ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಬೆಂಬಲವಿದೆ : ಮೂಡುಬಿದರೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿಕೆ

ಮೂಡುಬಿದಿರೆ: ಇಲ್ಲಿನ ಜನತೆಯ ಹಲವು ವರ್ಷಗಳ ಕನಸಾಗಿರುವ ತಾಲ್ಲೂಕು ಆಡಳಿತ ಸೌಧವು ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟನೆಗೊಳ್ಳುವ ಮೂಲಕ ಉತ್ತಮ ಅಭಿವೃದ್ಧಿ ಕಾರ್ಯ ಈಡೇರಿದಂತಾಗಿದೆ. ಈಗಿನ ಜಾಗಕ್ಕೆ ವಿಸ್ತಾರವಾದ ಕಟ್ಟಡವನ್ನು ಸರಕಾರದ ಮೂಲಕ ಕಾಯ್ದಿರಿಸುವಲ್ಲಿ ಹಾಗೂ ಮೂಡುಬಿದಿರೆ ತಾಲ್ಲೂಕು ಆಗಬೇಕೆಂಬ ನಿಟ್ಟಿನಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ ಮತ್ತು ನಾನು ಶ್ರಮಿಸಿದ್ದೆವು. ನಂತರ ಈಗಿನ ಶಾಸಕ ಉಮಾನಾಥ ಕೋಟ್ಯಾನ್ ಪ್ರಯತ್ನದಿಂದ ಸುಂದರವಾದ ಆಡಳಿತ ಸೌಧ ನಿರ್ಮಾಣವಾಗಲು ಸಾಧ್ಯವಾಗಿದೆ. ಇಂತಹ ಉತ್ತಮ ಅಭಿವೃದ್ಧಿ ಕಾರ್ಯಕ್ಕೆ ತಮ್ಮ ಬೆಂಬಲವಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಅವರು ಸಮಾಜಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೂಡುಬಿದಿರೆ ತಾಲೂಕು ಘೋಷಣೆಯಾಗಿ ಆ ಬಳಿತ ಕಂದಾಯ ಸಚಿವರಾಗಿದ್ದ ಆರ್.ವಿ.ದೇಶ್‍ಪಾಂಡೆ ಅವರು ತಾಲೂಕು ಆಡಳಿತ ಸೌಧಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಅಭಿವೃದ್ಧಿ ಕೆಲಸವನ್ನು ಯಾವುದೇ ಪಕ್ಷದವರು ಮಾಡಿದರೂ ತಾನು ಅಭಿನಂದಿಸುತ್ತೇವೆ ಹೊರತು ರಾಜಕೀಯ ಮಾಡಲಾರೆ. ನಾಳೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ತಾನು ಭಾಗವಹಿಸುತ್ತೇನೆ ಎಂದರು.
ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಮೂಡುಬಿದಿರೆಗೆ ಒಳಚರಂಡಿ ಯೋಜನೆಗಾಗಿ ಸಾಕಷ್ಟು ಶ್ರಮಿಸಿದ್ದೆ ಆದರೆ ಅದು ಸಾಧ್ಯವಾಗಿಲ್ಲ. ಇದೀಗ ರಾಜ್ಯ ಸರಕಾರದಲ್ಲಿ ಸಾಕಷ್ಟು ಅನುದಾನವಿದ್ದು ಮುಖ್ಯ ಮಂತ್ರಿಗಳು ಮೂಡುಬಿದಿರೆಗೆ ಅವಶ್ಯಕವಾಗಿರುವ ಒಳಚರಂಡಿ ಯೋಜನೆಗೆ ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು. ಆದರೆ ಮೂಡುಬಿದಿರೆಯಲ್ಲಿ 100 ವರ್ಷಗಳ ಇತಿಹಾಸವಿರುವ ಪ್ರವಾಸಿ ಮಂದಿರವನ್ನು ನೆಲಸಮ ಮಾಡಿ ಅಲ್ಲಿ ನೂತನ ಪ್ರವಾಸಿ ಮಂದಿರವನ್ನು ನಿರ್ಮಿಸುವುದಕ್ಕೆ ತನ್ನ ವಿರೋಧವಿದೆ. ಪ್ರವಾಸಿ ಮಂದಿರಗಳಲ್ಲಿ ಸಚಿವನಾಗಲೀ, ಶಾಸಕನಾಗಲೀ, ಮುಖ್ಯ ಮಂತ್ರಿಯಾಗಲೀ ತಂಗುವುದಿಲ್ಲ. ಅವರೆಲ್ಲಾ ಐಶಾರಾಮಿ ಹೊಟೇಲ್‍ಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಪ್ರವಾಸಿ ಮಂದಿರಗಳ ಅಭಿವೃದ್ಧಿಯ ಹೆಸರಿನಲ್ಲಿ ಕೋಟಿ ಕೋಟಿ ಅನುದಾನ ಒದಗಿಸುವುದು ಭ್ರಷ್ಠಾಚಾರಕ್ಕೆ ಕಾರಣವಾಗುತ್ತದೆ. ಯಾವುದೇ ರೀತಿಯಲ್ಲೂ ಸರಕಾರದ ಹಣವ್ಯರ್ಥವಾಗಬಾರದೆಂದು ಅವರು ತಿಳಿಸಿದರು.


ಪುರಸಭೆಯ ಅಭಿವೃದ್ಧಿ ವಿಚಾರದಲ್ಲಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಆಡಳಿತರೂಢ ಬಿಜೆಪಿಗೆ ಸಹಕಾರ ನೀಡುತ್ತಾ ಬಂದರೂ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದನ್ನು ಪುರಸಭೆ ನಿಲ್ಲಿಸಬೇಕು ಎಂದು ಪುರಸಭೆ ಕಾಂಗ್ರೆಸ್ ವಿಪಕ್ಷ ನಾಯಕ ಪಿ.ಕೆ ಥೋಮಸ್ ಆಗ್ರಹಿಸಿದರು.
ಎಸ್‍ಎಫ್‍ಸಿ ವಿಶೇಷ ಅನುದಾನ ಹಾಗೂ ನಗರೋತ್ಥಾನ ಯೋಜನೆಯ ರೂ 10 ಕೋಟಿ ಅನುದಾನದ ಹಂಚಿಕೆಯಲ್ಲಿ ಕಾಂಗ್ರೆಸ್‍ನ 11 ಸದಸ್ಯರನ್ನು ಕಡೆಗಣಿಸಿರುವುದರಿಂದ ಈ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಆಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿದ್ದರು. ಸದ್ರಿ ಅನುದಾನ ವಾಪಾಸು ಹೋಗಿ ಅಭಿವೃದ್ಧಿಗೆ ತೊಂದರೆ ಆಗುತ್ತದೆಯೆಂದು ಆಡಳಿತ ಪಕ್ಷದವರು ನಮ್ಮನ್ನು ಮನವೊಲಿಸಿದರಿಂದ ನಾವು ಸುಮ್ಮನಾದೆವು. ಅಭಿವೃದ್ಧಿಗೆ ನಾವು ಸಹಕಾರ ನೀಡುವಾಗ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬಾರದು. ಕಳೆದ ಮೂರು ವರ್ಷಗಳಿಂದ ಪುರಸಭೆ ವಿವಿಧ ರೀತಿಯ ತೆರಿಗೆಗಳನ್ನು ಏರಿಸಿ ಜನರಿಗೆ ಹೊರೆ ಉಂಟುಮಾಡಿದೆ. ನಮ್ಮ ಆಕ್ಷೇಪವನ್ನು ನಿರ್ಲಕ್ಷಿಸಿದೆ. ಪುರಸಭೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಹೇಳಿದ್ದ ಬಿಜೆಪಿ ಈಗ ಮಾತು ಉಳಿಸಲಿಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾ ಮುಖಂಡ ಮಿಥುನ್ ರೈ, ಪುರಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?