ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ. ಇದೊಂದು ವ್ಯಾಪಾರಿ ಸರ್ಕಾರ : ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶವನ್ನು ಮಾರಾಟ ಮಾಡಲೆಂದು ಅಧಿಕಾರ ವಹಿಸಿಕೊಂಡಿರುವಂತಿದೆ. ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ. ಇದೊಂದು ವ್ಯಾಪಾರಿ ಸರ್ಕಾರ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಟೀಕಿಸಿದರು.ಅವರು ಬೆಳ್ತಂಗಡಿ ಸಿಐಟಿಯು ನೇತೃತ್ವದಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿದ 2 ದಿನಗಳ ಮಹಾ ಮುಷ್ಕರದ ಅಂಗವಾಗಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಅಚ್ಛೇ ದಿನದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ರೈತ, ಕಾರ್ಮಿಕ, ನೌಕರರನ್ನು ಬೀದಿಗೆ ತಳ್ಳುವ ಅನಾಗರಿಕತೆಯನ್ನು ಪ್ರದರ್ಶಿಸುತ್ತಿದೆ. ಕಾರ್ಮಿಕ ಕಾನೂನುಗಳನ್ನು ಕಾರ್ಮಿಕ ಸಂಹಿತೆಗಳಾಗಿ ಬದಲಾವಣೆ ಮಾಡಲಾಗಿದೆ , ವಿವಾದಿತ ರೈತ ಮಸೂದೆಗಳನ್ನು ಜ್ಯಾರಿ ಮಾಡುವ ಮೂಲಕ ಅನ್ನದಾತರ ಬೆನ್ನೆಲುಬು , ಪಕ್ಕೆಲುಬು ಮುರಿಯಲಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ನೌಕರರನ್ನು ಬೀದಿಗೆಸೆದು ಅಚ್ಛೆದಿನ್ ಸಾಬೀತು ಪಡಿಸಿದೆ ಎಂದು ಕೇಂದ್ರ ಸರ್ಕಾರವನ್ನು ವ್ಯಂಗ್ಯವಾಗಿ ಟೀಕಿಸಿದರು. ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ದುಡಿಯುವ ವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದ ವಸಂತ ಆಚಾರಿ , ಅಂಗನವಾಡಿ, ಬಿಸಿಯೂಟ, ಆಶಾ ನೌಕರರನ್ನು ಅತ್ಯಂತ ಕಡಿಮೆ ಗೌರವಧನ ನೀಡಿ ಜೀತದಾಳುಗಳಂತೆ ದುಡಿಸಲಾಗುತ್ತದೆ. ಇದು ಯಾವ ಅಚ್ಛೇದಿನ್ ಎಂದು ಪ್ರಶ್ನಿಸಿದರು.

ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ , ನ್ಯಾಯವಾದಿ ಶಿವಕುಮಾರ್ ಎಸ್. ಎಂ ಮಾತನಾಡುತ್ತಾ ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ಕೂಡ ರೈತ, ಕಾರ್ಮಿಕ, ನೌಕರರ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ ಎಂದ ಅವರು ಕೇಂದ್ರ, ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ, ನೌಕರರನ್ನು ಕೊಳ್ಳೆ ಹೊಡೆಯುವ ದರೋಡೆಕೋರ ಸರ್ಕಾರಗಳು ಎಂದು ಆರೋಪಿಸಿದರು. ಇಂದು, ನಾಳೆ ಇಡೀ ದೇಶದಾದ್ಯಂತ ಬ್ಯಾಂಕ್, ರೈಲ್ವೆ, ವಿಮಾನ, ಅಂಚೆ, ವಿಮಾ ಸಂಸ್ಥೆಗಳು , ಖಾಸಗಿ ಕಂಪನಿಗಳು , ಸರ್ಕಾರಿ ಸ್ವಾಮ್ಯದ ಕಂಪನಿಗಳು ಸ್ಥಗಿತಗೊಂಡಿದೆ. ರೈತ , ಕಾರ್ಮಿಕ , ದಲಿತ, ಆದಿವಾಸಿಗಳು ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಇದು ಐತಿಹಾಸಿಕ ಮಹಾ ಮುಷ್ಕರ ಎಂದರು. ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಭವ್ಯ ಮಂಗಳೂರು ಮಾತನಾಡಿ ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಇಡೀ ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸಿದ್ದಾರೆ ಎಂದರು.

ಮೊದಲಿಗೆ ಸಿಐಟಿಯು ತಾಲೂಕು ಉಪಾಧ್ಯಕ್ಷ ಶೇಖರ್ ಲಾಯಿಲ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ವಸಂತ ನಡ ವಂದಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಮುಖಂಡರಾದ ಸುಕನ್ಯಾ ಹೆಚ್ , ಜಯಂತಿ ನೆಲ್ಲಿಂಗೇರಿ , ಪದ್ಮಾವತಿ ಬೆಳ್ತಂಗಡಿ , ಕುಸುಮ ಮಾಚಾರ್ , ಸುಧಾ ಕೆ ರಾವ್ , ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಲಲಿತಾ ಮದ್ದಡ್ಕ , ಸುಮಿತ್ರಾ ಹತ್ಯಡ್ಕ , ರೈತ ಸಂಘದ ಮುಖಂಡರಾದ ನಿಲೇಶ್ ಹೆಚ್ ಪೆರಿಂಜೆ , ಮಧು ಕಳೆಂಜ , ಶ್ರಮಶಕ್ತಿ ಸ್ವಸಹಾಯ ಗುಂಪಿನ ಸಂಯೋಜಕ ಸಂಜೀವ ಆರ್ ಅತ್ತಾಜೆ , ಶೋಭಾ ಕೊಯಿಲ , ಡಿವೈಎಫ್ಐ ತಾಲೂಕು ಅಧ್ಯಕ್ಷ ಸುಜೀತ್ ಉಜಿರೆ , ಎಸ್ಎಫ್ಐ ಮುಖಂಡ ಸುದೀಪ್ ಬೆಳ್ತಂಗಡಿ ವಹಿಸಿದ್ದರು.

ಬೆಳ್ತಂಗಡಿ ಸಿಐಟಿಯು ಕಛೇರಿಯಿಂದ ಬೆಳ್ತಂಗಡಿ ಮಿನಿ ವಿಧಾನಸೌಧದ ತನಕ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಿತು.

Related Posts

Leave a Reply

Your email address will not be published.

How Can We Help You?