ಪುತ್ತೂರಿನಲ್ಲಿ 300 ಬೆಡ್ನ ಆಸ್ಪತ್ರೆಗೆ ನೀಲ ನಕಾಶೆ : ಶಾಸಕ ಸಂಜೀವ ಮಠಂದೂರು ಹೇಳಿಕೆ

ಪುತ್ತೂರು: ದ.ಕ.ಜಿಲ್ಲೆಯಲ್ಲೇ ಅತಿ ಹೆಚ್ಚು ತಾಲೂಕು ಹೊಂದಿರುವ ಉಪವಿಭಾಗವಾಗಿರುವ ಪುತ್ತೂರಿನಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಕೊಡುವ ನಿಟ್ಟಿನಲ್ಲಿ ಅಂದಾಜು ರೂ. 180 ಕೋಟಿ ವೆಚ್ಚದಲ್ಲಿ 300 ಬೆಡ್ನ ಆಸ್ಪತ್ರೆಗೆ ನೀಲ ನಕಾಶೆ ಸಿದ್ದಪಡಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಹಾಯಕ ಕಮಿಷನರ್ ಗಿರೀಶ್ ನಂದನ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಇಂಜಿನಿಯರ್ಗಳ ಉಪಸ್ಥಿತಿಯಲ್ಲಿ ನಡೆದ ಸರಕಾರಿ ಆರೋಗ್ಯ ರಕ್ಷಾ ಸಮಿತಿ ಸಭೆಯ ಬಳಿಕ ಅವರು ಪತ್ರಿಕಾ ಮಾದ್ಯಮವರೊಂದಿಗೆ ಮಾತನಾಡಿದರು. ಸಾರ್ವಜನಿಕರಿಗೆ ಆರೋಗ್ಯ ಸೇವೆ ಕೊಡುವ ನಿಟ್ಟಿನಲ್ಲಿ 300 ಬೆಡ್ನ ಆಸ್ಪತ್ರೆ ಆಗಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಾಗ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆ ಪ್ರಸ್ತಾವನೆಯನ್ನು ಸ್ವೀಕಾರ ಮಾಡಿದೆ. ಇದಲ್ಲದೆ ಸದನಲ್ಲೂ ಪ್ರಶ್ನಿಸಿದಾಗ ಸಚಿವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲೇ ಸಭೆ ನಡೆಸಿ ಮಾಹಿತಿ ಪಡೆಯುವುದಾಗಿ ಭರವಸೆ ನೀಡಿದ್ದರು. ಅದರಂತೆ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಸಂಬಂಧಿಸಿದ ಇಂಜಿನಿಯರ್ಗಳು ಸಭೆಯಲ್ಲಿ ಭಾಗವಹಿಸಿ ಆಸ್ಪತ್ರೆಯ ಜಾಗ ಮತ್ತು ಮುಂದೆ ಲಭ್ಯ ಇರುವ ಸ್ಥಳವಕಾಶದ ಕುರಿತು ಸ್ಪಷ್ಟತೆ ಪಡೆದು ಕೊಂಡಿದ್ದಾರೆ. ಈಗಿರುವ ನೀಲಿ ನಕಾಶೆ ಬದಲಾವಣೆ ಮಾಡಿ ಭೌಗೋಳಿಕವಾಗಿ ಇಲ್ಲಿನ ಸ್ಥಳಕ್ಕೆ ಸರಿಯಾಗಿ ತೀರ್ಮಾಣಕ್ಕೆ ಬಂದು ಅಂತಿಗೊಳಿಸಲಾಗುವುದು. ಒಟ್ಟಿನಲ್ಲಿ ಪುತ್ತೂರಿಗೊಂದು ಸರಕಾರಿ ಮೆಡಿಕಲ್ ಕಾಲೇಜು ಬರಬೇಕು. ಅದಕ್ಕೆ ಪೂರಕವಾಗಿ ಸುಸಜ್ಜಿತೆ 300 ಬೆಡ್ನ ಆಸ್ಪತ್ರೆಯಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ಗಿರೀಶ್ನಂದನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಶಾ ಪುತ್ತೂರಾಯ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಫೀಕ್ ದರ್ಬೆ, ವಿದ್ಯಾ ಆರ್ ಗೌರಿ, ಡಾ. ಕೃಷ್ಣಪ್ರಸನ್ನ, ಕೃಷ್ಣ ನಾಯ್ಕ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜರಾಮ್, ಜಿಲ್ಲಾ ಆರೋಗ್ಯ ಇಲಾಖೆಯ ಇಂಜಿನಿಯರ್ಗಳು. ಸರಕಾರಿ ಆಸ್ಪತ್ರೆಯ ವೈದ್ಯರುಗಳು ಉಪಸ್ಥಿತರಿದ್ದರು.