ಆಳುವ ವರ್ಗದ ಆಕ್ರಮಣಕಾರಿ ನೀತಿಗಳನ್ನು ಸೋಲಿಸಲು ಮೇ ದಿನಾಚರಣೆ ಕಾರ್ಮಿಕ ವರ್ಗದ ಅಸ್ತ್ರವಾಗಬೇಕು – ಸುನಿಲ್ ಕುಮಾರ್ ಬಜಾಲ್

ನವ ಉದಾರೀಕರಣ ನೀತಿಗಳನ್ನು ಅತ್ಯಂತ ವೇಗವಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರಕಾರವು ಜನತೆಯ ಹಿತಾಸಕ್ತಿಗಳನ್ನು ಕಾಪಾಡುವ ಬದಲು ಕಾರ್ಪೊರೇಟ್ ಕಂಪೆನಿಗಳ ಏಳಿಗೆಗಾಗಿ ಶ್ರಮಿಸುತ್ತಿದೆ.ತನ್ನ ಜನವಿರೋಧಿ ನೀತಿಗಳಿಂದಾಗಿ ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದ ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳನ್ನು ಬಂಡವಾಳಶಾಹಿಗಳ ಪರವಾಗಿ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕ ವರ್ಗದ ಬದುಕನ್ನೇ ನಾಶಗೊಳಿಸಿದೆ.ಇಂತಹ ಅಪಾಯಕಾರಿ ಸಂದರ್ಭದಲ್ಲಿ ಕಾರ್ಮಿಕ ವರ್ಗದ ಉಸಿರಾದ ಮೇ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ಮೂಲಕ ಆಳುವ ವರ್ಗದ ಆಕ್ರಮಣಕಾರಿ ನೀತಿಗಳನ್ನು ಸೋಲಿಸಬೇಕೆಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಜಿಲ್ಲೆಯ ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.
ವಿಶ್ವ ಕಾರ್ಮಿಕರ ದಿನವಾದ ಮೇ 1 ನ್ನು ಮಂಗಳೂರು ನಗರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲು ಆಯೋಜಿಸಲಾದ ವಿವಿಧ ಕಾರ್ಮಿಕ ಸಂಘಟನೆಗಳ ಮಧ್ಯಮ ವರ್ಗದ ನೌಕರರ ಸಂಘಟನೆಗಳ ಹಾಗೂ ಹಿತೈಷಿಗಳನ್ನೊಳಗೊಂಡ ಮೇ ದಿನ ಆಚರಣಾ ಸಮಿತಿ ರಚನಾ ಸಭೆಯಲ್ಲಿ ಭಾಗವಹಿಸುತ್ತಾ ಈ ಮಾತುಗಳನ್ನು ಹೇಳಿದರು.
ಬ್ಯಾಂಕ್ ಅಧಿಕಾರಿಗಳ ಸಂಘಟನೆ ಯ ರಾಜ್ಯ ನಾಯಕರಾದ ರಾಘವ ಕೆ.ಯವರು ಮಾತನಾಡುತ್ತಾ, ದುಡಿಯುವ ವರ್ಗದ ದಿನವನ್ನು ಕಾರ್ಮಿಕರನ್ನು ಮದ್ಯೆ ವ್ಯಾಪಕ ಪ್ರಚಾರ ನಡೆಸಿ ಸರಕಾರದ ನೀತಿಗಳನ್ನು ಹಿಮ್ಮೆಟ್ಟಿಸಿ ಕಾರ್ಮಿಕರ ಐಕ್ಯತೆಯನ್ನು ಪ್ರದರ್ಶಿಸಲು ಸದಾವಕಾಶವಾಗಿದೆ ಎಂದು ಹೇಳಿದರು
ಸಭೆಯಲ್ಲಿ ಭಾಗವಹಿಸಿದ ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿ,ಬ್ಯಾಂಕ್ ನೌಕರರ ಮುಖಂಡರಾದ ಸುರೇಶ್ ಹೆಗ್ಡೆ,ವಿಮಾ ನೌಕರರ ಸಂಘದ ನಾಯಕರಾದ ಬಿ.ಎನ್.ದೇವಾಡಿಗ,ಕಟ್ಟಡ ಕಾರ್ಮಿಕರ ಮುಖಂಡರಾದ ರವಿಚಂದ್ರ ಕೊಂಚಾಡಿ, ಹಮಾಲಿ ಕಾರ್ಮಿಕರ ಮುಖಂಡರಾದ ವಿಲ್ಲಿ ವಿಲ್ಸನ್, ಬೀಡಿ ಕಾರ್ಮಿಕರ ಮುಖಂಡರಾದ ಭಾರತಿ ಬೋಳಾರ,DYFI ನಾಯಕರಾದ ನವೀನ್ ಕೊಂಚಾಡಿ ಮುಂತಾದವರು ಮಾತನಾಡಿ ಮೇ ದಿನಾಚರಣೆಯನ್ನು ಯಶಸ್ವಿಗೊಳಿಸಲು ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು.ಬಳಿಕ ಮೇ ದಿನ ಆಚರಣಾ ಸಮಿತಿಯನ್ನು ರಚಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಿಷ್ಣ ಶೆಟ್ಟಿಯವರು ಮಾತನಾಡುತ್ತಾ, 8 ಗಂಟೆಯ ದುಡಿಮೆಗಾಗಿ ಧೀರೋದತ್ತ ಹೋರಾಟ ನಡೆದು ತ್ಯಾಗ ಬಲಿದಾನಗಳ ಪರಂಪರೆ ಹೊಂದಿರುವ ಮೇ ದಿನಾಚರಣೆಯನ್ನು ಇಲ್ಲವಾಗಿಸಲು ಬಂಡವಾಳಶಾಹಿಗಳು ಪಿತೂರಿ ನಡೆಸಿ ಮತ್ತೆ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ದುಡಿಸುವ ಪ್ರವ್ರತ್ತಿ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಪ್ರಾರಂಭದಲ್ಲಿ CITU ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರೆ, ಕೊನೆಯಲ್ಲಿ CITU ಮುಖಂಡರಾದ ಅಶೋಕ್ ಸಾಲ್ಯಾನ್ ರವರು ವಂದಿಸಿದರು.