ಎಪ್ರಿಲ್ 28ರಂದು ಕಮಲೋತ್ಸವ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಒಡ್ಡೂರು ಫಾರ್ಮ್ನಲ್ಲಿ ಎ.28ರಂದು ಬಿಜೆಪಿ ಕಾರ್ಯಕರ್ತರ ಸಮಾಗಮ ‘ಕಮಲೋತ್ಸವ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದ್ದಾರೆ.
ಅವರು ಬಂಟ್ವಾಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಅಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಈ ಕಾರ್ಯಕ್ರಮ ಜಾತ್ರೋತ್ಸವ ಮಾದರಿಯಲ್ಲಿ ವಿವಿಧ ಆಟೋಟ ಸ್ಪರ್ಧೆ, ಮನೋರಂಜನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕ್ಷೇತ್ರದ ಸುಮಾರು 15000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮಂಗಳೂರು ಉತ್ತರ ಕ್ಷೇತ್ರದ 500 ಕಾರ್ಯಕರ್ತರು ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಅಂಗಾರ ಹಾಗೂ ಜಿಲ್ಲೆಯ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ. ಒಂದು ಗಂಟೆ ಅವಧಿಯ ಸಭಾ ಕಾರ್ಯಕ್ರಮದ ಬಳಿಕ ಜಾತ್ರೆ ಮಾದರಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಇದಲ್ಲದೆ ಪುರುಷರಿಗೆ ವಾಲಿಬಾಲ್ (7 ತಂಡಗಳು) , ಮಹಿಳೆಯರಿಗೆ ತ್ರೋಬಾಲ್ ಸ್ಪರ್ಧೆ (7 ತಂಡಗಳು), ಹಗ್ಗಜಗ್ಗಾಟ, ವಿವಿಧ ವಿಭಾಗದಲ್ಲಿ ಶಾಟ್ಪುಟ್, ಸಂಗೀತ ಕುರ್ಚಿ, ಮಕ್ಕಳಿಗಾಗಿ ಗೋಣಿಚೀಲ ಓಟ, ಲಿಂಬೆ ಚಮಚ ಮೊದಲಾದ ಆಟೋಟ ಸ್ಪರ್ಧೆಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಜನಪದ ಹಾಗೂ ದೇಶಭಕ್ತಿ ಗೀತೆ ಗಾನ ಸ್ಪರ್ಧೆ, ಗಾಳಿಪಟ ಸ್ಪರ್ಧೆ ನಡೆಯಲಿದೆ. ಸಂಜೆ 4:30ಕ್ಕೆ ಸಮಾರೋಪ ಹಾಗೂ ಬಹುಮಾನ ವಿತರಣೆ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ದೇವದಾಸ ಶೆಟ್ಟಿ, ರೊನಾಲ್ಡ್ ಡಿಸೋಜ, ಯಶೋದರಾ, ಡೊಂಬಯ್ಯ ಉಪಸ್ಥಿತರಿದ್ದರು.