ಆನೆಗುಡ್ಡೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಸಹಸ್ರ ನಾರಿಕೇಳ ಗಣಯಾಗ

ಕುಂದಾಪುರ: ಕೊರೋನಾ ಭೀತಿಯ ನಡುವೆಯೂ ಗಣೇಶ ಚತುರ್ಥಿ ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ, ಸಂಭ್ರಮದಿಂದ ನಡೆದಿದ್ದು, ಭಕ್ತರು ಸಂಕಷ್ಟಹರ ವಿನಾಯಕನ ಪೂಜೆಯಲ್ಲಿ ಪಾಲ್ಗೊಂಡರು.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಭಕ್ತರ ದಂಡು ಕಂಡುಬಂದಿತ್ತು. ಬೆಳಿಗ್ಗೆನಿಂದಲೇ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ದೇವಾಲಯದ ಒಳಗೆ ಗಣಪನ ದರ್ಶನಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಯಿತು. ಅರ್ಚಕರಿಂದ ವಿಶೇಷ ಪೂಜೆಗಳು ನಡೆಸಲಾಗಿದ್ದು ಭಕ್ತರಿಗೆ ಹಣ್ಣು ಕಾಯಿ, ತೀರ್ಥಪ್ರಸಾದ ಹೊರಗೆ ವ್ಯವಸ್ಥೆ ಮಾಡಲಾಗಿತ್ತು. ಕಳೆದ ವರ್ಷ ಗಣೇಶ ಚತುರ್ಥಿಗೆ ಅನ್ನ ಪ್ರಸಾದ ವ್ಯವಸ್ಥೆಯಿರಲಿಲ್ಲ ಆದರೆ ಈ ಬಾರಿ ಸುವ್ಯವಸ್ಥಿತವಾಗಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ೧೦೦೮ ಕಾಯಿ (ಸಹಸ್ರ ನಾರಿಕೇಳ) ಗಣಯಾಗ ಮಾಡಿ ಕೊರೋನಾ ಮಹಾಮಾರಿ ತೊಲಗುವ ನಿಟ್ಟಿನಲ್ಲಿ ಸಂಕಲ್ಪ ಪೂಜೆಮಾಡಲಾಯಿತು.

ದೇವಸ್ಥಾನದ ಹಿರಿಯ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ದೇವಸ್ಥಾನದ ವ್ಯವಸ್ಥಾಪಕ ನಟೇಶ್ ಕಾರಂತ್, ಪರ್ಯಾಯ ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.ಆಗಮಿಸುವ ಭಕ್ತರಿಗೆ ಸ್ಯಾನಿಟೈಸಿಂಗ್ ನಡೆಸಿ ದೇವಾಲಯದೊಳಕ್ಕೆ ಪ್ರವೇಶ ನೀಡಲಾಗುತ್ತಿತ್ತು. ದೇವಸ್ಥಾನದ ಹೊರ ಪ್ರಾಂಗಣದಲ್ಲಿ ಸಾಲಿನಲ್ಲಿ ತೆರಳಲು ಸೂಕ್ತ ಅವಕಾಶ ಕಲ್ಪಿಸಲಾಗಿತ್ತು. ಇನ್ನು ಭಕ್ತರ ಗಮನಕ್ಕಾಗಿ ಮೈಕ್ ಮೂಲಕ ಕೊರೋನಾ ಜಾಗೃತಿ ಸಂದೇಶ ನೀಡಲಾಗಿತ್ತು. ಕೊರೋನಾತಂಕದ ನಡುವೆ ಮಾಸ್ಕ್ ಧರಿಸಿ ಬಂದ ಭಕ್ತಗಣವು ಆನೆಗುಡ್ಡೆಗೆ ದೇವರ ದರ್ಶನ ಪಡೆದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಶೃಂಗೇರಿ ಮಾಜಿ ಶಾಸಕ ಜೀವರಾಜ್ ಮೊದಲಾದ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿದರು.

ಕುಂದಾಪುರದ ಸಹಾಯಕ ಕಮಿಷನರ್ ಕೆ. ರಾಜು, ತಹಶಿಲ್ದಾರ್ ಕಿರಣ್ ಗೌರಯ್ಯ ದೇವಳಕ್ಕೆ ಆಗಮಿಸಿದರು. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಕುಂದಾಪುರ ನಗರ ಠಾಣೆ ಪ್ರಭಾರ ಪಿಎಸ್‌ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಭದ್ರತೆ ಮತ್ತು ಟ್ರಾಫಿಕ್ ಠಾಣೆ ಪಿಎಸ್‌ಐ ಸುದರ್ಶನ್ ಹಾಗೂ ಸಿಬ್ಬಂದಿಗಳು ಟ್ರಾಫಿಕ್ ವ್ಯವಸ್ಥೆ ಸುಗಮಗೊಳಿಸಿದರು.

Related Posts

Leave a Reply

Your email address will not be published.