ಟೊಮ್ಯಾಟೊ ಜ್ವರ ಎಂಬುವುದೊಂದಿಯೇ..?

ಈಗ ನಮ್ಮ ಕರಾವಳಿಯಲ್ಲಿ ಕೆಲವೆಡೆ ಮಕ್ಕಳಿಗೆ ಟೊಮ್ಯಾಟೊ ಜ್ವರ ಎಂಬ ಹೊಸ ಹೆಸರೊಂದು ಕೇಳಿ ಬರುತ್ತಿದೆ.ಇಂದು ಬೆಳಿಗ್ಗೆಯಷ್ಟೇ ಈ ಟೊಮ್ಯಾಟೊ ಜ್ವರ ಎಂದು ಹೇಳಲಾಗುತ್ತಿರುವ ವಿಚಿತ್ರ ಹೆಸರಿನ ಜ್ವರ ಪೀಡಿತ ಮಗುವನ್ನು ನೋಡಿದೆ. ವಾಸ್ತವದಲ್ಲಿ ಇಂತಹದ್ದೊಂದು ಜ್ವರವೇ ಇಲ್ಲ.ಈ ಹೆಸರನ್ನು ನಾನು ಈ ವರ್ಷ ಮೊದಲು ಕೇಳುತ್ತಿರುವುದೇನಲ್ಲ. ಸುಮಾರು ಹನ್ನೆರಡು ವರ್ಷಗಳ ಹಿಂದೊಮ್ಮೆ ಇಂತಹದ್ದೊಂದು ಜ್ವರದ ಹೆಸರು ಕೇಳಿದ್ದೆ. ಒಂದೊಮ್ಮೆ ಟೊಮ್ಯಾಟೊ ಜ್ವರಕ್ಕೆ ರಕ್ತ ಪರೀಕ್ಷೆ ಮಾಡಿ ನೋಡ್ಬೇಕು ಎಂದು ಬಂದವರೂ ಇದ್ದರು. ಅವರಿಗೆ TC,DC, PLATELETS, HAEMOGLOBIN ಎಂಬ ಬ್ಲಡ್ ರುಟೀನ್ ಪರೀಕ್ಷೆ ಮಾಡಿ ಕಳುಹಿಸಿದ್ದೆ. ಒಂದಿಬ್ಬರಲ್ಲಿ ಬಿಳಿ ರಕ್ತ ಕಣಗಳು ಒಂದಿಷ್ಟು ಹೆಚ್ಚಿತ್ತು ಬಿಟ್ಟರೆ ಬೇರೇನೂ ಇರಲಿಲ್ಲ. ಇಂತಹದ್ದೊಂದು ಜ್ವರವೇ ಇಲ್ಲದ ಮೇಲೆ ಇಂತಹ ಹೆಸರನ್ನು ಯಾರಾದರೂ ಹುಟ್ಟು ಹಾಕಿರಬಹುದು ಎಂಬ ಕುತೂಹಲವೂ ನನಗಿತ್ತು. ಇದರ ಹಿನ್ನೆಲೆ ಹುಡುಕುತ್ತಾ ಹೋದೆ. ಅದು ಕೆಲವು ಕುಟುಂಬ ವೈದ್ಯರೇ ರೋಗಿಗಳಿಗೆ ಹೇಳಿದ ಹೆಸರೆಂದು ತಿಳಿಯಿತು.
ಈ ಹೆಸರಿನ ಹಿನ್ನೆಲೆ
ಸಾಮಾನ್ಯವಾಗಿ ಎಪ್ರಿಲ್- ಮೇ ತಿಂಗಳಲ್ಲಿ ಸೆಖೆ ವಿಪರೀತವಾದಾಗ ಹೆಚ್ಚಾಗಿ ಮಕ್ಕಳ ಚರ್ಮದಲ್ಲಿ ಕೆಂಬಣ್ಣದ ಪುಟ್ಟ ಪುಟ್ಟ ಗುಳ್ಳೆಗಳೇಳುತ್ತವೆ.ಸಾಮಾನ್ಯವಾಗಿ ಇಂತಹ ಗುಳ್ಳೆಗಳು ಮಕ್ಕಳಲ್ಲೇ ಯಾಕೆ ಕಾಣಿಸಿಕೊಳ್ಳುತ್ತವೆಂದರೆ ಅವರ ಚರ್ಮವು ಬಹಳ ಮೆದುವಾಗಿ ಸೆನ್ಸಿಟಿವ್ ಇರುತ್ತದೆ. ಅವರಿಗೆ ವಿಪರೀತ ಸೆಖೆಯನ್ನು ತಡೆದುಕೊಳ್ಳಲಾಗುವುದಿಲ್ಲ. ಈ ಬಾರಿಯಂತೂ ನಮ್ಮ ಮಂಗಳೂರಲ್ಲಿ ವಿಪರೀತ ಬಿಸಿಲೂ ಇತ್ತು.ಸಹಜವಾಗಿಯೇ ಕೆಲವರ ಚರ್ಮದ ಮೇಲೆ ಕೆಂಬಣ್ಣದ ಗುಳ್ಳೆಗಳೆದ್ದಿರುತ್ತವೆ., ಜೊತೆ ಜೊತೆಗೆ ದೇಹದ ಟೆಂಪರೇಚರ್ ಏರಿದ್ದರೆ ಅದಕ್ಕೆ ಈ ಟೊಮ್ಯಾಟೊ ಜ್ವರ ಎಂಬ ಹೆಸರು ಬಹಳ ಮ್ಯಾಚ್ ಆಗುತ್ತದೆ. ಯಾರೋ ಎಲ್ಲೋ ಹೇಳಿದ್ದು ಮತ್ತು ಇಂತಹ ನಸು ಕೆಂಬಣ್ಣದ ಗುಳ್ಳೆಗಳು ಚರ್ಮದ ಮೇಲೆ ಎದ್ದಿರುವುದರ ಜೊತೆಗೆ ಜ್ವರವೂ ಸೇರಿ ಟೊಮ್ಯಾಟೊ ಜ್ವರವಾಗಿದೆ ಬಿಟ್ಟರೆ ಇಂತಹದ್ದೊಂದು ಜ್ವರವೇ ಇಲ್ಲ. ಜ್ವರ ಮತ್ತು ಇಂತಹ ನಸು ಕೆಂಬಣ್ಣದ ಗುಳ್ಳೆಗಳು ಚರ್ಮದ ಮೇಲೆ ಎದ್ದರೆ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಅಷ್ಟೇ ಸಾಕು. ಎರಡು ಒಳ್ಳೆಯ ಮಳೆ ಬಿದ್ದ ಕೂಡಲೇ ಚರ್ಮದ ಮೇಲೆ ಎದ್ದಿರುವ ಗುಳ್ಳೆಗಳು ತಾನೇ ಕರಟಿ ಹೋಗುತ್ತವೆ.ಮಳೆ ಬೀಳದಿದ್ದರೆ ಬಿಸಿಲಿಗೆ ತುಂಬಾ ಹೊತ್ತು ಮೈಯೊಡ್ಡದಿರಿ, ದೇಹದಲ್ಲಿ ನೀರಿನ ಕೊರತೆಯಾಗದಂತೆ (ಡಿಹೈಡ್ರೇಶನ್) ಆಗದಂತೆ ಚೆನ್ನಾಗಿ ನೀರು ಕುಡಿಯಿರಿ.ಎಲ್ಲವೂ ತಾನೇ ಸರಿ ಹೋಗುತ್ತದೆ. ಇಂತಹ ಗುಲ್ಲು ಎಲ್ಲೇ ಕೇಳಿದರೂ ದಯಮಾಡಿ ಅದನ್ನು ಪ್ರಚುರಪಡಿಸದಿರಿ..ದಯಮಾಡಿ ಗೂಗಲ್ ಚೆಕ್ ಮಾಡಿ ಟೊಮ್ಯಾಟೊ ಜ್ವರ ಎಂದು ಸರ್ಚ್ ಮಾಡಿ ಗಾಬರಿ ಬೀಳಲೂ ಬೇಡಿ.
ಇಸ್ಮತ್ ಪಜೀರ್