ನ5: ಆಂಧ್ರ ರಾಜ್ಯಪಾಲ ಎಸ್. ಅಬ್ದುಲ್ ನಝೀರ್ ಅವರಿಗೆ ರಾಜ್ಯ ಕಾನೂನು ವಿವಿಯ ಗೌರವ ಡಾಕ್ಟರೇಟ್
ಮೂಡುಬಿದಿರೆ: ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ , ಆಂಧ್ರ ಪ್ರದೇಶದ ರಾಜ್ಯಪಾಲ ಮೂಡುಬಿದಿರೆ ಮೂಲದ ಎಸ್. ಅಬ್ದುಲ್ ನಝೀರ್ ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಜೀವಮಾನದ ಸಾಧನೆಗಾಗಿ ನ 5ರಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬೆಳಿಗ್ಗೆ 11.30 ರಿಂದ ನಡೆಯಲಿರುವ ರಾಜ್ಯ ಕಾನೂನು ವಿಶ್ವ ವಿದ್ಯಾನಿಯದ 7ನೇ ಘಟಿಕೋತ್ಸವ ಸಮಾರಂಭದಲ್ಲಿ ಈ ಗೌರವ ಪ್ರದಾನ ನಡೆಯಲಿದೆ.
ರಾಜ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅತಿಥಿಗಳಾಗಿ ರಾಜ್ಯ ಕಾನೂನು ಸಚಿವ ಡಾ. ಹೆಚ್. ಕೆ.ಪಾಟೀಲ್ , ಮುಖ್ಯ ಅತಿಥಿ ಹಾಗೂ ಘಟಿಕೋತ್ಸವ ಭಾಷಣಕಾರರಾಗಿ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಡಾ. ಶಿವರಾಜ್ ವಿ.ಪಾಟೀಲ್ ಪಾಲ್ಗೊಳ್ಳಲಿದ್ಧಾರೆ.
ಒಟ್ಟು ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ನಡೆಯಲಿದ್ದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಮತಿ ಬಿ.ವಿ.ನಾಗರತ್ನ, ಬೆಂಗಳೂರಿನ ಹಿರಿಯ ನ್ಯಾಯವಾದಿ ವಿ. ಸುದೇಶ್ ಪೈ ಅವರಿಗೂ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ.
ಸಾಧಕ ನ್ಯಾ. ಎಸ್. ಅಬ್ದುಲ್ ನಝೀರ್:
ಮೂಲತಃ ಮೂಡುಬಿದಿರೆಯವರಾದ ನ್ಯಾ. ಎಸ್. ಅಬ್ದುಲ್ ನಝೀರ್ ಇಲ್ಲಿನ ಮಹಾವೀರ ಕಾಲೇಜಿನಲ್ಲಿ ಕಲಾ ಪದವಿ, ಮಂಗಳೂರು ಎಸ್.ಡಿ.ಎಂ. ಲಾ ಕಾಲೇಜಿನ ಕಾನೂನು ಪದವಿ ವಿದ್ಯಾರ್ಥಿ. ೧೯೮೩ರಿಂದ ಹೈಕೋರ್ಟ್ ನಲ್ಲಿ ನ್ಯಾಯವಾದಿಯಾಗಿ ಕರ್ತವ್ಯ ಆರಂಭಿಸಿದ ಅವರು ಹೈಕೋರ್ಟ್ ನ್ಯಾಯವಾದಿಯಾದರು. ಈ ಹುದ್ದೆಯಲ್ಲಿದ್ದಾಗಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗುವ ಮೊದಲೇ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಆಯ್ಕೆಯಾದ ಮೂರನೇ ನ್ಯಾಯಾಧೀಶ ಎನ್ನುವ ಗೌರವಕ್ಕೆ ಪಾತ್ರರಾದರು.
ತ್ರಿವಳಿ ತಲಾಖ್, ಐತಿಹಾಸಿಕ ಅಯೋಧ್ಯಾ ತೀರ್ಪು, ಸಹಿತ ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ , ತೀರ್ಪು ಗಳಲ್ಲಿ ನಝೀರ್ ಅವರು ಗಮನ ಸೆಳೆದಿದ್ದರು. ೨೦೨೩ರ ಫೆಬ್ರವರಿಯಲ್ಲಿ ಅವರು ಆಂಧ್ರ ಪ್ರದೇಶದ ೨೪ನೇ ರಾಜ್ಯಪಾಲರಾಗಿ ರಾಷ್ಟ್ರಪತಿಯವರಿಂದ ನಿಯುಕ್ತರಾದರು.
ನ್ಯಾಯಾಂಗ ಪ್ರಮುಖರಾಗಿ ತಮ್ಮ ಅಧಿಕಾರಾವಧಿಯಲ್ಲಿ ಹೋಬಳಿ ಮಟ್ಟದಲ್ಲಿದ್ದ ಹುಟ್ಟೂರು ಮೂಡುಬಿದಿರೆಯಲ್ಲಿ ಸುಸಜ್ಜಿತ ನ್ಯಾಯಾಲಯ, ವಕೀಲರ ಭವನ ಸ್ಥಾಪನೆ ಸಹಿತ ರಾಜ್ಯದ ನ್ಯಾಯಾಂಗ ರಂಗದಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಅಬ್ದುಲ್ ನಝೀರ್ ಅವರ ಸಹಕಾರ , ಕೊಡುಗೆ ಗಮನಾರ್ಹವಾಗಿದೆ.
ಅವರಿಗೆ ಗೌರವ ಡಾಕ್ಟರೇಟ್ ಪ್ರದಾನದ ಹಿನ್ನೆಲೆಯಲ್ಲಿ ಮೂಡುಬಿದಿರೆ ವಕೀಲರ ಸಂಘದ ಪರವಾಗಿ ಅಧ್ಯಕ್ಷ ಹರೀಶ್ ಪಿ. ಅಭಿನಂದನೆ ಸಲ್ಲಿಸಿದ್ದಾರೆ.

















