ಬಾವನ ಸಹೋದರನ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದ ವೇಳೆ ಕೆಎಸ್ಆರ್ ಟಿಸಿ ಬಸ್ ಢಿಕ್ಕಿ: ಹಿರೇಬಂಡಾಡಿಯ ಸಹೋದರರ ದಾರುಣ ಮೃತ್ಯು

ಬೆಳ್ತಂಗಡಿ: ಬಾವನ ಸಹೋದರನ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದ ವೇಳೆ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಗರ್ಡಾಡಿ ಎಂಬಲ್ಲಿ ಕೆಎಸ್ಆರ್ಟಿಸಿ ಬಸ್ಸು, ದ್ವಿಚಕ್ರ ವಾಹನ ಮಧ್ಯೆ ಭೀಕರ ಅಪಘಾತ ಸಂಭವಿಸಿ ಉಪ್ಪಿನಂಗಡಿಯ ಹಿರೇಬಂಡಾಡಿಯ ಸಹೋದರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ (ಮಾ.18) ರ ಮಧ್ಯಾಹ್ನ ನಡೆದಿದೆ.
ಮೃತಪಟ್ಟಿರುವ ಸಹೋದರರನ್ನು ಖುತುಬುದ್ದೀನ್ ಸಾದಿಕ್(34ವ.) ಹಾಗೂ ಹಮ್ಮಬ್ಬ ಸಿರಾಜುದ್ದೀನ್(30ವ.) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಖುತುಬದ್ದೀನ್ ಸಾದಿಕ್ರವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಸಹ ಸವಾರ ಸಹೋದರ ಹಮ್ಮಬ್ಬ ಸಿರಾಜುದ್ದೀನ್ರವರು ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಇಬ್ಬರೂ ಅವಿವಾಹಿತರಾಗಿದ್ದು ವಿದೇಶದಲ್ಲಿ ಉದ್ಯೋಗದಲ್ಲಿದ್ದು ಕೆಲ ತಿಂಗಳ ಹಿಂದೆಯಷ್ಟೇ ಊರಿಗೆ ಬಂದವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ಮತ್ತೆ ವಿದೇಶಕ್ಕೆ ಹೋಗುವ ಸಿದ್ಧತೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಘಟನೆ ವಿವರ: ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಪೆರಾಬೆ ಆನಡ್ಕ ನಿವಾಸಿ, ನಿವೃತ್ತ ಶಿಕ್ಷಕ ದಿ.ಅಬ್ದುಲ್ ರಝಾಕ್ ಹಾಗೂ ಮರಿಯಮ್ಮ ದಂಪತಿಯ ಪುತ್ರರಾದ ಇವರು ನಿನ್ನೆ ಮೃತಪಟ್ಟಿದ್ದ ಇವರ ಬಾವನ ಸಹೋದರನ ಅಂತಿಮ ದರ್ಶನ ಮುಗಿಸಿ ಬರುತ್ತಿದ್ದ ಈ ವೇಳೆ ಈ ಘಟನೆ ಸಂಭವಿಸಿದೆ.
ಖುತುಬುದ್ದೀನ್ ಹಾಗೂ ಸಿರಾಜುದ್ದೀನ್ರವರ ಸಹೋದರಿಯನ್ನು ಬೆಳ್ತಂಗಡಿ ತಾಲೂಕಿನ ವೇಣೂರಿನ ಸಾದಿಕ್ ಎಂಬವರಿಗೆ ಮದುವೆ ಮಾಡಿಕೊಡಲಾಗಿದ್ದು ಸಾದಿಕ್ರವರ ಸಹೋದರ ಜಾ-ರ್(23ವ.)ಎಂಬವರು ಮಾ.17ರಂದು ಸಂಜೆ ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಹೋದರರಿಬ್ಬರು ವೇಣೂರಿನ ಸಹೋದರಿಯ ಮನೆಗೆ ಮಾ.17ರಂದು ಹೋದವರು ಮಾ.18ರಂದು ಜಾರ್ರವರ ಅಂತ್ಯಕ್ರಿಯೆ ನಡೆದ ಬಳಿಕ ತಮ್ಮ ದ್ವಿಚಕ್ರ ವಾಹನದಲ್ಲಿ ವೇಣೂರು ಗುರುವಾಯನಕೆರೆ ಮಾರ್ಗವಾಗಿ ಹಿರೇಬಂಡಾಡಿಯ ತಮ್ಮ ಮನೆಗೆ ಬರುತ್ತಿದ್ದರು. ಸಹೋದರರಿಬ್ಬರು ಗರ್ಡಾಡಿ ಗ್ರಾಮದ ನಂದಿಬೆಟ್ಟ ಸಮೀಪಿಸುತ್ತಿದ್ದಂತೆ ಬೆಂಗಳೂರಿನಿಂದ ಧರ್ಮಸ್ಥಳ, ಮೂಡಬಿದ್ರೆ, ಕಾರ್ಕಳ ಮಾರ್ಗವಾಗಿ ಕುಂದಾಪುರಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ (ಕೆಎ 19 ಎ. 3459) ಮತ್ತು ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ದ್ವಿಚಕ್ರ ವಾಹನ ಸಮೇತ ಸಹೋದರರಿಬ್ಬರು ಬಸ್ಸಿನಡಿಗೆ ಸಿಲುಕಿದ್ದರು ಎಂದು ಹೇಳಲಾಗಿದ್ದು ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಖುತುಬುದ್ದೀನ್ ಸಾದಿಕ್ರವರು ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ ಸವಾರರಾಗಿದ್ದ ಅವರ ಸಹೋದರ ಗಂಭೀರ ಗಾಯಗೊಂಡಿದ್ದರು.
ಗಾಯಾಳುವನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ದಾರಿ ಮಧ್ಯೆ ಅವರೂ ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ಬೆಳ್ತಂಗಡಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಕೆಎಸ್ಆರ್ಟಿಸಿ ಬಸ್ ಚಾಲಕ ವಿಶ್ವನಾಥ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಹೋದರರಿಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆಸಿ ಕುಟುಂಬಸ್ಥರಿಗೆ ಬಿಟ್ಟುಕೊಡಲಾಗಿದೆ. ಸಹೋದರರು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಸಂಬಂಧಿಕರು, ಹಿರೇಬಂಡಾಡಿ, ಉಪ್ಪಿನಂಗಡಿಯ ಅವರ ಪರಿಚಿತರು ಸೇರಿದಂತೆ ಹಲವು ಮಂದಿ ಬೆಳ್ತಂಗಡಿ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದುಕೊಂಡರು. ಮೃತರು ತಾಯಿ ಮರಿಯಮ್ಮ, 8 ಸಹೋದರರು ಹಾಗೂ ಆರು ಸಹೋದರಿಯರನ್ನು ಅಗಲಿದ್ದಾರೆ.