ಕೊಳ್ನಾಡುವಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅನುದಾನ ಮಂಜೂರು: ಎಂ.ಎಸ್.ಮಹಮ್ಮದ್

ವಿಟ್ಲ : ಕೊಳ್ನಾಡು ಜಿ.ಪಂ. ವ್ಯಾಪ್ತಿಯ ಕನ್ಯಾನ, ಕರೋಪಾಡಿ, ಕೊಳ್ನಾಡು, ಸಾಲೆತ್ತೂರು ಗ್ರಾ.ಪಂ.ಗಳಿಗೆ ಒಟ್ಟು ಜಲಜೀವನ್ ಮಿಷನ್ ಯೋಜನೆಯಡಿ 7.81 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಜಿ.ಪಂ.ಮಾಜಿ ಎಂ.ಎಸ್.ಮಹಮ್ಮದ್ ತಿಳಿಸಿದರು.ಅವರು ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾನು ಪ್ರತಿನಿಧಿಸಿದ ಕೊಳ್ನಾಡು ಜಿ.ಪಂ.ಕ್ಷೇತ್ರವು ದ.ಕ.ಜಿಲ್ಲೆಯಲ್ಲೇ ಅತೀ ಹೆಚ್ಚು ಅನುದಾನ ಪಡೆದಿದೆ. ಗ್ರಾ.ಪಂ.ನ ನೀರು ಮತ್ತು ನೈರ್ಮಲ್ಯ ಸಮಿತಿಯು ನಿರ್ಣಯ ಕೈಗೊಂಡು ಪ್ರಸ್ತಾವನೆಯನ್ನು ಜಿ.ಪಂ.ಗೆ ಸಲ್ಲಿಸಿದಾಗ ಈ ಅನುದಾನ ಮಂಜೂರಾಗುತ್ತದೆ. ಜಿ.ಪಂ.ಗೆ ಕೇಂದ್ರ ಸರಕಾರದ ಶೇ.37.50 ಪಾಲು ಮತ್ತು ರಾಜ್ಯ ಸರಕಾರದ ಶೇ.37.50 ಪಾಲು ಸೇರಿದ ಅನುದಾನ ತಲುಪುತ್ತದೆ. ಗ್ರಾ.ಪಂ. ಶೇ.25ರಷ್ಟು ಅನುದಾನ ಒದಗಿಸಿದರೆ, ಜಿ.ಪಂ. ಈ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ. ಕೊಳ್ನಾಡು ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರಿಂದ ಈ ಕೊಳ್ನಾಡು ಕ್ಷೇತ್ರ ಜಿ.ಪಂ.ಕ್ಷೇತ್ರಕ್ಕೆ ಈ ಕುಡಿಯುವ ನೀರಿನ ಯೋಜನೆ ಅನುದಾನ ಹರಿದುಬಂದಿದೆ ಎಂದು ತಿಳಿಸಿದರು.


ಕನ್ಯಾನ ಗ್ರಾಮಕ್ಕೆ 219,19 ಲಕ್ಷ ರೂ., ಕರೋಪಾಡಿ ಗ್ರಾಮಕ್ಕೆ 236.29 ಲಕ್ಷ ರೂ., ಕೊಳ್ನಾಡು ಗ್ರಾಮಕ್ಕೆ 226.79 ಲಕ್ಷ ರೂ. ಮತ್ತು ಸಾಲೆತ್ತೂರು ಗ್ರಾಮಕ್ಕೆ 99ಲಕ್ಷ ರೂ. ಸೇರಿ ಒಟ್ಟು 781.26 ಲಕ್ಷ ರೂ. ಅನುದಾನ ಮಂಜೂರಾಗಿದೆ. ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಆದಷ್ಟು ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕನ್ಯಾನ ಗ್ರಾ.ಪಂ.ಅಧ್ಯಕ್ಷ ಕೆ.ಪಿ.ಅಬ್ದುಲ್‌ರಹಿಮಾನ್, ಕೊಳ್ನಾಡು ಗ್ರಾ.ಪಂ.ಅಧ್ಯಕ್ಷೆ ನೆಬಿಸಾ ಖಾದರ್, ಸಾಲೆತ್ತೂರು ಗ್ರಾ.ಪಂ.ಅಧ್ಯಕ್ಷ ಹಸೈನಾರ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.