ಕಾರ್ಮಿಕ ಚಳುವಳಿಯ ಧ್ರುವತಾರೆ ಬಿಟಿಆರ್ – ಜೆ.ಬಾಲಕ್ರಷ್ಣ ಶೆಟ್ಟಿ

 ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಬಿಟಿ ರಣದಿವೆಯವರು ಎಳೆಯ ಪ್ರಾಯದಲ್ಲೇ ದೇಶದ ಸ್ವಾತಂತ್ರ್ಯ  ಚಳುವಳಿಯಲ್ಲಿ ತೊಡಗಿಸಿಕೊಂಡರು.ಇದೇ ಸಂದರ್ಭದಲ್ಲಿ ದುಡಿಯುವ ವರ್ಗದ ಸಿದ್ದಾಂತದ ಮೇಲೆ ಅಪಾರವಾದ ಕಾಳಜಿ ಹೊಂದಿ ಕಾರ್ಮಿಕ ವರ್ಗದ ಸಮರಧೀರ ಹೋರಾಟಗಳಲ್ಲಿ ಸಮರ್ಪಿಸಿಕೊಂಡರು.ಕಾರ್ಮಿಕ ವರ್ಗದ ದೈನಂದಿನ ಹೋರಾಟಗಳನ್ನು ಸಾಮಾಜಿಕ ಪರಿವರ್ತನೆಯ ಅಂತಿಮ ಗುರಿಯೊಂದಿಗೆ ಬೆಸೆಯುತ್ತಿದ್ದ ಬಿಟಿಆರ್,ಕ್ರಾಂತಿಕಾರಿ ಸಿದ್ದಾಂತ ಹಾಗೂ ಕ್ರಾಂತಿಕಾರಿ ಪಕ್ಷವಿಲ್ಲದೆ ಸಮಾಜದ ಪರಿವರ್ತನೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸುತ್ತಿದ್ದರು.ಐಕ್ಯತೆ ಮತ್ತು ಹೋರಾಟದ ಸಂದೇಶ ಸಾರಿದ ಬಿಟಿಆರ್ ಕಾರ್ಮಿಕ ಚಳುವಳಿಯ ಧ್ರುವತಾರೆಯಾಗಿ ಹೊರಹೊಮ್ಮಿದ್ದಾರೆ ಎಂದು CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಅಭಿಪ್ರಾಯಪಟ್ಟರು.

 CITU ಸಂಸ್ಥಾಪಕ ಅಧ್ಯಕ್ಷರಾದ ಬಿಟಿ ರಣದಿವೆಯವರ 32ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಮಂಗಳೂರಿನಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು.

CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡಿ, ಎಳೆಯ ಪ್ರಾಯದಲ್ಲೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಬಿಟಿಆರ್ ಮಾರ್ಕ್ಸ್ ವಾದಿ ಸಿದ್ದಾಂತವನ್ನು ಆಳವಾಗಿ ಅಭ್ಯಸಿಸಿ ಆ ಮೂಲಕ ಭಾರತದಲ್ಲಿ ಕ್ರಾಂತಿಯ ಕನಸು ಕಂಡವರು. ದೇಶದ ಕಾರ್ಮಿಕ ಚಳುವಳಿಗೆ ಸರಿಯಾದ ತಳಹದಿಯನ್ನು ಹಾಕಿ ಮುನ್ನಡೆಸಿರುವುದು ಮಾತ್ರವಲ್ಲದೆ ದುಡಿಯುವ ಮಹಿಳೆ,ಸಾಮ್ರಾಜ್ಯಶಾಹಿ, ನಿರುದ್ಯೋಗ ಸಮಸ್ಯೆಗಳ ಗಂಭೀರತೆಯನ್ನು ತಿಳಿಹೇಳಿ ಕಾರ್ಮಿಕ ಸಂಘಗಳ ಪ್ರಜಾಸತ್ತಾತ್ಮಕ ನಿರ್ವಹಣೆಯ ಮಹತ್ವವನ್ನು ಸಾರಿ ಹೇಳಿದ್ದರು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ CITU ದ.ಕ.ಜಿಲ್ಲಾ ಸಮಿತಿ ಸದಸ್ಯರಾದ ವಿಲಾಸಿನಿ‌ ತೊಕ್ಕೋಟುರವರು ಮಾತನಾಡುತ್ತಾ, ಬಂಡವಾಳಶಾಹಿ ವ್ಯವಸ್ಥೆಯಿಂದಾಗಿ ಮಹಿಳೆಯರ ಮೇಲಿನ ಆರ್ಥಿಕ ಶೋಷಣೆ ಹಾಗೂ ಸಾಮಾಜಿಕ ಶೋಷಣೆಗಳ ವಿರುದ್ಧ ಪ್ರಬಲ ಹೋರಾಟಕ್ಕೆ ಕರೆ ನೀಡಿದ್ದ ಬಿಟಿಆರ್,ಕಾರ್ಮಿಕ ಚಳುವಳಿಯಲ್ಲಿ ದುಡಿಯುವ ಮಹಿಳೆಯರಿಗೆ ಪೂರ್ಣ ಸಮಾನತೆ ನೀಡುವಲ್ಲಿ ಸದಾ ಮಾರ್ಗದರ್ಶನ ನೀಡುತ್ತಿದ್ದರು ಎಂದು ಹೇಳಿದರು.ಪ್ರಾರಂಭದಲ್ಲಿ ಯೋಗೀಶ್ ಜಪ್ಪಿನಮೊಗರುರವರು ಸ್ವಾಗತಿಸಿದರೆ ಕೊನೆಯಲ್ಲಿ ರವಿಚಂದ್ರ ಕೊಂಚಾಡಿಯವರು ವಂದಿಸಿದರು.

Related Posts

Leave a Reply

Your email address will not be published.

How Can We Help You?