ಮಳೆಯ ಕಾರ್ಮೋಡ ಕವಿದಾಗೆಲ್ಲ ವೃದ್ಧ ದಂಪತಿಯಲ್ಲಿ ಆತಂಕ : ಭದ್ರವಾದ ಸೂರಿಲ್ಲದೆ ಭಯದಲ್ಲೇ ಬದುಕುತ್ತಿರುವ ದಂಪತಿ

ಬಂಟ್ವಾಳ: ಮಳೆಯ ಕಾರ್ಮೋಡ ಕವಿದಾಗೆಲ್ಲಾ ಆ ವೃದ್ದ ದಂಪತಿಗಳಲ್ಲಿ ಆತಂಕ ಕವಿಯಲಾರಂಭಿಸುತ್ತದೆ. ಮಳೆ ಬಂದರೆ ಎಲ್ಲಿ ನೀರೆಲ್ಲಾ ಒಳಗೆ ಸೋರುತ್ತದೋ.. ಗಾಳಿ ಬೀಸಿದರೆ ಸಿಮೆಂಟ್ ಛಾವಣಿ, ಟರ್ಪಾಲು ಹಾರಿ ಹೋಗುತ್ತದೆ.. ಮನೆಗೆ ತಾಗಿ ಕೊಂಡೇ ಇರುವ ಮಾವಿನ ಮರ ಮನೆ ಮೇಲೆ ಬೀಳುತ್ತದೋ ಎನ್ನುವ ಭಯ ಆ ಹಿರಿ ಜೀವಗಳನ್ನು ಕಾಡುತ್ತಿದೆ. ಜೀವನ ಸಂಧ್ಯಾ ಕಾಲದಲ್ಲಿ ನೆಮ್ಮದಿಯಿಂದ ಬದುಕಬೇಕಾಗಿದ್ದ ದಂಪತಿಗಳು ಭದ್ರವಾದ ಸೂರಿಲ್ಲದೆ ಭಯದಲ್ಲಿ ಬದುಕುತ್ತಿದ್ದಾರೆ.

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತಿಗೆ ಒಳಪಟ್ಟ ನಾಟಿ, ತಂಜಕ್‍ಪಲ್ಕೆ ನಿವಾಸಿ ಶಾಂತಪ್ಪ ಪೂಜಾರಿ ಹಾಗೂ ಹೇಮಾವತಿ ದಂಪತಿಗಳು ಸುರಕ್ಷಿತವಾದ ಸೂರಿಲ್ಲದೆ ಆತಂಕದಲ್ಲಿಯೇ ದಿನಕಳೆಯುತ್ತಿದ್ದಾರೆ. ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ ಹಳೆಯ ಮುರುಕಲು ಮನೆಯಲ್ಲಿ ವಾಸವಾಗಿದ್ದಾರೆ. ಈಗಾಗಲೇ ಮನೆಯ ಬಹುಭಾಗ ಕುಸಿದು ಬಿದ್ದಿದ್ದು ಹೆಂಚುಗಳೆಲ್ಲಾ ಮನೆಯ ಸುತ್ತಮುತ್ತಾ ಬಿದ್ದಿದೆ. ಅಡಿಕೆ ಮರದ ಪಾಲಗಳನ್ನು ಆಧಾರವಾಗಿಟ್ಟುಕೊಂಡು ಛಾವಣಿಯ ಮೇಲೆ ಟರ್ಪಾಲು ಹಾಸಲಾಗಿದೆ. ಎಲ್ಲವೂ ಧರಶಾಹಿಯಾಗಿ ಮುಂಭಾಗದ ಒಂದು ಕೊಠಡಿ ಮಾತ್ರ ಉಳಿದುಕೊಂಡಿದ್ದು ಅದರ ಎರಡೂ ಪಾರ್ಶ್ವಗಳು ಬಿರುಕು ಬಿಟ್ಟು ಯಾವಾಗ ಕುಸಿದು ಬೀಳುತ್ತದೋ ಎನ್ನುವ ಭಯ ಎದುರಾಗಿದೆ. ಮನೆಯ ಪಕ್ಕ ಜೋಪಡಿ ನಿರ್ಮಿಸಿ ಅಡುಗೆ ಕೋಣೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಅಳಿದುಳಿದಿರುವ ಒಂದು ಕೊಠಡಿಯಲ್ಲಿ ಬಡ ವೃದ್ದ ದಂಪತಿ ಜೀವನ ಸಾಗಿಸುತ್ತಿದ್ದಾರೆ.


ಜೀವನ ದುಸ್ತರ:
ಈ ದಂಪತಿಗೆ ಮಕ್ಕಳಿಲ್ಲ. ಪತಿಗೆ ಪತ್ನಿ, ಪತ್ನಿಗೆ ಪತಿ ಆಸರೆ. ಏನಾದರೂ ಕೂಲಿ ಕೆಲಸ ಸಿಕ್ಕರೆ ಆದಾಯ. ಅದೂ ಇಲ್ಲವಾದರೆ ಬದಕು ಸಾಗಿಸುವುದೇ ದುಸ್ತರ. ವಯೋ ಸಹಜ ಕಾರಣಗಳಿಂದ ಮೈ ಬಗ್ಗಿಸಿ ದುಡಿಯಲು ಸಾಧ್ಯವಾಗುವುದಿಲ್ಲ. ಪತ್ನಿ ಹೇಮಾವತಿ ಅವರು ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಟ್ಟಿನಲ್ಲಿ ಜೀವನ ನಿರ್ವಹಣೆಯ ಸವಾಲಿನೊಂದಿಗೆ ಅಭದ್ರ ಮನೆಯಲ್ಲಿ ಬದುಕು ಅನಿವಾರ್ಯತೆ ಈ ದಂಪತಿಗಳಿಗೆ ಬಂದೊದಗಿದೆ.
ಮನೆಯ ಕನಸು ಭಗ್ನ


ಕಳದೆ 2016-17ನೇ ಸಾಲಿನ ಬಸವ ವಸತಿ ಯೋಜನೆಯಡಿ ನರಿಕೊಂಬು ಗ್ರಾಮ ಪಂಚಾಯತಿ ಶಾಂತಪ್ಪ ಅವರಿಗೆ ಸಹಾಯಧನ ಒಳಪಟ್ಟು ಮನೆ ಮಂಜೂರು ಮಾಡಿತ್ತು. ಅಂತೆಯೇ ಮೊದಲ ಎರಡು ಕಂತುಗಳನ್ನು ಪಡೆದುಕೊಂಡು ಈಗಿರುವ ಹಳೆಯ ಮನೆಯ ಪಕ್ಕವೇ ತಮ್ಮದೇ ಜಮೀನಿನಲ್ಲಿ ಪಂಚಾಂಗ ಹಾಗೂ ಗೋಡೆಯನ್ನು ನಿರ್ಮಿಸಿ ಕೊಂಡಿದ್ದಾರೆ. ಮುಂದಿನ ಕಂತಿನ ಹಣ ಬಿಡುಗಡೆಯಾಗಬೇಕಾದರೆ ಲಿಂಟಲ್ ಕೆಲಸ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಕೈಯಲ್ಲಿ ನಯಾಪೈಸೆ ಹಣವಿಲ್ಲದೆ ಉಳಿದ ಕಾಮಗಾರಿಯನ್ನು ಪೂರ್ಣಗಳಿಸಲು ಸಾಧ್ಯವಾಗದೇ ಸಹಾಯಧನದ ಉಳಿದ ಮೊತ್ತ ಪಾವತಿಯಾಗಿಲ್ಲ. ಇದರಿಂದಗಿ ಕಳೆದ ಎರಡು ವರ್ಷಗಳಿಂದ ಅದೇ ಸ್ಥಿತಿಯಲ್ಲಿ ಮನೆ ಉಳಿದು ಕಳೆ ಗಿಡಗಳು ಬೆಳೆಯಲಾರಂಭಿಸಿದೆ. ವಸತಿ ಯೋಜನೆಯ ಮನೆ ನಿರ್ಮಾಣದ ಅವಧಿಯು ಮೀರಿದ್ದು ಮುಂದೇನು ಎನ್ನುವ ಆತಂಕ ವೃದ್ದ ದಂಪತಿಗಳನ್ನು ಕಾಡುತ್ತಿದೆ.

Related Posts

Leave a Reply

Your email address will not be published.

How Can We Help You?