Header Ads
Breaking News

ಮೂಲಭೂತ ಸೌಕರ್ಯ ವಂಚಿತ ಬಡ ಪೊಳ್ಯದ ಬಡ ಕುಟುಂಬ

ಪುತ್ತೂರು: ಆಗಲೋ ಈಗಲೋ ಬೀಳುವಂತಿರುವ ಮಣ್ಣಿನ ಗೋಡೆಯ ಮನೆ, ವಿದ್ಯುತ್ ಸಂಪರ್ಕವೇ ಇಲ್ಲದೆ ದೀಪದ ಬೆಳಕಿನಲ್ಲಿ ಮನೆಯ ಕತ್ತಲು ಹೋಗಲಾಡಿಸುವ ಈ ಕುಟುಂಬಕ್ಕೆ ದೇಹಬಾಧೆಯನ್ನು ತೀರಿಸಲು ಶೌಚಾಲಯದ ವ್ಯವಸ್ಥೆಯೂ ಇಲ್ಲದಂತಹ ಪರಿಸ್ಥಿತಿ. ರಸ್ತೆಯ ಸೌಕರ್ಯವಿಲ್ಲದೆ ಸುಮಾರು ಒಂದೂವರೆ ಕಿ.ಮೀ. ದೂರ ನಡೆದುಕೊಂಡೇ ಹೋಗಬೇಕಾದಂತಹ ದುಃಸ್ಥಿತಿ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೊಳ್ಯ ಎಂಬಲ್ಲಿ ವಾಸಿಸುತ್ತಿರುವ ಮೂಲಭೂತ ಸೌಲಭ್ಯ ವಂಚಿತ ಕುಟುಂಬವೊಂದರ ಕಣ್ಣೀರ ಕತೆ.

ಪತಿ ನಾರಾಯಣ ನಾಯ್ಕ್, ಪತ್ನಿ ಹರಿಣಾಕ್ಷಿ ಮತ್ತು ಓರ್ವ ಪುತ್ರಿ ಪ್ರತಿಜ್ಞಾ ಅವರನ್ನು ಒಳಗೊಂಡಿರುವ ಬಡ ಪುಟ್ಟ ಕುಟುಂಬಕ್ಕೆ ಕೂಲಿ ಕೆಲಸವೇ ಜೀವನಾಧಾರ. ತಂದೆ-ತಾಯಿ ಕೂಲಿ ಕೆಲಸ ಮಾಡಿ ಸಂಪಾದಿಸಿದರೆ ಅಂದಿನ ದಿನಕ್ಕೆ ಹೊಟ್ಟೆಗೆ ಯಾವುದೇ ತತ್ವಾರ ಇರುವುದಿಲ್ಲ. ನಿತ್ಯದ ದುಡಿಮೆಯಿಂದ ಒಂದಿಷ್ಟು ಉಳಿತಾಯ ಮಾಡಿ ತಮ್ಮ ಪುತ್ರಿಗೆ ಶಿಕ್ಷಣ ನೀಡುತ್ತಿದ್ದಾರೆ. ಪ್ರಸ್ತುತ ಎಸ್ಸೆಸ್ಸೆಲ್ಸಿ ತರಗತಿಯಲ್ಲಿರುವ ಪ್ರತಿಜ್ಞಾಗೆ ಆನ್‍ಲೈನ್ ಮೂಲಕ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ. ಆದರೆ, ಮನೆಗೆ ವಿದ್ಯುತ್ ಇಲ್ಲದಿದ್ದರೆ ಮೊಬೈಲ್ ಚಾರ್ಚ್ ಮಾಡುವುದಾದರೂ ಹೇಗೆ?
ಕರಾಳ ರಾತ್ರಿ
ಇದೇ ಫೆ.22 ರಂದು ಪುತ್ತೂರಿನ ಎಲ್ಲೆಡೆಯೂ ಭಾರೀ ಮಳೆ. ರಾತ್ರಿ 8.30ಕ್ಕೆ ಈ ಭಾರೀ ಮಳೆಗೆ ಈ ಬಡ ಕುಟುಂಬದ ಮನೆಯ ಮೇಲೆ ಮರವೊಂದು ಅಪ್ಪಳಿಸಿತು. ಈ ಸಂದರ್ಭ ತಾಯಿ, ಮಗಳು ಮನೆಯೊಳಗಡೆ ಇದ್ದರು. ಆದರೆ, ಅವರು ಅಪಾಯದಿಂದ ಪಾರಾಗಿದ್ದರು. ಇದಾದ ಬಳಿಕ ಪಂಚಾಯತ್‍ನವರು ಬಂದು ಮನೆಯ ಫೆÇೀಟೋ ತೆಗೆದುಕೊಂಡು ಹೋದರು. ಮನೆ ಹಾನಿಗೆ ಸರಕಾರದಿಂದ ಪರಿಹಾರ ಸಿಗುತ್ತದೆ ಎಂದೆಲ್ಲಾ ಹೇಳಿ ಹೋದರು. ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ದೊರಕುವುದೆಂಬ ನಿರೀಕ್ಷೆಯಲ್ಲಿ ಈ ಬಡ ಕುಟುಂಬ ದಿನ ಲೆಕ್ಕ ಹಾಕಲಾರಂಭಿಸಿತು. ಈ ಘಟನೆ ನಡೆದು ಸುಮಾರು ಎರಡೂವರೆ ತಿಂಗಳಾಗುತ್ತಾ ಬಂತು. ಆದರೆ, ಇದುವರೆಗೂ ಚಿಕ್ಕಾಸೂ ಸರಕಾರದಿಂದ ದೊರಕಲಿಲ್ಲ.
ಬೆಂಬಿಡದ ಸಂಕಷ್ಟ
ಮರ ಬಿದ್ದು ಮನೆ ಹಾನಿಗೊಳಗಾದ ಬಳಿಕ ಈ ಕುಟುಂಬ ಇತರೆಡೆ ತೆರಳಿ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ. ಇದರ ಮಧ್ಯೆ ಕೊರೋನಾ ಮಹಾಮಾರಿಯಿಂದಾಗಿ ದುಡಿಯುವ ಕೈಗಳಿಗೆ ಕೆಲಸವೂ ಇಲ್ಲದಂತಾಗಿದೆ. ಕೈಯಲ್ಲಿ ದುಡ್ಡಿಲ್ಲದೆ ಮನೆ ಬಾಡಿಗೆಯನ್ನೂ ಕಟ್ಟಲಾಗದ ಪರಿಸ್ಥಿತಿ. `ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷೀಲಿ…’ ಎಂಬಂತೆ ಈ ಬಡ ಕುಟುಂಬಕ್ಕೆ ದುಡಿದು ನೆಮ್ಮದಿಯಿಂದ ಬದುಕುವ ಅವಕಾಶವನ್ನೂ ವಿಧಿ ಕಿತ್ತುಕೊಂಡಿದೆ. ಅತ್ತ ಮನೆಯೂ ದುರಸ್ತಿಯಾಗದೆ, ಇತ್ತ ಬಾಡಿಗೆ ಮನೆಯ ಬಾಡಿಗೆ ಕಟ್ಟಲು ದುಡಿದು ಸಂಪಾದಿಸುವ ಎಂದರೆ ಕೆಲವೂ ಇಲ್ಲದಂತಾಗಿದೆ.
ಪರಿಹಾರ ದೊರಕಲೆಷ್ಟು ಸಮಯ ಬೇಕು?

ಮಳೆಯಿಂದ ಕಡು ಬಡವರ ಮನೆ ಹಾನಿಗೊಳಗಾಗಿದ್ದರೂ ಅದಕ್ಕೆ ತಕ್ಷಣ ಪರಿಹಾರ ಒದಗಿಸಿಕೊಡುವಂತಹ ಮಾನವೀಯತೆ ಅಧಿಕಾರಿ ವರ್ಗದಲ್ಲಿ ಇಲ್ಲದಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಆ ಮನೆಯನ್ನು ಕಂಡಾಗಲೇ ಬಡತನದ ಭೀಕರತೆ ಸಾಕ್ಷಿಯನ್ನು ಹೇಳುತ್ತದೆ. ಆದರೆ, ಪಂಚಾಯತ್‍ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಫೋಟೋ ತೆಗೆದುಕೊಂಡು ಹೋದವರ ಪತ್ತೆಯೇ ಇಲ್ಲದಂತಾಗಿದೆ. ಈ ಕುರಿತು ವಿಚಾರಿಸಿದರೆ ತಮ್ಮ ಜವಾಬ್ದಾರಿಯನ್ನು ಇನ್ನೊಬ್ಬ ಅಧಿಕಾರಿಯ ಹೆಗಲ ಮೇಲೆ ಜಾರಿಸಿಬಿಡುತ್ತಿದ್ದಾರೆ. ಜನಪ್ರತಿನಿಧಿಗಳಿಗೂ ಈ ಕುಟುಂಬದ ಕಣ್ಣೀರ ಕತೆ ಕಣ್ಣೆದುರು ಬಾರದೇ ಇರುವುದು ವಿಷಾದನೀಯವೇ ಸರಿ…!

ಸಂಘನೆಯೊಂದರ ಪ್ರಮುಖರೋರ್ವರು ಈ ಕುಟುಂಬದ ನರಕಯಾತನೆಯನ್ನು ಕಂಡು ಜಿಲ್ಲಾಧಿಕಾರಿ, ಎಸ್ಪಿಯವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಎಸ್ಪಿ ಅವರು ತಕ್ಷಣವೇ ಪುತ್ತೂರು ನಗರ ಠಾಣೆ ಎಸ್‍ಐ ಜಂಬೂರಾಜ್ ಮಹಾಜನ್ ಅವರಿಗೆ ದೂರವಾಣಿ ಮಾಡಿ ಕ್ರಮಕ್ಕೆ ಸೂಚಿಸಿದ್ದರು. ಈ ಕುಟುಂಬವನ್ನು ಬೇರೆಡೆ ಸ್ಥಳಾಂತರಿಸಲಾಯಿತಾದರೂ ಅದೇನೂ ಶಾಶ್ವತ ಪರಿಹಾರವಾಗಿರಲಿಲ್ಲ. ಅಂದಿನಿಂದ ಇಂದಿನವರೆಗೂ ಈ ಕುಟುಂಬ ಮನೆ ರಿಪೇರಿಗಾಗಿ ಸರಕಾರದ ಸಹಾಯದ ನಿರೀಕ್ಷೆಯಲ್ಲೇ ದಿನಗಳೆಯುತ್ತಿದೆ.

ಒಟ್ಟಿನಲ್ಲಿ ಕಳೆದ ಅದೇಷ್ಟೋ ವರ್ಷಗಳಿಂದ ಮೂಲಭೂತ ಸೌಕರ್ಯ ವಂಚಿತ ಬಡ ಕುಟುಂಬವೊಂದು ಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರೂ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಬಕ ಗ್ರಾಮದ ಪೊಳ್ಯ ಎಂಬಲ್ಲಿ ವಾಸಿಸುತ್ತಿರುವ ಈ ಬಡ ಕುಟುಂಬದ ಸಂಕಷ್ಟಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಒದಗಿಸಬೇಕಾಗಿದೆ.

Related posts

Leave a Reply

Your email address will not be published. Required fields are marked *