ದೇಶದ ಸಂಪತ್ತನ್ನು ಲೂಟಿ ಮಾಡುವ ಕಾರ್ಪೊರೇಟ್ ಕಂಪೆನಿಗಳ ವಿರುದ್ಧ ಕಾರ್ಮಿಕ ವರ್ಗ ಒಂದಾಗಬೇಕು – ಸುಕುಮಾರ್

ದೇಶದಲ್ಲಿರುವ ಅಗಾಧ ಸಂಪತ್ತು ದೇಶದ ಕಾರ್ಮಿಕ ವರ್ಗಕ್ಕೆ ಹಾಗೂ ಜನಸಾಮಾನ್ಯರಿಗೆ ಸೇರಿದ್ದೇ ಹೊರತು ಕೇವಲ ಕಾರ್ಪೊರೇಟ್ ಕಂಪೆನಿಗಳಿಗೆ ಮಾತ್ರ ಸೇರಿದ್ದಲ್ಲ.ಆದರೆ ಇಂದು ದೇಶವನ್ನಾಳುವ ಸರಕಾರಗಳು ನಿರಂತರವಾಗಿ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶವಿರೋಧಿಯಾಗಿ ವರ್ತಿಸುತ್ತಿದೆ.ಇಂತಹ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪೆನಿಗಳ ಲೂಟಿಕೋರತನವನ್ನು ಬಯಲಿಗೆಳೆಯುವ ಮೂಲಕ ಕಾರ್ಮಿಕ ವರ್ಗ ಒಂದಾಗಬೇಕು ಎಂದು ಹಿರಿಯ ಕಾರ್ಮಿಕ ಮುಖಂಡರಾದ ಸುಕುಮಾರ್ ರವರು ಸೇರಿದ್ದ ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.

ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಮಂಗಳೂರಿನಲ್ಲಿ ಜರುಗಿದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು ಈ ಮಾತುಗಳನ್ನು ಹೇಳಿದರು.

ಮುಂದುವರಿಸುತ್ತಾ ಅವರು, ಕಾರ್ಮಿಕ ಕಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡಿ ಕಾರ್ಮಿಕರ ಹಕ್ಕುಗಳನ್ನು ನಾಶ ಮಾಡುವಲ್ಲಿ ಕೇಂದ್ರ ಸರಕಾರ ಪಿತೂರಿ ನಡೆಸುತ್ತಿದೆ.ಮತ್ತೆ ದೇಶದಲ್ಲಿ ಕಾರ್ಮಿಕರನ್ನು 12 – 14 ಗಂಟೆಗಳ ಕಾಲ ದುಡಿಸುವಂತಹ ಹುನ್ನಾರ ನಡೆಯುತ್ತಿದೆ.ಈ ಮೂಲಕ 8 ಗಂಟೆಯ ದುಡಿಮೆಗಾಗಿ ಪ್ರಾರಂಭಗೊಂಡ ಚಿಕಾಗೋ ನಗರದ ಸಮರಧೀರ ಹೋರಾಟವನ್ನು ದೇಶದಲ್ಲಿ ಮತ್ತೆ ಆರಂಭಿಸಲು ಕಾರ್ಮಿಕ ವರ್ಗ ಸನ್ನದ್ದರಾಗಬೇಕಾಗಿದೆ ಎಂದು ಹೇಳಿದರು

ಪ್ರಾಸ್ತಾವಿಕವಾಗಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ವೈಫಲ್ಯವನ್ನು ಮರೆಮಾಚಲು ಹಿಂದುತ್ವದ ಅಜೆಂಡಾವನ್ನು ಮುಂದಿಟ್ಟು ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಅಲ್ಪಸಂಖ್ಯಾತರ ಮೇಲೆ ವಿನಾಃ ಕಾರಣ ಧಾಳಿ ನಡೆಸಲಾಗುತ್ತಿದೆ.ಈ ಮೂಲಕ ಕಾರ್ಮಿಕ ವರ್ಗದ ಐಕ್ಯತೆಯನ್ನು ಮುರಿಯಲು ಷಡ್ಯಂತ್ರ ನಡೆಸುವ ಬಿಜೆಪಿ ಸಂಘಪರಿವಾರದ ವಿರುದ್ದ ಕಾರ್ಮಿಕ ವರ್ಗ ಜಾಗ್ರತಗೊಳ್ಳಬೇಕಾಗಿದೆ ಎಂದು ಹೇಳಿದರು

ಸಭೆಯನ್ನುದ್ದೇಶಿಸಿ ಬ್ಯಾಂಕ್ ಅಧಿಕಾರಿಗಳ ಅಖಿಲ ಭಾರತ ಮುಖಂಡರಾದ ರಾಘವ ಕೆ, ಸುರೇಶ್ ಹೆಗ್ಡೆ,ಬೀಡಿ ಕಾರ್ಮಿಕರ ಮುಖಂಡರಾದ ಜಯಂತಿ ಶೆಟ್ಟಿ, ವಿಮಾ ನೌಕರರ ಸಂಘದ ನಾಯಕರಾದ ಅಲ್ಬನ್ ಮಸ್ಕರೇನಸ್,ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ಪುರುಷೋತ್ತಮ ಪೂಜಾರಿ, ವಕೀಲರ ಸಂಘದ ನಾಯಕರಾದ ಯಶವಂತ ಮರೋಳಿಯವರು ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಮೇ ದಿನ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ಕ್ರಷ್ಣಪ್ಪ ಕೊಂಚಾಡಿಯವರು ವಹಿಸಿದ್ದರು.ವೇದಿಕೆಯಲ್ಲಿ ಬೀಡಿ ಕಾರ್ಮಿಕರ ಮುಖಂಡರಾದ ಭಾರತಿ ಬೋಳಾರ,ಕಟ್ಟಡ ಕಾರ್ಮಿಕರ ನಾಯಕರಾದ ರವಿಚಂದ್ರ ಕೊಂಚಾಡಿ,ಬಂದರು ಶ್ರಮಿಕ ಸಂಘದ ವಿಲ್ಲಿ ವಿಲ್ಸನ್, ಬೀದಿಬದಿ ವ್ಯಾಪಾರಸ್ಥರ ಸಂಘದ ನಾಯಕರಾದ ಬಿ.ಕೆ.ಇಮ್ತಿಯಾಜ್,DHS ನಾಯಕರಾದ ರಾಧಾಕ್ರಷ್ಣ, DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್, ವಿಧ್ಯಾರ್ಥಿ ನಾಯಕರಾದ ವಿನಿತ್ ದೇವಾಡಿಗ ಮುಂತಾದವರು ಹಾಜರಿದ್ದರು.


CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರುರವರು ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ರವಿಚಂದ್ರ ಕೊಂಚಾಡಿಯವರು ಸ್ವಾಗತಿಸಿದರೆ ಕೊನೆಯಲ್ಲಿ ಯುವನಾಯಕರಾದ ನವೀನ್ ಕೊಂಚಾಡಿಯವರು ವಂದಿಸಿದರು.

Related Posts

Leave a Reply

Your email address will not be published.

How Can We Help You?