ತ್ರಾಸಿ, ಮೊವಾಡಿ ಅಕ್ರಮ ಮರಳು ಅಡ್ಡೆಗೆ ದಾಳಿ

ಕುಂದಾಪುರ: ಇಲ್ಲಿನ ತ್ರಾಸಿ ಗ್ರಾಮದ ಅರಮ ದೇವಸ್ಥಾನದ ಸಮೀಪದ ಸೌಪರ್ಣಿಕಾ ನದಿಯಲ್ಲಿ ಅನಧಿಕೃತ ಮರಳುಗಾರಿಕೆಗೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಆರು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.

ಮೊವಾಡಿ ಬ್ರಿಡ್ಜ್ ಸಮೀಪವೂ ಅನಧಿಕೃತ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ 2 ದೋಣಿ ಸೇರಿದಂತೆ ಒಟ್ಟು ಆರು ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.

ತ್ರಾಸಿ, ಮೊವಾಡಿ, ಗುಡ್ಡೆಯಂಗಡಿಯ ಸೌಪರ್ಣಿಕಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ದೂರಿನ ಮೇರೆಗೆ ಮಂಗಳವಾರ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ಸ್ವತಃ ದೋಣಿಯ ಮೂಲಕ ತೆರಳಿ ದಾಳಿ ನಡೆಸಿದ್ದಾರೆ.

ಮೊವಾಡಿ, ನಾಡ ಹಾಗೂ ಬಡಾಕೆರೆ ವ್ಯಾಪ್ತಿಯಲ್ಲಿ ಅನೇಕ ಕಡೆ ಮರಳು ಗಣಿಗಾರಿಕೆಗೆ ನಡೆಸುವ ಮರಳು ದಕ್ಕೆಗಳಿದ್ದು, ಗಣಿ ಇಲಾಖೆಯ ಭೂವಿಜ್ಞಾನಿ ದಾಳಿ ನಡೆಸಿದ ಸಂದರ್ಭದಲ್ಲಿ ನಾಡ ಬಡಾಕೆರೆ ವ್ಯಾಪ್ತಿಯ ಕೆಲವೆಡೆ ಅನಧಿಕೃತ ಮರಳು ದಂಧೆ ನಡೆಸುವವರು ಮರಳು ಗಣಿಗಾರಿಕೆಗೆ ಬಳಸುವ ದೋಣಿಗಳನ್ನು ಹಾಗೂ ಇನ್ನಿತರ ಪರಿಕರಗಳನ್ನು ನೀರಿನಲ್ಲಿ ಮುಳುಗಿಸಿ ಪರಾರಿಯಾಗಿದ್ದಾರೆ.

ಅಕ್ರಮ ಮರಳು ದಂಧೆಕೋರರೆ ಸೋಮವಾರ ಮೊವಾಡಿ ಸಮೀಪದಲ್ಲಿ ಯಾಂತ್ರೀಕೃತ ಮರಳುಗಾರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆನ್ನಲಾಗಿದೆ. ಯಾಂತ್ರೀಕೃತ ಮರಳುಗಾರಿಕೆಯಿಂದ ತಮ್ಮ ಅಕ್ರಮ ಮರಳುಗಾರಿಕೆಗೆ ಸಮಸ್ಯೆಯಾಗಬಹುದೆಂದು ಸ್ಥಳೀಯರನ್ನು ಸೇರಿಸಿ ಸರ್ಕಾರ ಪರವಾನಿಗೆ ನೀಡಿರುವ ಯಾಂತ್ರೀಕೃತ ಮರಳುಗಾರಿಕೆಯನ್ನು ನಿಲ್ಲಿಸಲು ಪ್ರತಿಭಟನೆ ನಡೆಸಿದ್ದಾರೆ ಎನ್ನುವ ಮಾತುಗಳು ಸ್ಥಳೀಯವಾಗಿ ಹರಿದಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಕ್ರಮ ಮರಳು ದಕ್ಕೆಗಳಿಗೆ ದಾಳಿ ನಡೆಸಿದೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.

Related Posts

Leave a Reply

Your email address will not be published.

How Can We Help You?