನ ಪುಷ್ಪ ಶಿವಲಿಂಗ ಪುಷ್ಪ ಎಂದೆಲ್ಲಾ ಕರೆಯುತ್ತಾರೆ. ನಾಗಲಿಂಗ ವೃಕ್ಷ ಬೀಜ ಸಂಗ್ರಹಿಸಿ ತಮ್ಮ ಮನೆಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಬೆಳೆಸಿದ್ದಾರೆ. ಅಪೂರ್ವವಾಗಿರುವ ಈ ವೃಕ್ಷ ಸಂತತಿ ಉಳಿಸಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಮುಂದಾಗಿರುವ ವಿನೀಶ್ ಈ ವರೆಗೆ ಎರಡೂ ಸಾವಿರಕ್ಕೂ ಅಧಿಕ ಗಿಡ ಬೆಳೆಸಿದ್ದಾರೆ. ಕೆಲವು ತಿಂಗಳಿಂದ ಸಂಘ ಸಂಸ್ಥೆಗಳು, ದೇವಸ್ಥಾನ ಮತ್ತು ಅಗತ್ಯವಿದ್ದವರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಪಡುಬಿದ್ರಿಯ ಖಡ್ಗೇಶ್ವರಿ, ಕಾರ್ಕಳ ಉಮಾಮಹೇಶ್ವರಿ, ಮುಚ್ಚೂರು ಕಾನ, ಮುಚ್ಚೂರು ಆದಿಸ್ಥಳ, ಸಿದ್ಧಕಟ್ಟೆ ನಾಗಬನ, ಕಾರಿಂಜ ಮತ್ತಿತ್ತರ ದೇವಸ್ಥಾನಗಳಿಗೆ ಗಿಡ ನೀಡಿದ್ದಾರೆ. ನಾಗಲಿಂಗ ವೃಕ್ಷ ಗಿಡ ಬೇಕು ಎಂದು ಬೇಡಿಕೆಯಿರುವ ಪ್ರದೇಶಕ್ಕೆ ತೆರಳಿ ತಾವೇ ನೆಟ್ಟು ಬರುತ್ತಾರೆ. ಎಲ್ಲ ದೇವಸ್ಥಾನಗಳಲ್ಲಿ ನಾಗಲಿಂಗ ವೃಕ್ಷ ಇರಬೇಕು ಎಂಬ ಆಸೆ ವಿನೀಶ್ರದ್ದು. ಹಲವರು ಈ ವೃಕ್ಷ ನೋಡಲು ಇವರ ಮನೆಗೆ ಭೇಟಿ ನೀಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ನಾಗಲಿಂಗ ಗಿಡ ಬೆಳೆಸುತ್ತಿರುವ ಯುವಕ ವಿನೀಶ್ ಪೂಜಾರಿ ಅವರು, ಅತಿ ವಿರಳವಾಗಿ ಸಿಗುವ ಈ ವೃಕ್ಷವನ್ನು ಬೆಳೆಸುವ ಹವ್ಯಾಸ ಬೆಳೆಸಿಕೊಂಡಿದ್ದೇನೆ. ಅಗತ್ಯ ಇರುವವರಿಗೆ ಉಚಿತವಾಗಿ ನೀಡುತ್ತಿದ್ದೇಮೆ ಈ ವರೆಗೆ ನೂರಕ್ಕೂ ಅಧಿಕ ಸಸಿ ವಿತರಿಸಿದ್ದೇನೆ ಎಂದು ಹೇಳಿದರು.

ದಕ್ಷಿಣ ಅಮೆರಿಕದ ಉಷ್ಣ ವಲಯದ ಕಾಡಿನಲ್ಲಿ ಹೆಚ್ಚಾಗಿರುವ ಈ ಮರ ಸುಮಾರು 120 ಅಡಿಯಷ್ಟು ಎತ್ತರ ಬೆಳೆಯುತ್ತದೆ. ನೆಟ್ಟು ನಾಲ್ಕು ವರ್ಷದ ಬಳಿಕ ಶಿವಲಿಂಗದ ಮೇಲೆ ನಾಗರ ಹೆಡೆಯಂತಿರುವ ಹೂ ಬಿಡಲು ಆರಂಭವಾಗುತ್ತದೆ. ಈ ಹೂವನ್ನು ಸುಗಂಧ ದ್ರವ್ಯ, ಅಯುರ್ವೇದ ಔಷಧ ಪದ್ಧತಿಯಲ್ಲಿ ಬಳಸಲಾಗುತ್ತದೆ. ಹೊಟ್ಟೆನೋವು, ಚರ್ಮರೋಗಗಳಿಗೆ ರಾಮಭಾಣ ನಾಗಲಿಂಗ ಗಿಡ ಬೇಕಾದವರು ವಿನೀಶ್ ಪೂಜಾರಿ ಅವರ 8748870759 / 8197322911 ಸಂಪರ್ಕಿಸಬಹುದು.