ಎಪಿಎಂಸಿ ರಸ್ತೆಯ ರೈಲ್ವೆ ಕ್ರಾಸಿಂಗ್ನಲ್ಲಿ ಅಂಡರ್ ಪಾಸ್ ನಿರ್ಮಾಣ : ಮೇ 21 ಕಾಮಗಾರಿಗೆ ಗುದ್ದಲಿ ಪೂಜೆ

ಪುತ್ತೂರು: ಗ್ರಾ.ಪಂ.ಗಿದ್ದ 9/11 ಅನುಮೋದನಾ ಅಧಿಕಾರವನ್ನು ಮೊಟಕುಗೊಳಿಸಿ ಗ್ರಾಮಾಂತರ ಪ್ರದೇಶವರು ಮಂಗಳೂರು ಮುಡಾದಿಂದ ಅನುಮತಿ ಪಡೆದುಕೊಳ್ಳುವಂತೆ ಅಸಮಂಜಸ ಅದೇಶ ಮಾಡಲಾಗಿದೆ. ಇದರಿಂದ ಕೃಷಿಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ತೊಂದರೆ ಉಂಟಾಗಿದೆ. ಈ ಹೊಸ ಆದೇಶ ಹಿಂಪಡೆದು ಹಿಂದಿನ ನಿಯಮವನ್ನೇ ಮುಂದುವರಿಸಬೇಕು ಎಂದು ಸರಕಾರಕ್ಕೆ ಪತ್ರ ಬರೆಯಲು ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿದೆ.
ಎಪಿಎಂಸಿ ಸಾಮಾನ್ಯ ಸಭೆಯು ಸಮಿತಿಯ ಪ್ರಾಂಗಣದಲ್ಲಿ ದಿನೇಶ್ ಮೆದು ಅಧ್ಯಕ್ಷತೆಯಲ್ಲಿ ನಡೆಯಿತು.ಪ್ರಾಧಿಕಾರವು ನಗರಕ್ಕೆ ಸೀಮಿತವಾಗಿರುವುದರಿಂದ ಗ್ರಾಮೀಣ ಭಾಗದ ಜನರು ನಗರಕ್ಕೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ 9/11 ಪ್ಲಾನ್ಗೆ ಅನುಮತಿ ನೀಡುವ ಅಧಿಕಾರವಿತ್ತು. ಇದರಿಂದ ಒಂದು ತಿಂಗಳಲ್ಲಿ ಅನುಮತಿ ದೊರೆಯುತಿತ್ತು. ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ನೀಡಿದ ಕಾರಣ ಆರು ತಿಂಗಳು ಕಾದರೂ ಸಿಗದ ಸ್ಥಿತಿ ಇದೆ. ಜನರು ದೂರದ ಮಂಗಳೂರಿಗೆ ಕಿ.ಮೀ. ಗಟ್ಟಲೆ ಓಡಾಟ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಎಪಿಎಂಸಿ ಸದಸ್ಯರು ಪ್ರಸ್ತಾವಿಸಿದರು.

ಬಹು ನಿರೀಕ್ಷೆಯ ಎಪಿಎಂಸಿ ರಸ್ತೆಯ ರೈಲ್ವೆ ಕ್ರಾಸಿಂಗ್ನಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ. ರಾಘು ರಾಜ್ ಸಂಸ್ಥೆಯು ಟೆಂಡರ್ ಪಡೆದುಕೊಂಡಿದ್ದು, ಮೇ 21 ರಂದು ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಸಲು ರೈಲ್ವೇ ಇಲಾಖೆಯ ಸೂಚನೆಯಂತೆ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಶಾಸಕರು, ಸಂಸದರ ಜತೆ ಮಾತುಕತೆ ನಡೆಸಲಾಗಿದ್ದು, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಸಂಸದರು, ಸಚಿವರು, ಶಾಸಕರು, ಉಸ್ತುವಾರಿ ಸಚಿವರ ಭಾಗವಹಿಸುವಿಕೆ ದೃಢಪಡಿಸಲಾಗಿದೆ. ಜತೆಗೆ ಕೇಂದ್ರ ರೈಲ್ವೇ ಸಚಿವರ ಭಾಗವಹಿಸುವಿಕೆಯ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅಧ್ಯಕ್ಷ ದಿನೇಶ್ ಮೆದು ತಿಳಿಸಿದರು.
ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ,ಎಪಿಎಂಸಿ ಉಪಾಧ್ಯಕ್ಷ ಮಂಜುನಾಥ ಎನ್.ಎಸ್., ಸದಸ್ಯರಾದ ಪುಲಸ್ತಾ?ಯ ರೈ, ಬಾಲಕೃಷ್ಣ ಬಾಣಜಾಲು, ಮೇದಪ್ಪ ಗೌಡ, ತೀರ್ಥರಾಮ, ಶಕೂರ್ ಹಾಜಿ, ಕಾರ್ತಿಕ್ ರೈ, ತ್ರಿವೇಣಿ ಪರ್ವೋಡಿ, ಕೊರಗಪ್ಪ, ಕೃಷ್ಣಕುಮಾರ್ ರೈ, ಕುಶಾಲಪ್ಪ ಗೌಡ, ಬಾಬು, ಮೋಹನಾಂಗಿ ಪಾಲ್ಗೊಂಡರು.