Header Ads
Breaking News

ಕೊರೋನ ನಿರ್ಬಂಧದ ನೆಪದಲ್ಲಿ ಖಾಸಗಿ ಬಸ್ ದರ ಹೆಚ್ಚಳ : ಡಿವೈಎಫ್ಐ ವಿರೋಧ

ಲಾಕ್ ಡೌನ್ ನಿಯಮಗಳು ಸಡಿಲಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಂಚಾರ ಆರಂಭಿಸಲಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ‌ ಬಸ್ಸುಗಳ ಮಾಲಕರ ಒಕ್ಕೂಟಗಳು ಕೊರೋನ ನಿರ್ಬಂಧಗಳ ಪಾಲನೆಯ ನೆಪದಲ್ಲಿ  “ಸೆಸ್ ಹಾಕಲು ತಮಗೆ ಸರಕಾರ ಅವಕಾಶ ನೀಡಿದೆ” ಎಂದು ಶೇಕಡಾ ಇಪ್ಪತ್ತೈದರಷ್ಟು ಪ್ರಯಾಣ ದರ ಏಕಪಕ್ಷೀಯವಾಗಿ ಏರಿಸಲು ತೀರ್ಮಾನಿಸಿರುವುದನ್ನು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸಿದೆ. ಲಾಕ್ ಡೌನ್, ಕೊರೋನಾ ನಿರ್ಬಂಧಗಳನ್ನು ವಿಧಿಸಿರುವ ಸರಕಾರದೊಂದಿಗೆ ತೆರಿಗೆ ವಿನಾಯತಿ ಸಹಿತ ವಿವಿಧ ರಿಯಾಯತಿಗಳಿಗಾಗಿ ಒತ್ತಡ ಹಾಕುವ ಬದಲಿಗೆ ಈಗಾಗಲೆ ದುಡಿಮೆಯಿಲ್ಲದೆ ಬಳಲಿರುವ ಪ್ರಯಾಣಿಕರ ಮೇಲೆ ಹೊರೆ ಹಾಕುವ ಇಂತಹ ಪ್ರಯತ್ನಗಳಿಗೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ  ಆಗಿರುವ ಅವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅವಕಾಶ ನೀಡಬಾರದು ಎಂದು ಡಿವೈಎಫ್ಐ ಆಗ್ರಹಿಸಿದೆ.
ಕೊರೋನ ನಿರ್ಬಂಧ, ಸತತ ಲಾಕ್ ಡೌನ್ ಗಳಿಂದ ಖಾಸಗಿ ಬಸ್ಸು ಮಾಲಕರು ಮಾತ್ರವಲ್ಲದೆ ಜನ ಸಾಮಾನ್ಯರೂ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದಾರೆ. ಅದರಲ್ಲೂ ಖಾಸಗಿ ಬಸ್ಸುಗಳನ್ನು ಪ್ರಯಾಣಕ್ಕಾಗಿ ಬಳಸುವವರು ಬಹುತೇಕರು ಬಡ ವಿಭಾಗಕ್ಕೆ ಸೇರಿದ ಕೂಲಿಕಾರರು, ಸಣ್ಣ ಪುಟ್ಟ ವರ್ಕ್ ಶಾಪ್, ಅಂಗಡಿ, ಕಚೇರಿಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವಂತವರು. ಅಲ್ಲ ಸ್ವಲ್ಪ ಆದಾಯ ಇರುವವರೂ ಸ್ವಂತ ವಾಹನ ಹೊಂದುವ ಈ ಕಾಲಘಟ್ಟದಲ್ಲಿ ಬಸ್ ಪ್ರಯಾಣ ದರ ತೀರಾ ಕಡಿಮೆ ಸಂಬಳ ಪಡೆಯುವ ಬಡವರ್ಗಕ್ಕೆ ದೊಡ್ಡ ಪೆಟ್ಟು ನೀಡುತ್ತದೆ. ಒಂದೊಂದು ಪೈಸೆಗೂ ಲೆಕ್ಕ ಇಟ್ಟು ಬದುಕು ನಡೆಸಬೇಕಾದ ಈ ಧ್ವನಿರಹಿತ ವಿಭಾಗವನ್ನು ಶೇಕಡಾ ಇಪ್ಪತ್ತೈದರಷ್ಟು ಬಸ್ಸು ಪ್ರಯಾಣ ದರ ಏರಿಕೆ ದೊಡ್ಡದಾಗಿ ಭಾದಿಸಲಿದೆ.
ಕೊರೋನ, ಲಾಕ್ ಡೌನ್ ನಿರ್ಬಂಧಗಳಿಂದಾಗಿ ಶೇಕಡಾ ಐವತ್ತು ಪ್ರಯಾಣಿಕರಿಗೆ ಮಾತ್ರ ಅವಕಾಶ, ದಿನದ ಅರ್ಧ ಅವಧಿಗಷ್ಟೆ  ಬಸ್ಸು ಓಡಾಟಕ್ಕೆ ಅವಕಾಶ ಸರಕಾರವೇ ವಿಧಿಸಿರುವ ನಿಯಮಗಳಾಗಿದ್ದು, ಬಸ್ಸು ಮಾಲಕರು ಇದಕ್ಕೆ ಪರಿಹಾರವನ್ನು ಸರಕಾರದಿಂದಲೆ ಪಡೆಯಬೇಕು. ಕೇರಳದಂತಹ ಕಡೆ ಸರಕಾರ ಲಾಕ್ ಡೌನ್ ಅವಧಿಯಲ್ಲಿ ರಸ್ತೆ ತೆರಿಗೆ ವಿನಾಯತಿ ನೀಡಿರುವುದನ್ನು ಬಸ್ಸು ಮಾಲಕರ ಒಕ್ಕೂಟಗಳು ಗಮನಿಸಬೇಕು.  ಡೀಸೆಲ್ ದರ ಏರಿಕೆ ಮುಂದಿಟ್ಟು ಅಥವಾ ಇನ್ನಿತರ ಯಾವುದೆ ಕಾರಣಗಳಿಗೂ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯ ಅನುಮತಿ ಇಲ್ಲದೆ ಪ್ರಯಾಣ ದರ ಏರಿಕೆಗೆ ನಿಯಗಳು ಅನುಮತಿ ನೀಡುವುದಿಲ್ಲ. ಕೊರೋನ ಪ್ರಥಮ ಅಲೆಯ ಸಂದರ್ಭದಲ್ಲೂ ತಾತ್ಕಾಲಿಕ ನೆಲೆಯಲ್ಲಿ ಏರಿಸಿದ್ದ ಪ್ರಯಾಣ ದರವನ್ನು ಬಸ್ಸು ಮಾಲಕರು ನಂತರ ಇಳಿಸಿರಲಿಲ್ಲ. ಈಗ ಮತ್ತೆ ಏಕಪಕ್ಷೀಯ ದರ ಏರಿಕೆಗೆ ಡಿವೈಎಫ್ಐ ಪ್ರಬಲ ಆಕ್ಷೇಪ ವ್ಯಕ್ತಪಡಿಸುತ್ತದೆ. ಯಾವುದೇ ಕಾರಣಕ್ಕೆ ದರ ಏರಿಕೆಗೆ ಬಸ್ಸು ಮಾಲಕರು ಮನವಿ ಸಲ್ಲಿಸಿದರೆ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಅಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲೇ ನಿರ್ಧಾರವನ್ನು ಕೈಗೊಳ್ಳಬೇಕು. ಅದರ ಹೊರತು ಜಿಲ್ಲಾಡಳಿತ ಏಕಪಕ್ಷೀಯ ಏರಿಕೆಗೆ ಬಸ್ಸು ಮಾಲಕರ ಒಕ್ಕೂಟಗಳಿಗೆ ಅವಕಾಶ ನೀಡಬಾರದು ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸುತ್ತದೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *