ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಲೋಕಜನಶಕ್ತಿ ಪಾರ್ಟಿ ಏಕಾಂಗಿ ಸ್ಪರ್ಧೆ: ನಿರುದ್ಯೋಗ, ಬೆಲೆ ಏರಿಕೆ ಸಾಮಾನ್ಯರನ್ನು ಬಾಧಿಸುತ್ತಿದೆ – ಚಿರಾಗ್ ಪಾಸ್ವಾನ್

ಬೆಂಗಳೂರು, ಮೇ, 6; ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲೋಕಜನಶಕ್ತಿ ಪಾರ್ಟಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಇದಕ್ಕಾಗಿ ಈಗಿನಿಂದಲೇ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಕೇಂದ್ರದ ಮಾಜಿ ಸಚಿವ, ಹಿರಿಯ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಇದೇ ಮೊದಲ ಬಾರಿಗೆ ನಗರಕ್ಕೆ ಅಗಮಿಸಿದ ಅವರು, ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಗೆ ಸಜ್ಜಾಗಲು ಪಕ್ಷ ಸೂಕ್ತ ತಂತ್ರಗಾರಿಕೆಯಲ್ಲಿ ತೊಡಗಿದೆ. ಈ ವಿಚಾರದಲ್ಲಿ ರಾಜ್ಯ ಮುಖಂಡರ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದರು.

ಲೋಕಜನಶಕ್ತಿ ಪಾರ್ಟಿ ರಾಷ್ಟ್ರಮಟ್ಟದಲ್ಲಿ, ಅಥವಾ ದೇಶದ ಯಾವುದೇ ರಾಜ್ಯದಲ್ಲಿ ಚುನಾವಣಾ ಮೈತ್ರಿ ಮಾಡಿಕೊಂಡಿಲ್ಲ. ಬಿಹಾರ ಒಳಗೊಂಡಂತೆ ಎಲ್ಲಾರಾಜ್ಯಗಳಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸಬೇಕು ಎನ್ನುವ ನಿರ್ಧಾರವನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ತೆಗೆದುಕೊಳ್ಳಲಾಗಿದೆ. ಎಲ್ಲಾ ರಾಜ್ಯಗಳಲ್ಲೂ ಪಕ್ಷವನ್ನು ಬಲಿಷ್ಠಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳಿಗೆ ಸೂಕ್ತ ಮನ್ನಣೆ ನೀಡುವುದಿಲ್ಲ. ಮೈತ್ರಿ ಮಾಡಕೊಂಡರೆ ತಾವು ಸಿಂಹಪಾಲು ಇಟ್ಟುಕೊಂಡು, ಪ್ರಾದೇಶಿಕ ಪಕ್ಷಗಳಿಗೆ ಕಡಿಮೆ ಸೀಟುಗಳನ್ನು ನೀಡುತ್ತಿವೆ. ಹೀಗಾಗಿ ಚುನಾವಣಾ ಮೈತ್ರಿ ಬಗ್ಗೆ ನಮ್ಮ ಪಕ್ಷಕ್ಕೆ ಒಲವು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಚಿರಾಗ್ ಪಾಸ್ವಾನ್ ಪ್ರತಿಕ್ರಿಯೆ ನೀಡಿದರು.

ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧೆ ಮಾಡುವ ಉದ್ದೇಶವನ್ನು ಪಕ್ಷ ಹೊಂದಿದೆಯೇ ಎನ್ನುವ ಪ್ರಶ್ನೆಗೆ, ರಾಜ್ಯ ಘಟಕಕ್ಕೆ ಈ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಸೂಕ್ತ ನಿರ್ಧಾರ ಕೈಗೊಂಡು ಅಭ್ಯರ್ಥಿಗಳನ್ನು ಸ್ಥಳೀಯ ಮುಖಂಡರು ಕಣಕ್ಕಿಳಿಸಬಹುದು ಎಂದು ಹೇಳಿದರು.

ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಿರುದ್ಯೋಗ, ಬೆಲೆ ಏರಿಕೆ ಸಾಮಾನ್ಯ ಜನರನ್ನು ಬಾಧಿಸುತ್ತಿವೆ. ಹೀಗಿರುವಾಗ ಕೋಮು ರಾಜಕಾರಣ ವಿಜೃಂಭಿಸುತ್ತಿದೆ. ಜನ ಸಾಮಾನ್ಯರ ನೋವುಗಳಿಗೆ ಸ್ಪಂದಿಸುವ ಕೆಲಸ ಆಗುತ್ತಿಲ್ಲ. ಜಾತಿ, ಜಾತಿ ನಡುವೆ ವೈಷಮ್ಯ ಮೂಡಿಸುತ್ತಿದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆಯುತ್ತಿದ್ದರೂ ದಲಿತರಿಗೆ ದೇಗುಲಗಳಿಗೆ ಪ್ರವೇಶಾವಕಾಶ ಕಲ್ಪಿಸುತ್ತಿಲ್ಲ. ಸಾಮಾಜಿಕ ನ್ಯಾಯ ಮತ್ತು ಸಮ ಸಮಾಜ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ. ಹಿರಿಯ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಅವರ ಕನಸುಗಳನ್ನು ಸಾಕಾರಗೊಳಿಸಲು ಎಲ್ಲಾ ರೀತಿಯಲ್ಲೂ ಕಾರ್ಯ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಚಿರಾಗ್ ಪಾಸ್ವಾನ್ ಹೇಳಿದರು.

ಲೋಕಜನಶಕ್ತಿ ಪಾರ್ಟಿಯ ರಾಜ್ಯಾಧ್ಯಕ್ಷ ಎಂ.ಎಸ್. ಜಗನ್ನಾಥ್ ಮಾತನಾಡಿ, ಬಿಬಿಎಂಪಿ ಚುನಾವಣೆಗೆ ಪಕ್ಷ ಸನ್ನದ್ಧವಾಗುತ್ತಿದ್ದು, ಪಕ್ಷದ ವರಿಷ್ಠರ ನಿರ್ದೇಶನದ ಮೇರೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Related Posts

Leave a Reply

Your email address will not be published.

How Can We Help You?