ಕಾರ್ಯಾರಂಭಿಸದ ನೇತ್ರಾವತಿ ಸೇತುವೆಯ ಮೂರು ಸಿಸಿಟಿವಿ

ಉಳ್ಳಾಲ: ಸುಸೈಡ್ ಬ್ರಿಡ್ಜ್ ಎಂದು ಖ್ಯಾತಿ ಪಡೆದಿದ್ದ ನೇತ್ರಾವತಿ ಸೇತುವೆಗೆ ಅಳವಡಿಸಲಾದ ನಾಲ್ಕು ಸಿಸಿಟಿವಿಗಳಲ್ಲಿ ಕೇವಲ ಒಂದು ಸಿಸಿಟಿವಿ ಮಾತ್ರ ಕಾರ್ಯಚರಿಸುತ್ತಿದೆ. ಇತರೆ ಮೂರು ಸಿಸಿಟಿವಿಯ ನಿರ್ವಹಣೆ ಅಸಾಧ್ಯವಾದ ಹಿನ್ನೆಲೆಯಲ್ಲಿ ಮೂಲೆಗೆ ಸೇರಿದೆ.

ಬಹುಕೋಟಿ ಒಡೆಯ ಕೆಫೇ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಆತ್ಮಹತ್ಯೆ ಬಳಿಕ ತೊಕ್ಕೊಟ್ಟು ಸಮೀಪವಿರುವ ನೇತ್ರಾವತಿ ಸೇತುವೆಗೆ ಸೂಸೈಡ್ ಬ್ರಿಡ್ಜ್ ಎಂಬ ಕುಖ್ಯಾತಿಯನ್ನು ಹೋಗಲಾಡಿಸಲು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಮೂಲಕ ಹಲವು ಕ್ರಮ ಕೈಗೊಂಡಿದ್ದರು. ಸೇತುವೆ ಸುಮಾರು 800 ಮೀ. ಉದ್ದವಿದ್ದು, ಸೇತುವೆಯ ನಾಲ್ಕೂ ಬದಿಯೂ ರಕ್ಷಣಾ ಬೇಲಿ ಅಳವಡಿಸುವ ಜೊತೆ 3 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಹೈಟೆಕ್ ಸಿ.ಸಿ ಕ್ಯಾಮೆರಾವನ್ನು ಅಳವಡಿಸಿದ್ದರು.

ಸಿದ್ದಾರ್ಥ್ ಹೆಗ್ಡೆ ಆತ್ಮಹತ್ಯೆ ನಂತರ 20 ಜನ ಹಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ನಾಲ್ವರನ್ನು ರಕ್ಷಿಸಲಾಗಿದ್ದು, 16 ಜನ ಪ್ರಾಣ ಬಿಟ್ಟಿದ್ದಾರೆ. ಹೀಗಾಗಿ ಈ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿತ್ತು. ತಡೆಗೋಡೆಯ ಮೇಲೆ ಐದು ಅಡಿ ಎತ್ತರದ ರಕ್ಷಣಾ ಬೇಲಿ , ಅದರ ಮೇಲ್ಗಡೆ 1 ಅಡಿಯಷ್ಟು ಮುಳ್ಳು ತಂತಿ ಒಟ್ಟು ಈ ಬೇಲಿಗಾಗಿಯೇ 55 ಲಕ್ಷ ರೂ ಖರ್ಚು ಮಾಡಲಾಗಿತ್ತು. ಆನಂತರ ಅತ್ಯಾಧುನಿಕ ತಂತ್ರಜ್ಞಾನದ 3 ಲಕ್ಷ ರೂ ವೆಚ್ಚದ ನಾಲ್ಕೂ ಸಿ.ಸಿ ಕ್ಯಾಮಾರ ಅಳವಡಿಸಲಾಗಿತ್ತು. ಇದರಲ್ಲಿ 500 ಮೀ ದೂರದವರೆಗೆ ಸ್ಪಷ್ಟ ವಿಡಿಯೋ ಲಭ್ಯವಾಗುತ್ತೆ.

ಇದು ವೈರ್‍ಲೆಸ್ ಆಗಿದ್ದು ಇದರ ನೇರ ದೃಶ್ಯ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಲಭ್ಯವಾಗುತ್ತದೆ ಅನ್ನುವ ಮಾಹಿತಿಯನ್ನು ಅಂದು ಉದ್ಘಾಟನೆ ವೇಳೆ ನೀಡಲಾಗಿತ್ತು. 2021ರ ಮಾ.20 ರಂದು ಸೇತುವೆ ತಡೆಬೇಲಿ ಹಾಗೂ ಸಿಸಿಟಿವಿಯ ಉದ್ಘಾಟನೆಯನ್ನು ಶಾಸಕ ವೇದವ್ಯಾಸ್ ಕಾಮತ್ ನಡೆಸಿದ್ದರು. ಅಂದಿನಿಂದ ಇಂದಿನವರೆಗೂ ಮಂಗಳೂರಿನಿಂದ ತೊಕ್ಕೊಟ್ಟು ಭಾಗಕ್ಕೆ ತೆರಳುವಾಗ ಸೇತುವೆ ಆರಂಭದಲ್ಲಿರುವ ಸಿಸಿಟಿವಿ ಮಾತ್ರ ಕಾರ್ಯಾಚರಿಸುತ್ತಿದೆ. ಉಳಿದ ಮೂರು ಸಿಸಿಟಿವಿಗಳು ಮೂಲೆಗುಂಪಾಗಿದೆ.

Related Posts

Leave a Reply

Your email address will not be published.

How Can We Help You?