ಕ.ಸಾ.ಪಗೆ ಒಂದು ಸಾವಿರ ಕೋಟಿ ರೂ ಶಾಶ್ವತ ನಿಧಿ ಸ್ಥಾಪನೆ ತಮ್ಮ ಗುರಿ ; ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧಿ ಮಾಯಣ್ಣ

ಬೆಂಗಳೂರು, ನ 18; ನಾಡಿನ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸಮಗ್ರ ಶ್ರೇಯೋಭಿವೃದ್ಧಿಗಾಗಿ ಆರ್ಥಿಕ ಬಲ ತುಂಬುವುದು ತಮ್ಮ ಪ್ರಧಾನ ಆದ್ಯತೆಯಾಗಿದ್ದು, ಇದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿ ಮೊತ್ತದ ಶಾಶ್ವತ ನಿಧಿ ಸ್ಥಾಪಿಸಲು ಶ್ರಮಿಸುವುದಾಗಿ ಪರಿಷತ್ತಿನ ಅಧ್ಯಕ್ಷ ಸ್ಥಾನದ ಸ್ಪರ್ಧಿ ಮಾಯಣ್ಣ ಹೇಳಿದ್ದಾರೆ.ಇದೇ ತಿಂಗಳ 21 ರಂದು ನಡೆಯಲಿರುವ ಕ.ಸಾ.ಪ ಚುನಾವಣೆಗೆ ಬೆಂಗಳೂರು ನಗರದ ಜಿಲ್ಲೆಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಲೇಖಕ ಎಂ. ತಿಮ್ಮಯ್ಯ ಹಾಗೂ ಪದ್ಮನಾಭ ವಿಧಾನಸಭಾ ಕ್ಷೇತ್ರದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ. ವೆಂಕಟೇಶ್ ಅವರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಾಡು – ನುಡಿಯ ಸರ್ವತೋಮುಖ ಬೆಳವಣಿಗೆಗೆ ಆರ್ಥಿಕ ಬಲ ತುಂಬುವುದು ಇಂದಿನ ತುರ್ತು ಅಗತ್ಯವಾಗಿದೆ. ವಾರ್ಡ್ ಮಟ್ಟದಿಂದ ಅಖಿಲ ಭಾರತ ಮಟ್ಟದವರೆಗೆ ಕನ್ನಡ ಸಾಹಿತ್ಯ ಸಮ್ಮೇಳನಗಳ ಆಯೋಜನೆ, ಹೊಸ ಮುದ್ರಣಾಲಯ ಸ್ಥಾಪನೆ, ಕನ್ನಡ ನುಡಿ ಪತ್ರಿಕೆಯನ್ನು ವಿಸ್ತರಿಸಲು ಹಣಕಾಸು ಕ್ರೋಢೀಕರಣಕ್ಕೆ ಒತ್ತು ನೀಡಲಾಗುವುದು ಎಂದರು.

 

ಕನ್ನಡದ ಥೇರನ್ನು ಅತ್ಯಂತ ಯಶಸ್ವಿಯಾಗಿ ಎಳೆಯಲು ಸಾಧ್ಯವಾಗುವಂತೆ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಭವನಗಳ ನಿರ್ಮಾಣಕ್ಕೆ ಆದ್ಯತೆ. ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳಿಗೆ ವಾರ್ಷಿಕ ಪ್ರಶಸ್ತಿ. ರಾಜ್ಯಾದ್ಯಂತ ಪುಸ್ತಕ ಮಳಿಗೆಗಳ ಸ್ಥಾಪನೆ, ಮೂರನೇ ಶತಮಾನದಿಂದ ಸ್ವಾತಂತ್ರ್ಯಪೂರ್ವದವರೆಗೆ ಆಳಿದ, ಸ್ವಾತಂತ್ರ್ಯೋತ್ತರದಲ್ಲಿ ನಾಡುನುಡಿಗಾಗಿ ಸೇವೆ ಸಲ್ಲಿಸಿದವರನ್ನು ಸ್ಮರಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ 108 ಎಕರೆ ಪ್ರದೇಶದಲ್ಲಿ ಕೆತ್ತನೆ, ಪುತ್ಥಳಿ, ಶಾಸನಗಳುಳ್ಳ ಪ್ರತ್ಯೇಕ ವಂಶವೃಕ್ಷ ಉದ್ಯಾನವನ ನಿರ್ಮಾಣ ಮಾಡಲಾಗುವುದು ಎಂದು ಮಾಯಣ್ಣ ಹೇಳಿದರು.ಲೇಖಕ ಎಂ ತಿಮ್ಮಯ್ಯ ಮಾತನಾಡಿ, ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡಲು ಒತ್ತು ನೀಡುತ್ತಿದ್ದು, ಮಾಯಣ್ಣ ಅವರ ಆಶಯಗಳಿಗೆ ಬೆಂಬಲವಾಗಿ ಕೆಲಸ ಮಾಡುತ್ತೇನೆ. ತಮಗೆ ಬೆಂಗಳೂರು ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆಲಸ ಮಾಡಿದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್.ಎ. ಆತ್ಮಾನಂದ ಅವರು ತಮ್ಮನ್ನು ಬೆಂಬಲಿಸಿ ಕಣದಿಂದ ಹಿಂದೆ ಸರಿದಿದ್ದಾರೆ. ಬೆಂಗಳೂರು ನಗರದಲ್ಲಿ ಕನ್ನಡದ ಕಂಪು ಪಸರಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.

Related Posts

Leave a Reply

Your email address will not be published.