ಹಡಿಲು ಬಿದ್ದ ಗದ್ದೆಯಲ್ಲಿ ನಳನಳಿಸುತ್ತಿರುವ ತೆನೆ : ಉದ್ಯಮಿ ನಾಗೇಶ್ ಸಾಲ್ಯಾನ್ ಕೃಷಿ ಸಾಧನೆಯ ಯಶೋಗಾಥೆ

ಬಂಟ್ವಾಳ: ಕೆಲವು ವರ್ಷಗಳ ಹಿಂದೆ ಹಡಿಲು ಬಿದ್ದಿದ್ದ ಕೃಷಿ ಭೂಮಿ ಈಗ ಸುಡುವ ಬಿಸಿಲಿನಲ್ಲೂ ಬತ್ತದ ಬೆಳೆಯಿಂದ ನಳನಳಿಸುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ಬಂಗಾರದ ತೆನೆ ಬೆಳೆದು ನಿಂತತೆ ಭಾಸವಾಗುತ್ತಿದೆ.. ತಾನು ಕೃಷಿಕನಲ್ಲದಿದ್ದರೂ, ಭತ್ತ ಬೇಸಾಯದ ಅನುಭವವಿಲ್ಲದೇ ಇದ್ದರೂ ಕೂಡ ಕೃಷಿಯ ಮೇಲಿನ ಪ್ರೀತಿ, ಶ್ರದ್ಧೆಯಿಂದ ಮಾಡಿದ ಕೆಲಸದಿಂದಾಗಿ ಇಂದು ಭೂಮಿತಾಯಿ ಸಂತೃಪ್ತಳಾಗಿ ಉತ್ತಮ ಫಲ ನೀಡಿದ್ದಾಳೆ. ಬಿಸಿಲ ತಾಪಕ್ಕೆ ಸುರಿಸಿದ ಬೆವರು ವ್ಯರ್ಥವಾಗದಂತೆ ಕಾಪಾಡಿದ್ದಾಳೆ. ಇದು ಬಂಟ್ವಾಳ ಯುವ ಉದ್ಯಮಿ ನಾಗೇಶ್ ಸಾಲ್ಯಾನ್ ಅವರ ಕೃಷಿ ಸಾಧನೆಯ ಯಶೋಗಾಥೆ.

ಬಂಟ್ವಾಳದ ಬೈಪಾಸ್‍ನಲ್ಲಿರುವ ಸೌತಡ್ಕ ಫರ್ನಿಚರ್ಸ್‍ನ ಮಾಲಕರಾಗಿರುವ ನಾಗೇಶ್ ಸಾಲ್ಯಾನ್ ಅವರಿಗೆ ತನ್ನ ಉದ್ದಿಮೆಯ ಜೊತೆ ಹವ್ಯಾಸವಾಗಿ ಬತ್ತದ ಬೇಸಾಯ ಮಾಡಬೇಕು ಎನ್ನುವ ಆಸೆ. ಆದರೆ ತನಗೆ ಬೇಸಾಯ ಮಾಡಲು ಗದ್ದೆ ಇಲ್ಲದೇ ಇದ್ದುದರಿಂದ ಈ ಆಸೆಯನ್ನು ಈಡೇರಿಸುವುದು ಸ್ವಲ್ಪ ಕಷ್ಟ ಸಾಧ್ಯವಾಗಿತ್ತು. ಈ ನಡುವೆ ಬಾಳೆಹಿತ್ಲುವಿನಲ್ಲಿ ಸುಮಾರು ಮೂರವರೆ ಎಕರೆ ಗದ್ದೆ ಕೃಷಿ ಭೂಮಿ ಖಾಲಿಯಿರುವುದಾಗಿ ತಿಳಿದ ನಾಗೇಶ್ ಸಾಲ್ಯಾನ್ ಜಮೀನಿನ ಮಾಲಕ ನಾಗೇಶ್ ಬಾಳೆಹಿತ್ಲು ಅವರಲ್ಲಿ ತನ್ನ ಇಂಗಿತ ವ್ಯಕ್ತಪಡಿಸಿದಾಗ ಸಂತೋಷದಿಂದಲೇ ಬೇಸಾಯ ಮಾಡಲು ಒಪ್ಪಿಗೆ ನೀಡಿದ್ದರು

.ಹಸಿರು ಕ್ರಾಂತಿಯತ್ತ ಹೆಜ್ಜೆ..
ಕಳೆದ ಜ.15ರಂದು ವಿಶಾಲವಾದ ಗದ್ದೆಯನ್ನು ಯಾಂತ್ರೀಕೃತ ವಿಧಾನದಲ್ಲಿ ಉಳುಮೆ ಮಾಡಿ ಬತ್ತದ ಬೇಸಾಯ ಆರಂಭಿಸಿದರು. ಬಳಿಕ ಉಮಾ ತಳಿಯ ಸುಮಾರು 97 ಕೆ.ಜಿ. ಬೀಜವನ್ನು ಬಿತ್ತನೆ ಮಾಡಿದರು. ಉತ್ತಮವಾಗಿ ಬೆಳೆ ಬಂದರೂ ದಿನ ಕಳೆದಂತೆ ಬೆಂಕಿ ರೋಗ ಆವರಿಸಿತು, ಗದ್ದೆಯಲ್ಲಿ ಕಳೆ ತುಂಬಿ ಕೊಂಡು ಬೆಳೆ ಹಾಳಾಗುವ ಸ್ಥಿತಿ ಎದುರಾಯಿತು. ಕಷ್ಟ ಪಟ್ಟು ಬೆಳೆದ ಬೆಳೆ ಕಣ್ಣ ಮುಂದೆಯೇ ನಾಶವಾಗುವುದೋ ಎನ್ನುವ ಆತಂಕ ನಾಗೇಶ್ ಸಾಲ್ಯಾನ್ ಅವರನ್ನು ಕಾಡಲಾರಂಭಿಸಿತು. ಆರಂಭದಲ್ಲಿ ಉದ್ದಿಮೆಯ ಜೊತೆ ಕೃಷಿಯತ್ತ ಒಲವು ತೋರಿದಾಗ ಕೆಲವು ಮಂದಿ ಅಣಕಿಸಿದ್ದರು. ಬೆಳೆ ಹಾಳಾದರೆ ಮತ್ತೆ ಟೀಕೆಯ ಮಾತುಗಳನ್ನು ಕೇಳಬೇಕೆನೋ ಎನ್ನುವ ಅಳುಕು ಅವರನ್ನು ಕಂಗೆಡುವಂತೆ ಮಾಡಿತ್ತು. ಆದರೆ ತನ್ನ ಪ್ರಯತ್ನವನ್ನು ಕೈ ಬಿಡದೆ ಅನುಭವಿ ಕೃಷಿಕರ ಮಾಹಿತಿ ಪಡೆದು ಕೊಂಡು ಸಕಾಲದಲ್ಲಿ ಕೀಟನಾಶಕಗಳನ್ನು ಸಿಂಪಡಿಸಿ ಕಣ್ಣಿಟ್ಟು ಕಾದ ಪರಿಣಾಮ ಈಗ ಬೆಳೆ ಕೈ ಹಿಡಿದಿದೆ. ಪೈರುಗಳೆಲ್ಲಾ ಉತ್ತಮವಾಗಿ ತೆನೆ ಬಿಟ್ಟಿದು ನಾಗೇಶ್ ಸಾಲ್ಯಾನ್ ಅವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮುಂದಿನ ಮೇ.15ರಂದು ಕಟಾವು ಕಾರ್ಯ ನಡೆಯಲಿದೆ

.ದೇವರ ಹೆಸರಿನಲ್ಲಿ ಕೃಷಿ:
ನಾಗೇಶ್ ಸಾಲ್ಯಾನ್ ಅವರು ಪಣೆಕಲ ಶ್ರೀ ಮಹಮ್ಮಾಯಿ ದುರ್ಗಾಂಬ ಕ್ಷೇತ್ರದ ಭಕ್ತ. ಅಲ್ಲಿನ ಸೇವಾ ಟ್ರಸ್ಟ್‍ನ ಕೋಶಾಧಿಕಾರಿಯಾಗಿದ್ದು ಕೊಂಡು ದೇವಸ್ಥಾನದ ಜೀಣೋದ್ಧಾರ ಕಾರ್ಯದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇದೀಗ ಬಾಳೆಹಿತ್ಲುವಿನಲ್ಲಿ ಪಣೆಕಲ ಶ್ರೀ ಮಹಮ್ಮಾಯಿ ದುರ್ಗಾಂಬ ದೇವರ ಹೆಸರಿನಲ್ಲಿಯೇ ಬತ್ತದ ಕೃಷಿ ಮಾಡಿದ್ದಾರೆ. ಈ ಬೆಳೆಯಲ್ಲಿ ಬಂದ ಆದಾಯದಲ್ಲಿ ಈವರೆಗೆ ಆದ ಖರ್ಚನ್ನು ಕಳೆದು ಉಳಿದ ಮೊತ್ತವನ್ನು ದೇವಸ್ಥಾನದ ಜೀಣೋದ್ಧಾರ ಕಾರ್ಯಕ್ಕೆ ನೀಡುವ ಸಂಕಲ್ಪವನ್ನು ಇಟ್ಟುಕೊಂಡು ಬೇಸಾಯ ಮಾಡಿದ್ದಾರೆ. ದೇವಸ್ಥಾನದ ಟ್ರಸ್ಟಿ ಕೃಷ್ಣಪ್ಪ ಚೆಂಡ್ತಿಮಾರ್ ಕೃಷಿ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ.

ಸವಾಲುಗಳ ಮಧ್ಯೆ ಕೃಷಿ ತಂದ ಖುಷಿ:
ಬತ್ತದ ಕೃಷಿಯಲ್ಲಿ ಅನೇಕ ರೀತಿಯ ಸವಾಲುಗಳು ನಾಗೇಶ್ ಸಾಲ್ಯಾನ್ ಅವರಿಗೆ ಎದುರಾಗಿದೆ. ಬತ್ತದ ಕೃಷಿಗೆ ಯಥೇಚ್ಛ ನೀರು ಅಗತ್ಯ. ವಿದ್ಯುತ್ ಕಣ್ಣಮುಚ್ಚಾಲೆಯಿಂದ ಹಗಲೊತ್ತು ವಿದ್ಯುತ್ ಇಲ್ಲದ ಸಂದರ್ಭಗಳಲ್ಲಿ ತನ್ನ ಕೆಲಸ ಮುಗಿಸಿ ಮಧ್ಯರಾತ್ರಿ 1 ಗಂಟೆಗೆ ಬಂದು ನೀರು ಬಿಟ್ಟ ದಿನಗಳನ್ನು ಅವರು ನೆನೆಪಿಸಿಕೊಳ್ಳುತ್ತಾರೆ. ಗದ್ದೆಯ ಹುಣಿಗಳಲ್ಲಿ ಹೆಗ್ಗಣ, ಏಡಿಗಳು ಬಿಲ ತೋಡಿ ಗದ್ದೆಯಲ್ಲಿ ನೀರು ಖಾಲಿ ಮಾಡಿದ ಸನ್ನಿವೇಷಗಳು ಎದುರಾಗಿದೆ. ಹಿಂಡು ಹಿಂಡಾಗಿ ಬರುವ ನವಿಲಿನ ಕಾಟವು ನೆಮ್ಮದಿ ಕೆಡಿಸಿದೆ. ಈ ಎಲ್ಲಾ ಸವಾಲುಗಳನ್ನು ಮೀರಿಯೂ ತನ್ನ ಪ್ರಯತ್ನ ಯಶ ಕಂಡಿರುವುದು ನಾಗೇಶ್ ಸಾಲ್ಯಾನ್ ಅವರಲ್ಲಿ ಸಂತಸ ಮೂಡಿಸಿದೆ. ಬತ್ತದ ಬೇಸಾಯದ ಮೂಲಕ ಪ್ರಕೃತಿಯ ಆರಾಧನೆ ಮಾಡಿದ್ದೇವೆ, ಪ್ರಾಣಿ, ಪಕ್ಷಿಗಳು ತಿಂದು ಉಳಿದವು ಸಿಕ್ಕರೆ ಸಾಕು ಎನ್ನುವ ನಿಟ್ಟಿನಲ್ಲಿ ಕೃಷಿ ಮಾಡಿದ್ದೆ. ಕಟಾವು ಮಾಡುವ ವೇಳೆ ಮಳೆ ಬಾರದೆ ಇದ್ದರೆ ನನ್ನ ಪ್ರಯತ್ನ ಸಾರ್ಥಕ ಎನ್ನುವುದು ಅವರ ಅಭಿಪ್ರಾಯ.

Related Posts

Leave a Reply

Your email address will not be published.

How Can We Help You?