ಮುರ್ಡೇಶ್ವರದ ಯಮುನಾ ನಾಯ್ಕ್ ಅತ್ಯಾಚಾರ ಕೊಲೆ ಪ್ರಕರಣ: ಮರು ತನಿಖೆಗೆ ಉಚ್ಚ ನ್ಯಾಯಾಲಯದ ಪೀಠ ಮಹತ್ವದ ತೀರ್ಪು

ಕುಂದಾಪುರ: ಉತ್ತರಕನ್ನಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಮುರ್ಡೇಶ್ವರದ 21 ವರ್ಷದ ಯುವತಿ ಯಮುನಾ ನಾಯ್ಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಧಾರವಾಡದ ಉಚ್ಚ ನ್ಯಾಯಾಲಯದ ಪೀಠ ಮಹತ್ವದ ತೀರ್ಪು ನೀಡಿದೆ.

ಅತ್ಯಾಚಾರ, ಕೊಲೆ ಪ್ರಕರಣ ನಡೆದು ಸುಮಾರು 11 ವರ್ಷಗಳ ಬಳಿಕ ಮರು ತನಿಖೆ ನಡೆಸುವಂತೆ ನ್ಯಾಯಾಲಯ ತೀರ್ಪು ನೀಡಿದ್ದು ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ವೆಂಕಟೇಶ್ ಹರಿಕಾಂತ್ ಎನ್ನುವ ವ್ಯಕ್ತಿ ಬರೋಬ್ಬರಿ 6 ವರ್ಷ 8 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ನಾಲ್ಕು ವರ್ಷದ ಹಿಂದೆ ಖುಲಾಸೆಗೊಂಡಿದ್ದರು. ತೀರ್ಪನ್ನು ಪ್ರಶ್ನಿಸಿ ಯಮುನಾ ನಾಯ್ಕ ತಂದೆ ನಾಗಪ್ಪ ಮಾಸ್ತಿ ನಾಯ್ಕ ಅವರು ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟೀಸ್ ಆರ್. ದೇವದಾ ಮತ್ತು ಜಸ್ಟೀಸ್ ಜೆ.ಎಂ.ಖಾಜಿ ಅವರಿದ್ದ ಪೀಠವು ಮೇಲ್ಮವಿಯನ್ನು ತಿರಸ್ಕರಿಸಿದೆಯಲ್ಲದೇ ಪ್ರಥಮ ವರ್ತಮಾನ ವರದಿಯಲ್ಲಿರುವ ಆರೋಪಿಗಳನ್ನು ಡಿ.ಎನ್.ಎ. ಪರೀಕ್ಷೆಗೊಳಪಡಿಸಿ ತನಿಖೆಯನ್ನು ನಡೆಸಬೇಕು ಎಂದು ಮುರ್ಡೇಶ್ವರ ಠಾಣಾಧಿಕಾರಿಗೆ ಆದೇಶ ನೀಡಿದೆ.

ಅತ್ಯಾಚಾರ- ಹತ್ಯೆಯಾಗಿದ್ದ ಯುವತಿಯ ಕೈಯಲ್ಲಿ ಅಪರಾಧಿಯ ಕೂದಲುಗಳು ಪತ್ತೆಯಾಗಿತ್ತು. ಇನ್ನು ಕೆಲ ಸಾಕ್ಷ್ಯಗಳನ್ನು ಸಂಗ್ರಹಿಸಿ ಹೈದ್ರಾಬಾದ್ ನ ವಿಧಿ ವಿಜ್ಞಾನ ಇಲಾಖೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ವೆಂಕಟೇಶ್ ಅವರ ಡಿಎನ್‌ಎ ಪರಿಕ್ಷೆಯನ್ನೂ ನಡೆಸಲಾಗಿದ್ದು 11 ತಿಂಗಳ ಬಳಿಕ ಬಂದ ವರದಿಯಲ್ಲಿ ಆ ಡಿಎನ್‌ಎ ಮಾದರಿ ವೆಂಕಟೇಶ್ ಅವರದ್ದಲ್ಲ ಎಂಬುದಾಗಿತ್ತು.ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬರುತ್ತಲೇ ಮುರ್ಡೇಶ್ವರದಲ್ಲಿ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಮನೆಯ ಮಾಲೀಕ ಮೊಹಮ್ಮದ್ ಸಾಧಿಕ್ ದೊಣ್ಣ ಸೇರಿದಂತೆ ೯ ಜನರ ಮೇಲೆ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದು ತನಿಖೆಯನ್ನು ನಡೆಸಿದ ಪೊಲೀಸರು ಪ್ರಕರಣದಲ್ಲಿ ವೆಂಕಟೇಶ ಹರಿಕಾಂತ ಎನ್ನುವವನ್ನು ಬಂಧಿಸಿ ಆತನ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 51 ಜನ ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿದ್ದರೂ ಸಹ ಡಿ.ಎನ್.ಎ. ಪರೀಕ್ಷೆಯಲ್ಲಿ ವ್ಯತಿರಿಕ್ತ ದೋಷ ಮುಕ್ತಿಗೊಳಿಸಲು ಕಾರಣವಾಗಿತ್ತು.

ಪ್ರಕರಣದ ಬಗ್ಗೆ ವಾದ ಮಂಡನೆಗೆ ರವಿಕಿರಣ್ ಅವರು ಸಮರ್ಥವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು ಸುದೀರ್ಘ ವಾದ-ಪ್ರತಿವಾದಗಳು ನಡೆದು 51 ಜನರ ಸಾಕ್ಷಿ ವಿಚಾರಣೆ ನಡೆಸಲಾಗಿತ್ತು. ಡಿಎನ್‌ಎ ವರದಿ ಆಧರಿಸಿ ಜೂನ್ 28 ರಂದು ಕಾರವಾರದ ಜಿಲ್ಲಾ ನ್ಯಾಯಾಲಯ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಆರೋಪಿ ಎಂದು ಬಂಧಿತನಾಗಿದ್ದ ವೆಂಕಟೇಶ್ ಪಾತ್ರವಿಲ್ಲ, ಆತ ನಿರಪರಾಧಿ ಎಂದು ತೀರ್ಪು ನೀಡಿತ್ತು.

ಪ್ರಮೋದ್ ಮುತಾಲಿಕ್ ಸಂತಸ:
ಅಂದಿನ ಡಿವೈಎಸ್ಪಿ ನಾರಾಯಣ್ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ವೆಂಕಟೇಶ್ ಕುಟುಂಬ ನಿರ್ಧರಿಸಿದ್ದಾರೆ. ವೆಂಕಟೇಶ್ ಅವರ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲ ನೀಡಿದ್ದು ಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ಕೂಡ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆದು ನೈಜ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದು ಈ ಬಗ್ಗೆ ಗೃಹಸಚಿವರು ಮತ್ತು ಕಾರವಾರ ಎಸ್ಪಿ ಅವರಿಗೆ ಮನವಿ ನೀಡಲಿದ್ದೇವೆ. ಈ ಮಹತ್ವದ ತೀರ್ಪು ಮತ್ತೆಲ್ಲಾ ಬಗೆಹರಿಯದ ಕೊಲೆಕೇಸಿನ ಮರು ತನಿಖೆಗೆ ಪೂರಕವಾಗಲಿದೆ ಎಂದು ಮುತಾಲಿಕ್ ಅವರು ತಿಳಿಸಿದ್ದಾರೆ.

Related Posts

Leave a Reply

Your email address will not be published.