ಕಾಲು ನೋವಿನ ಮಧ್ಯೆಯೂ ಸಾಧನೆ ಮಾಡಿದ ಕಂಬಳದ ಉಸೇನ್ ಬೋಲ್ಟ್

ಈ ಬಾರಿ 2021 ಡಿಸೆಂಬರ್ನಿಂದ ಕಂಬಳ ಸೀಸನ್ ಆರಂಭಗೊಂಡಿದ್ದು ಹೊಕ್ಕಾಡಿಗೋಳಿಯಲ್ಲಿ ಮೊದಲ ಕಂಬಳ ನಡೆದಿತ್ತು. ಮೊದಲ ಕಂಬಳದಲ್ಲಿ ಬಹುಮಾನಗಳನ್ನು ಪಡೆದುಕೊಳ್ಳದ ಶ್ರೀನಿವಾಸ ಗೌಡರು ಮೂಡುಬಿದಿರೆಯಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಕೋಣಗಳನ್ನು ಓಡಿಸಿ ಹಗ್ಗ ಹಿರಿಯ ವಿಭಾಗದಲ್ಲಿ ದ್ವಿತೀಯವನ್ನು ಬಹುಮಾನವನ್ನು ಪಡೆದುಕೊಳ್ಳುವ ಮೂಲಕ ಇನ್ನಿಂಗ್ಸ್ನ್ನು ಆರಂಭಿಸಿದರು.

2021-22ನೇ ಕಂಬಳ ಸೀಸನ್ನಲ್ಲಿ ನಾಲ್ಕನೇ ಕಂಬಳವು ಕಕ್ಕೆಪದವಿನಲ್ಲಿ ನಡೆದಿದ್ದು ಈ ಸಂದರ್ಭ ಶ್ರೀನಿವಾಸ ಗೌಡ ಅವರು ಮಿಜಾರು ಶಕ್ತಿಪ್ರಸಾದ್ ನಿಲಯದ ಕೋಣಗಳನ್ನು ಓಡಿಸುವ ಸಂದರ್ಭದಲ್ಲಿ ಕೋಣವೊಂದು ಗೌಡ್ರ ಕಾಲನ್ನು ತುಳಿದಿದ್ದು ಗಂಭಿರವಾಗಿ ಗಾಯಗೊಂಡ ಶ್ರೀನಿವಾಸ್ ಅವರು ಕರೆಯಲ್ಲಿಯೇ ಕುಸಿದು ಬಿದ್ದರು. ಆಗ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಕಾಲಿಗೆ ಸರ್ಜರಿ ಮಾಡಲಾಗಿತ್ತು. ಇದರಿಂದಾಗಿ ಬಾರಾಡಿ ಮತ್ತು ಅಡ್ವೆ ನಂದಿಕೂರು ಕಂಬಳಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಮತ್ತು ಐಕಳ ಕಂಬಳದಲ್ಲಿ ಭಾಗವಹಿಸಿದ್ದರೂ ಪದಕ ಗೆಲ್ಲಲಾಗಿಲ್ಲ. ನಂತರ ಕಾಲು ನೋವಿನ ಮಧ್ಯೆಯೂ ಕಂಬಳದ ಕರೆಗೆ ಇಳಿದ ಓಟಗಾರ ಚಿನ್ನದ ಬೇಟೆಯನ್ನು ಮುಂದುವರೆಸಿ ಸಾಧನೆಗೈದರು.

ಕಳೆದ 10 ವರ್ಷಗಳಿಂದ ಕಂಬಳದ ಕರೆಯಲ್ಲಿ ಕೋಣಗಳನ್ನು ಓಡಿಸುತ್ತಿರುವ ಶ್ರೀನಿವಾಸ ಗೌಡ ಅವರು ಮೂರು ವರ್ಷಗಳಿಂದ ಕಂಬಳದ ಕರೆಯಲ್ಲಿ ವಿಶೇಷ ಸಾಧನೆಯನ್ನು ಮಾಡುತ್ತಾ ಬಂದಿದ್ದಾರೆ. 2019-20ರಲ್ಲಿ ಐಕಳದಲ್ಲಿ ನಡೆದ ಕಂಬಳದಲ್ಲಿ 142.50ಮೀ. ದೂರವನ್ನು 13.44 ಸೆಕುಂಡು (100ಮೀ.ಗೆ 9.55ಗೆ)ಕ್ರಮಿಸುವ ಮೂಲಕ ವೇಗದ ಓಟಗಾರ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದಿದ್ದರು. ನಂತರ 2021ರಲ್ಲಿ ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಓಡಿಸಿ 8.96 ಸೆಕುಂಡುಗಳಲ್ಲಿ ಕ್ರಮಿಸಿ ಕಂಬಳದ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಿದ್ದರು.