ಕಡಬದಲ್ಲಿ ಗುಹೆ ಶಿಲಾಯುಗದ ಸಮಾಧಿ ಪತ್ತೆ

ಕಡಬ: ಕುಂಡಾಜೆ ಸಮೀಪ ಸರಕಾರಿ ಗೇರುಬೀಜ ತೋಟದಲ್ಲಿರುವ ಬೃಹತ್ ಗುಹೆ ಶಿಲಾಯುಗದ ಸಮಾದಿ ಗುಹೆ ಎಂದು ಅಧ್ಯಯನಕಾರರು ಸ್ಪಷ್ಟಪಡಿಸಿದ್ದಾರೆ.
ಕುಂಡಾಜೆಯಲ್ಲಿ ಗೇರುತೋಟದಲ್ಲಿ ಬೃಹತ್ ಗುಹೆಯೊಂದಿದ್ದು ಇದು ಪಾಂಡವರ ಗುಹೆ ಎಂದು ಸ್ಥಳೀಯವಾಗಿ ಪ್ರಚಲಿತದಲ್ಲಿತ್ತು. ಇದಕ್ಕೆ ಪುಷ್ಠಿ ಎಂಬಂತೆ ಈ ಪ್ರದೇಶ ಪಾಂಡ್ರಡ್ಕ ಎಂದೇ ಪ್ರಸಿದ್ಧಿಯೂ ಪಡೆದುಕೊಂಡಿತ್ತು.

ಈ ಹಿನ್ನಲೆಯಲ್ಲಿ ಈ ಗುಹೆಯ ಕುರಿತು ಇರುವ ಕುತೂಹಲದಿಂದ ಹಾಗೂ ಇದರ ಬಗ್ಗೆ ಅಧ್ಯಯನಕ್ಕಾಗಿ ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ನಿಶ್ಚಿತ್ ಗೋಳಿತ್ತಡಿಯವರು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವಶಾಸ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಮುರುಗೇಶಿ ಹಾಗೂ ಅವರ ತಂಡದವನ್ನು ಕರೆ ತಂದಿದ್ದರು. ಇದರ ಅಧ್ಯಯನ ನಡೆಸಿರುವ ಮುರುಗೇಶಿಯವರು ಇದೊಂದು ಅಪರೂಪದ ಬೃಹತ್ ಶಿಲಾಯುಗದ ಸಮಾಧಿಯಾಗಿದೆ ಎಂದು ತಿಳಿಸಿದ್ದಾರೆ.

ಇಲ್ಲಿರುವ ಗುಹಾ ಸಮಾಧಿಗಳು ಶಿಲಾಯುಗ ಕಾಲದಲ್ಲಿ ರಚಿಸಲಾದ ಸಮಾಧಿಗಳಾಗಿದ್ದು, ಸಮಾಧಿಯ ಮಧ್ಯಭಾಗದಲ್ಲಿ ಸುಮಾರು ಎರಡರಿಂದ ಮೂರು ಅಡಿ ವ್ಯಾಸದ ರಂಧ್ರವನ್ನು ಸುಮಾರು ಒಂದು ಮೀಟರ್ ಆಳದ ವರೆಗೆ ಸಿಲಿಂಡರ್ ಆಕಾರದಲ್ಲಿ ಕೆಂಪು ಮುರಕಲ್ಲಿನ ಭೂಪಾತಳಿಯಲ್ಲಿ ಕೊರೆಯಲಾಗಿದೆ. ಇದರ ಕೆಳಭಾಗದಲ್ಲಿ ಅರ್ಧಗೋಳಾಕೃತಿಯ ಗುಹೆಯನ್ನು ಅಗತ್ಯವಾದ ಆಳ ಹಾಗೂ ಸುತ್ತಳತೆಯೊಂದಿಗೆ ಅಗೆದು ರಚಿಸಲಾಗಿದ್ದು, ಇದು ಬಹುತೇಕ ಬೌದ್ಧ ಧರ್ಮದ ಸ್ಥೂಪಗಳ ರಚನೆಯನ್ನು ಹೋಲುತ್ತದೆ. ಕರ್ನಾಟಕದ ಕರಾವಳಿಯಲ್ಲಿ ಇಂತಹ ರಚನೆಗಳು ಸಾಮಾನ್ಯವಾಗಿ ಕಂಡು ಬರುತ್ತವೆ ಎಂದು ಅವರು ತಿಳಿಸಿದ್ದಾರೆ.

ಆದರೆ ಕೆಂಪು ಮುರಕಲ್ಲಿನ ಮೇಲೆ ದೊಡ್ಡ ವೃತ್ತವನ್ನು ರಚಿಸಿ ಸಮಾಧಿಯ ಇರುವನ್ನು ಗುರುತಿಸಿರುವುದು ಕುಂಡಾಜೆಯಲ್ಲಿರುವ ಗುಹಾ ಸಮಾಧಿಯ ವಿಶೇಷತೆಯಾಗಿದೆ. ಆ ವೃತ್ತದ ಕೆಳಭಾಗದಲ್ಲಿ ಆ ವೃತ್ತದ ವಿಸ್ತಾರಕ್ಕೆ ಅನುಗುಣವಾಗಿ ಗುಹೆಯನ್ನು ರಚಿಸಲಾಗಿದೆ. ಆ ವೃತ್ತದ ವಿಸ್ತಾರ ಸುಮಾರು ಏಳು ಅಡಿಯಾಗಿದ್ದು, ಕೆಳಗಿನ ಗುಹೆಯೂ ಏಳು ಅಡಿ ವಿಸ್ತಾರವಾಗಿದೆ. ಇದೊಂದು ಅಪರೂಪದ ಹೊಸ ಮಾದರಿಯಾಗಿದೆ. ಗುಹೆಯ ಮಧ್ಯಭಾಗದಲ್ಲಿ ಅಗ್ನಿಕುಂಡವನ್ನು ಹೋಲುವ ಒಂದು ಗುಂಡಿ ಕಂಡು ಬಂದಿದ್ದು, ಇದೂ ಸಹ ಒಂದು ವಿಶೇಷ ಅಂಶವಾಗಿದೆ. ಗುಹೆಯ ಒಳಭಾಗದಲ್ಲಿ ಅತ್ಯಲ್ಪ ಪ್ರಮಾಣದ ಕೆಂಪು, ಕಪ್ಪು ಮತ್ತು ಕೆಂಪು ಬಣ್ಣದ ಮಡಕೆಯ ಚಿಕ್ಕ, ಚಿಕ್ಕ ಚೂರುಗಳು ಕಂಡು ಬಂದಿವೆ. ಬಹುಶಃ ಸಮಾಧಿಯ ಅವಶೇಷಗಳನ್ನು ದೋಚಿರುವಂತೆ ಗೋಚರಿಸುತ್ತಿದೆ ಎಂದು ಮುರುಗೇಶಿಯವರು ತಿಳಿಸಿದ್ದಾರೆ.

Related Posts

Leave a Reply

Your email address will not be published.

How Can We Help You?