ಗಡಿಭಾಗದಲ್ಲಿ ಗಮನ ಸೆಳೆಯುತ್ತಿರುವ ಕ್ಷೇತ್ರ ದೈವ ಪಾತ್ರಿಗಳ ಜಮಾಹತ್ ಭೇಟಿ

ಮಂಜೇಶ್ವರ: ನೆರೆ ರಾಜ್ಯವಾದ ಕರ್ನಾಟಕ ಸೇರಿದಂತೆ ಉತ್ತರ ಭಾರತದ ಹಲವೆಡೆ ಮಸೀದಿ ಮಂದಿರಗಳ ಹೆಸರಲ್ಲಿ ಜಾತಿ ಜಾತಿಗಳ ಮಧ್ಯೆ ಕೋಮು ವೈಷಮ್ಯ ಹೊಗೆಯಾಡುತ್ತಿರುವಾಗಲೂ ಗಡಿ ಪ್ರದೇಶವಾದ ಮಂಜೇಶ್ವರಕ್ಕೆ ಸಮೀಪದ ಉದ್ಯಾವರದಲ್ಲಿ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವ ಪಾತ್ರಿಗಳು, ಕ್ಷೇತ್ರ ಪದಾಧಿಕಾರಿಗಳು ಹಾಗೂ ಗುರಿಕ್ಕಾರರು ಉದ್ಯಾವರ ಸಾವಿರ ಜಮಾಹತಿಗೆ ಭೇಟಿ ನೀಡಿ ಉತ್ಸವಕ್ಕೆ ಆಹ್ವಾನವನ್ನು ನೀಡಲಾಯಿತು.

ಕಳೆದ ಕೆಲ ದಿನಗಳ ಹಿಂದೆ ಮೊದಲು ಇದೇ ಕ್ಷೇತ್ರದಲ್ಲಿ ಅರಸು ದೈವಗಳು ಮುಸಲ್ಮಾನನೊಬ್ಬನಿಂದ ವೀಳ್ಯದೆಲೆ ಅಡಿಕೆ ಮಾರಾಟ ಮಾಡಿಸಿ ಮುಸಲ್ಮಾನರು ಕ್ಷೇತ್ರದ ಉತ್ಸವಕ್ಕೆ ವ್ಯಾಪಾರ ನಡೆಸಲು ಅಡ್ಡಿ ಇಲ್ಲ ವೆಂಬ ಸಂದೇಶವನ್ನು ನೀಡಿದ್ದರು. ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ ಕಳೆದ 800 ವರ್ಷಗಳಿಂದ ವಾಡಿಕೆಯಲ್ಲಿರುವ ಉದ್ಯಾವರ ಶ್ರೀ ಅರಸು ದೈವಗಳು ವರ್ಷಂಪ್ರತಿಯ ಪದ್ದತಿಯಂತೆ ಶುಕ್ರವಾರ ಮಧ್ಯಾಹ್ನ ಅರಸು ದೈವ ಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಹಾಗೂ ಸಹಸ್ರಾರು ಹಿಂದೂ ಬಾಂಧವರು ಜತೆಯಾಗಿ ಉದ್ಯಾವರ ಸಾವಿರ ಜಮಾಅತ್‍ಗೆ ಭೇಟಿ ನೀಡಿದರು.

ಈ ಸಂದರ್ಭ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್, ಮಸೀದಿ ಅಧ್ಯಕ್ಷ ಸೈಪುಲ್ಲಾ ತಂಘಲ್ , ಕಾರ್ಯದರ್ಶಿ ಇಬ್ರಾಹಿಂ ಸೇರಿದಂತೆ ಹಲವರು ಕ್ಷೇತ್ರದಿಂದ ಆಗಮಿಸಿದವರನ್ನು ಬರಮಾಡಿ ಕೊಂಡರು.

ಈ ಸಂದರ್ಭ ಕೇರಳ ರಾಜ್ಯ ಜಂಮೀಯತುಲ್ ಉಲಮಾ ಅಧ್ಯಕ್ಷ ಹಾಗೂ ಉದ್ಯಾವರ ಸಾವಿರ ಜಮಾಹತ್ ಖಾಝಿಯೂ ಆದ ಸಯ್ಯದ್ ಮೊಹಮ್ಮದ್ ಜಿಫ್ರಿ ಮತ್ತು ಕೋಯ ತಂಘಲ್ ರವರು ಮಾತನಾಡಿ.. ದೇಶದಾದ್ಯಂತ ಕೋಮು ವಿಷಬೀಜ ಬಿತ್ತುವ ಹಾಗೂ ಸೌಹಾರ್ಧತೆಯನ್ನು ಕೆಡಿಸುವವರಿಗೆ ಇದೊಂದು ಮಾದರಿಯಾಗಿದೆ. ಉದ್ಯಾವರ ಸಾವಿರ ಜಮಾಹತ್ ಇಂದು ಕ್ಷೇತ್ರದವರಿಗೆ ಅದ್ದೂರಿಯ ಸ್ವಾಗತವನ್ನು ನೀಡಿದೆ. ಎಲ್ಲಾ ಕಡೆಯಲ್ಲೂ ಇದು ಮುಂದುವರಿಯಬೇಕಾಗಿದೆ ಎಂದು ಹೇಳಿದರು.

ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಪ್ರಾಚೀನ ಕಾಲದಿಂದಲೇ ಆಚರಿಸಿಕೊಂಡು ಬರುತ್ತಿರುವ ಅರಸು ದೈವಗಳ ಜಮಾಅತ್ ಭೇಟಿಯು ಇಂದಿಗೂ ಹಿಂದೂ, ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ.

ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಈ ಅನುಷ್ಠಾನ ವಾಡಿಕೆಯಾಗಿದೆ. ಈ ಬಾರಿ ಎರಡನೇ ಶುಕ್ರವಾರ ಮಧ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು 1.30ರ ಹೊತ್ತಿಗೆ ಜಮಾಅತ್‍ಗೆ ತಲುಪಿದವು. ಈ ವೇಳೆ ಜುಮಾ ನಮಾಜ್ ಮುಗಿಸಿ ಸಜ್ಜಾಗಿ ನಿಂತಿದ್ದ ಮಸೀದಿಯ ಆಡಳಿತ ಸಮಿತಿ ಪ್ರತಿನಿಧಿಗಳು ಹಾಗೂ ಸಹಸ್ರಾರು ಮುಸ್ಲಿಂ ಬಾಂಧವರು ಪರಂಪರಾಗತ ರೀತಿಯಲ್ಲಿ ಉದ್ಯಾವರ ಅರಸು ದೈವ ಪಾತ್ರಿಗಳಿಗೆ ಅದ್ದೂರಿ ಸ್ವಾಗತ ನೀಡಿದರು. ದೈವ ಪಾತ್ರಿಗಳು ಜಮಾಅತಿನೊಳಗೆ ಪ್ರವೇಶಿಸಿ ಮಸೀದಿ ಮುಂಭಾಗದಲ್ಲಿ ಜಮಾಅತಿನ ಸರ್ವ ಮುಸ್ಲಿಂ ಬಾಂಧವರನ್ನು ಕೂಡ ಮಾಡ ಅರಸು ದೈವಗಳ ಜಾತ್ರೋತ್ಸವಕ್ಕೆ ಆಹ್ವಾನವಿತ್ತರು. ಮೇ 9 ರಿಂದ 14 ರ ತನಕ ಮಾಡ ಕ್ಷೇತ್ರದ ಉತ್ಸವಕ್ಕೆ ಸಾವಿರ ಜಮಾಅತ್ ವ್ಯಾಪ್ತಿಯಲ್ಲಿರುವ ಮುಸ್ಲಿಂ ಬಾಂಧವರು ಕೂಡ ಪಾಲ್ಗೊಳ್ಳುವ ಮೂಲಕ ಹಿಂದೂ, ಮುಸ್ಲಿಂ ಭಾವೈಕ್ಯತೆಯ ಕೊಂಡಿಯಾಗಿ ಮುಂದುವರಿದಿದೆ.

ಈ ಕ್ಷೇತ್ರದಲ್ಲಿ ಜಾತ್ರೆ ನಡೆಯುವ ನೇಮೋತ್ಸವದ ದಿನದಂದು ಜಮಾಅತ್‍ನ ಸದಸ್ಯರುಗಳು ಕೂರಲು ದೇವಸ್ಥಾನದ ಕಟ್ಟೆಯಲ್ಲಿ ವಿಶೇಷವಾದ ಸ್ಥಳವನ್ನು ನೀಡಲಾಗುತ್ತದೆ. ಮಾತ್ರವಲ್ಲದೆ ದೈವಗಳು ಆಶೀರ್ವದಿಸಿದ ಮಲ್ಲಿಗೆ ಹೂವುಗಳನ್ನು ಕೂಡ ಜಮಾಅತ್‍ನವರಿಗೆ ನೀಡಲಾಗುತ್ತದೆ.ಈ ಪವಿತ್ರವಾದ ಮಾಡ ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಭೇದ ಭಾವವಿಲ್ಲದೆ ಹಿಂದೂ ಮುಸಲ್ಮಾನರು ಭಾಗವಹಿಸುವುದು ವಿಶೇಷತೆಯಾಗಿದೆ. ಜಮಾಅತ್ ಭೇಟಿಗೆ ಉದ್ಯಾವರ ಅರಸು ದೈವಗಳ ಕ್ಷೇತ್ರದ ಮುಖ್ಯಸ್ಥರಾದ ದುಗ್ಗ ಭಂಡಾರಿ, ತಿಮ್ಮ ಭಂಡಾರಿ, ಮುಂಡ ಶೆಟ್ಟಿ, ನಾರಾಯಣ ಗುರಿಕ್ಕಾರ್, ಪದ್ಮ ಗುರಿಕ್ಕಾರ್, ರಘು ಶೆಟ್ಟಿ, ಕಿರಣ್ ಮಾಡ, ರವಿ, ದಯಾಕರ ಮಾಡ ಹಾಗೂ ಎರಡು ವರ್ಣ ಹಾಗೂ ನಾಲ್ಕು ಗ್ರಾಮದವರು ಸೇರಿದಂತೆ ಹಲವರು ಜಮಾಅತ್ ಭೇಟಿಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?