ಪುತ್ತೂರು : ಸರಕಾರಿ ಬಾವಿಗೆ ಬೇಕಿದೆ ಕಾಯಕಲ್ಪ

ಪುತ್ತೂರು : 40ಕ್ಕೂ ಅಧಿಕ ವರ್ಷಗಳಿಂದ ಪಾಳುಬಿದ್ದ ಸರಕಾರಿ ಬಾವಿಯೊಂದು ಇದೀಗ ಬೆಳಕಿಗೆ ಬಂದಿದ್ದು, ಸ್ಥಳೀಯರ ಶ್ರಮದಾನದ ಪರಿಣಾಮ ಗಿಡ, ಗಂಟಿಗಳಿಂದ ಮುಚ್ಚಿ ಹೋಗಿ ಉಪಯೋಗಕ್ಕೆ ಬಾರದ ಸರಕಾರಿ ಬಾವಿಗೆ ನಗರಾಡಳಿತದಿಂದ ಬೇಕಾಗಿದೆ ಕಾಯಕಲ್ಪ. ಈ ಬಾವಿ ಇರುವುದು ನಗರದ ದರ್ಬೆ-ಸುಬ್ರಹ್ಮಣ್ಯ ರಸ್ತೆಯಲ್ಲಿ ಮುಖ್ಯ ರಸ್ತೆಯಿಂದ ಕೇವಲ ನೂರು ಮೀಟರ್ ದೂರದಲ್ಲಿ. ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಮಹಾದ್ವಾರದಿಂದ ನೂರು ಮೀಟರ್ ಮುಂದೆ ಸಾಗಿದರೆ ರಸ್ತೆಗೆ ತಾಗಿಕೊಂಡೇ ಈ ಬಾವಿ ಇದೆ.

ಮೂರು ಸೆಂಟ್ಸ್ ಜಾಗದಲ್ಲಿ ಈ ಬಾವಿಯೊಂದನ್ನು 40 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅಷ್ಟಕ್ಕೂ ಈ ಬಾವಿ ಇರುವ ಮೂರು ಸೆಂಟ್ಸ್ ಜಾಗವನ್ನು ಸ್ಥಳೀಯ ನಿವಾಸಿ ನಿವೃತ್ತ ಡೆಪ್ಯೂಟಿ ಜಿಲ್ಲಾ ಕಮಿಷನರ್ ಯು.ಕೆ.ನಾಯ್ಕ್ ಸರಕಾರಕ್ಕೆ ಬರೆದುಕೊಟ್ಟಿದ್ದಾರೆ. ಈ ಕುರಿತು ದಾಖಲೆಯೂ ಅವರ ಬಳಿ ಇದೆ.40 ವರ್ಷಗಳ ಹಿಂದೆ ಬಾವಿಯಿದ್ದ ಈ ಜಾಗ ಸ್ವಚ್ಛವಾಗಿತ್ತು. ಆಗ ಇದ್ದ ಸುಮಾರು 10-15 ಮನೆಯವರಿಗೆ ಇದೇ ಬಾವಿ ನೀರಿನ ಆಸರೆಯೂ ಆಗಿತ್ತು. ಯಾವಾಗ ಪುರಸಭೆ ವತಿಯಿಂದ ಈ ಪರಿಸರಕ್ಕೆ ನಳ್ಳಿ ನೀರಿನ ವ್ಯವಸ್ಥೆ ಆಯಿತೋ ಅಲ್ಲಿಂದ ಈ ಬಾವಿ ನಿರ್ಲಕ್ಷ?ಯಕ್ಕೆ ಒಳಗಾಗುತ್ತಾ ಬಂತು. ಬಳಿಕದ ದಿನಗಳಲ್ಲಿ ಗಿಡಗಂಟಿಗಳಿಂದ ಮುಚ್ಚಲ್ಪಟ್ಟಿತ್ತು. ಸಾಲದಕ್ಕೆ ಅಂಗಡಿ, ಮುಂಗಟ್ಟು, ಮನೆಗಳಿಂದ ತ್ಯಾಜ್ಯಗಳನ್ನು ಇದೇ ಜಾಗದಲ್ಲಿ ತಂದು ಬಿಸಾಡಲು ಆರಂಭವಾಯಿತು.

ನಗರ ಆಡಳಿತ ಮೂರು ದಿನಗಳ ಹಿಂದೆ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ನಗರಸಭೆ ಬಜೆಟ್ನಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅನುದಾನ ಇಟ್ಟು ಅಭಿವೃದ್ಧಿಪಡಿಸುವ ಭರವಸೆ ನೀಡಿ ತೆರಳಿದ್ದಾರೆ. ಬಾವಿಯಿದ್ದ ಮೂರು ಸೆಂಟ್ಸ್ ಜಾಗವನ್ನು ಸಂಜೆ ಹೊತ್ತು ಸ್ಥಳೀಯರಿಗೆ ಕುಳಿತುಕೊಳ್ಳಲು ಸಣ್ಣ ಮಟ್ಟದ ಪಾರ್ಕ್ ಆಗಿ ನಿರ್ಮಿಸಬೇಕು, ಬಾವಿಯನ್ನು ಹೂಳೆತ್ತಿ ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯರು ನಗರಾಡಳಿತಕ್ಕೆ ಬೇಡಿಕೆಯನ್ನೂ ಇಟ್ಟಿದ್ದಾರೆ.

ಈಗಾಗಲೇ ಸರಕಾರ ಜಲಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದರಿಂದ ಜಲಮೂಲ ಬಾವಿಯನ್ನು ಉಳಿಸಬೇಕಾಗಿದೆ. ನೀರು ಇಂಗಿಸುವುದಕ್ಕೆ ಮುಖ್ಯವಾಗಿ ಇಟ್ಟುಕೊಂಡು ಶ್ರಮದಾನದ ಮೂಲಕ ಗಿಡಗಂಟಿಗಳಿಂದ ಮುಕ್ತಗೊಳಿಸಿದ್ದೇವೆ. ಮೂರು ದಿನಗಳ ಹಿಂದೆ ನಗರಾಡಳಿತ ಬಂದು ಪರಿಶೀಲಿಸಿದೆ. ಈ ಬಾವಿಯನ್ನು ಹೂಳೆತ್ತುವುದಕ್ಕೆ ನಗರಸಭೆಯಲ್ಲಿ ಅನುದಾನ ಇಡಬೇಕು. ಜತೆಗೆ ಬಾವಿಯ ಸುತ್ತ ಗಾರ್ಡ್ನ್ ನಿರ್ಮಿಸಬೇಕು ಎಂಬ ಬೇಡಿಕೆಯಿದೆ. ಸ್ಥಳೀಯ ಸಹಿತ ಪಕ್ಕದ ವಾರ್ಡ್ ಸದಸ್ಯರೂ ಬಂದು ಪರಿಶೀಲಿಸಿದ್ದಾರೆ. ಅಭಿವೃದ್ಧಿಪಡಿಸುವ ಎಲ್ಲಾ ಭರವಸೆಗಳನ್ನು ನೀಡಿದ್ದಾರೆ. ಆದರೆ ಇದೇ ಸ್ಥಳದಲ್ಲಿರುವ ಟ್ರಾನ್ಸ್ಫಾರ್ಮರಿಂದ ಅಪಾಯವಾಗದಂತೆ ಮೆಸ್ಕಾಂನವರು ರಕ್ಷಣ ಬೇಲಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ಮಧು ಕುಮಾರ್. ನಿವೃತ್ತ ಡೆಪ್ಯುಟಿ ಸೆಕ್ರೆಟರಿ ನಗರಸಭೆ ವತಿಯಿಂದ ನಗರಸಭೆ ವ್ಯಾಪ್ತಿಯ ಕೆಮ್ಮಿಂಜೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಬಾವಿಯೊಂದು ಸ್ಥಳೀಯರಿಂದ ಗಮನಕ್ಕೆ ಬಂದಿದ್ದು, ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದೇವೆ. ಮರುಬಳಕೆಗಾಗಿ ಸ್ಥಳೀಯರು ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಲ್ಲಿನ ಸ್ಥಳೀಯರ ಬೇಡಿಕೆ ಸಹಿತ ಈ ಬಾವಿಯನ್ನು ಮರುಬಳಕೆ ಮಾಡುವ ವ್ಯವಸ್ಥೆಯನ್ನು ಮಾಡಲು ನಗರಸಭೆ ವತಿಯಿಂದ ಕ್ರಮಕೈಗೊಳ್ಳಲಿದ್ದೇವೆ.

ಮಧು ಎಸ್.ಮನೋಹರ್, ಪೌರಾಯುಕ್ತರು, ನಗರಸಭೆಒಟ್ಟಿನಲ್ಲಿ ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿ ಪಾಳುಬಿದ್ದ ಬಾವಿಯೊಂದು ಪತ್ತೆಯಾಗಿದ್ದು, ನಗರಸಭೆಯ ವತಿಯಿಂದ ಆ ಬಾವಿಯ ಕಾಯಕಲ್ಪ ಆಗಬೇಕಾಗಿದೆ.

Related Posts

Leave a Reply

Your email address will not be published.

How Can We Help You?