ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ : ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 32ನೇ ಪದವಿ ಪ್ರದಾನ ಕಾರ್ಯಕ್ರಮ

ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಹೋಮಿಯೋಪತಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 32ನೇ ಪದವಿ ಪ್ರಧಾನ ಸಮಾರಂಭ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರಿನಲ್ಲಿ ನಡೆಯಿತು.
ನಗರದ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಸನ್ ಸೆಂಟರ್ನಲ್ಲಿ ಪದವಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮೊದಲು ಪದವಿ ಸ್ವೀಕಾರ ಮಾಡುವ ವಿದ್ಯಾರ್ಥಿಗಳನ್ನು ಮತ್ತು ಅತಿಥಿಗಳನ್ನು ವಾದ್ಯ ಬ್ಯಾಂಡ್ಗಳ ಜೊತೆಯಲ್ಲಿ ಅದ್ಧೂರಿಯಾಗಿ ಕನ್ವೆನ್ಷನ್ ಸೆಂಟರ್ಗೆ ಕರೆತರಲಾಯಿತು. ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ , ಮೆಡಿಕಲ್ ಅಸೆಸ್ ಮೆಂಟ್ ಮತ್ತು ರೇಟಿಂಗ್ ಬೋರ್ಡ್ ಫಾರ್ ಹೋಮಿಯೋಪಥಿ ಅಧ್ಯಕ್ಷ ಡಾ.ಕೆ.ಆರ್ ಜನಾರ್ದನ್ ನಾಯರ್ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಮಾತನಾಡಿ, ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ಹೋಮಿಯೋಪತಿ ಶಿಕ್ಷಣವನ್ನು ಅತ್ಯುತ್ತಮವಾಗಿ ಒದಗಿಸುತ್ತಿದೆ. ವೈದ್ಯಕೀಯ ಶಿಕ್ಷಣವನ್ನು ಪಡೆದ ನೀವೆಲ್ಲರೂ ಮಾನವೀಯತೆ ದೃಷ್ಟಿಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕು ಹಾಗಿದ್ದಲ್ಲಿ ನೀವು ಮಾಡಿದ ವೈದ್ಯಕೀಯ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಹೇಳಿದರು. ಮೆಡಿಕಲ್ ಅಸೆಸ್ ಮೆಂಟ್ ಮತ್ತು ರೇಟಿಂಗ್ ಬೋರ್ಡ್ ಫಾರ್ ಹೋಮಿಯೋಪಥಿ ಅಧ್ಯಕ್ಷ ಡಾ.ಕೆ.ಆರ್ ಜನಾರ್ದನ್ ನಾಯರ್ ಅವರು ಮಾತನಾಡಿ, ಇಂದು ಹೋಮಿಯೋಪಥಿಯು ತ್ವರಿತವಾಗಿ ಪ್ರಗತಿಹೊಂದುತ್ತಿರುವ ಒಂದು ವೈದ್ಯಕೀಯ ಪದ್ಧತಿಯಾಗಿದೆ. ಹೋಮಿಯೋಪಥಿ ಶಿಕ್ಷಣ ಪಡೆದ ನೀವುಗಳು ಆರೋಗ್ಯಯುತ ಸಮಾಜಕ್ಕಾಗಿ ಶ್ರಮಿಸಬೇಕು ಎಂದು ಹೇಳಿದರು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷ ರೆ. ಡಾ.ಪೀಟರ್ ಪೌಲ್ ಸಲ್ದಾನ್ಹ ಅಧ್ಯಕ್ಷತೆ ವಹಿಸಿ ಮಾತನಾಡಿದ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಇ.ಎಸ್.ಜೆ ಪ್ರಭುಕಿರಣ್ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಸ್ಥೆ ನಿರ್ದೇಶಕರಾದ ರೇ.ಫಾದರ್ ರಿಚಾರ್ಡ್ ಅಲೋಶಿಯಸ್ ಕೊಯಿಲೋ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
99 ಪದವಿ ಹಾಗೂ 26 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿದ್ದಾರೆ. 2021 ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹೋಮಿಯೋಪಥಿ ಪದವಿಯ ಶೈಕ್ಷಣಿಕ ವರ್ಷ 2016-17 ರ 10 ರ್ಯಾಂಕ್ ಗಳಲ್ಲಿ 8 ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯ ಶೈಕ್ಷಣಿಕ ವರ್ಷ 2018-19ರ 9 ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ಇದ್ದಾರೆ. ಪ್ರಸ್ತುತ ವರ್ಷದಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಅವಧಿವಾರು 31 ರ್ಯಾಂಕ್ ಹಾಗೂ ವಿಷಯವಾರು 127 ರ್ಯಾಂಕ್ ಗಳಿಸುವುದರೊಂದಿಗೆ ಒಟ್ಟು 166 ರ್ಯಾಂಕ್ ಗಳನ್ನು ತನ್ನದಾಗಿಸಿಕೊಂಡಿದೆ. 2015&16 ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ ಚಿನ್ನದ ಪದಕವನ್ನು ಡಾ.ಡಾನಿಯಾ ರವರು ಗಳಿಸಿದ್ದು ಹಾಗೂ ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಹೋಮಿಯೋಪಥಿ ವತಿಯಿಂದ ಸ್ನಾತಕೋತ್ತರ ಪದವಿಯ ಅತ್ಯುತ್ತಮ ಪ್ರಬಂಧ ಮಂಡನೆಗಾಗಿ ನೀಡಿರುವ ವಿದ್ಯಾರ್ಥಿ ವೇತನವ್ನು 2018&19ರ ಹೋಮಿಯೋಪಥಿ ಫಾರ್ಮಸಿ ವಿಭಾಗದ ಡಾ. ಗಾಯತ್ರಿ ಕ್ರೋವಿಡಿಯವರು ಪಡೆದುಕೊಂಡಿದ್ದಾರೆ.

ಈ ಸಂದರ್ಭ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ರೋಷನ್ ಕ್ರಾಸ್ತಾ , ಉಪಪ್ರಾಂಶುಪಾಲೆ ಡಾ.ವಿಲ್ಮಾ ಮೀರಾ ಡಿಸೋಜ, ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್ ನಾವಡ ಮೊದಲಾದವರು ಉಪಸ್ಥಿತರಿದ್ದರು.