ಪುತ್ತೂರು ಮಹಾಲಿಂಗೇಶ್ವರ ದೇವಳದ ಜಾತ್ರಾ ಮಹೋತ್ಸವ ಬ್ರಹ್ಮರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಪನ್ನ

ಪುತ್ತೂರು. ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಎಪ್ರಿಲ್ 17 ರಂದು ರಾತ್ರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು. ಎಪ್ರಿಲ್ 10 ರಿಂದ ಸುಮಾರು ಹತ್ತು ದಿನಗಳ ಕಾಲ ನಡೆಯುವ ಪುತ್ತೂರು ಜಾತ್ರೆಯಲ್ಲಿ ದೇವರ ರಥೋತ್ಸವಕ್ಕೆ ಅದರದೇ ಆದ ಮಹತ್ವವಿದ್ದು, ಉಳ್ಳಾಲ್ತಿ ದೈವವು ಮಹಾಲಿಂಗೇಶ್ವರ ದೇವರು ರಥಾರೂಢವಾಗುವ ಸಮಯದಲ್ಲಿ ಉಪಸ್ಥಿತವಿರುವುದು ಇರುವ ಮೂಲಕ ದೈವ ಹಾಗು ದೇವರ ಸಂಬಂಧವನ್ನು ಬಿಂಬಿಸುತ್ತದೆ.

ರಾಜ್ಯದ ಅತೀ ಎತ್ತರದ ರಥಗಳಲ್ಲಿ ಒಂದಾಗಿರುವ ಬ್ರಹ್ಮರಥವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಪುತ್ತೂರು ಉಪವಿಭಾಗದ ಸಹಾಯುಕ ಆಯುಕ್ತ ಗಿರೀಶ್ ನಂದನ್ ಸೇರಿದಂತೆ ಹಲವು ಗಣ್ಯರು ಎಳೆಯುವುದರ ಮೂಲಕ ರಥೋತ್ಸವ ಸಂಪನ್ನಗೊಂಡಿತು. ರಥೋತ್ಸವದ ಬಳಿಕ ಮಹಾಲಿಂಗೇಶ್ವರ ದೇವರು ಉಳ್ಳಾಲ್ತಿ ದೈವವನ್ನು ಅಯ್ಯನಕಟ್ಟೆ ಬಳಿ ಬಂದು ಬೀಳ್ಕೊಡುವ ಹಾಗು ಎಪ್ರಿಲ್ 28 ರಂದು ನಡೆಯುವ ಉಳ್ಳಾಲ್ತಿ ದೈವದ ನೇಮೋತ್ಸವಕ್ಕೆ ದೈವವು ದೇವರಿಗೆ ಆಮಂತ್ರಣ ಕೊಡುವ ಸಂಪ್ರದಾಯವೂ ಇಲ್ಲಿದ್ದು, ಇದು ಪುತ್ತೂರು ಜಾತ್ರೆಯ ವಿಶೇಷತೆಯಾಗಿದೆ.