ಅಟೋ ರಿಕ್ಷಾಕ್ಕೆ ಬಸ್ ಅಡ್ಡವಿರಿಸಿ ಗೂಂಡಾಗಿರಿ: ಪಡುಬಿದ್ರಿ ಅಟೋ ಯುನಿಯನ್‌ನಿಂದ ಠಾಣೆಗೆ ಮುತ್ತಿಗೆ

ಎರ್ಮಾಳು ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಅಟೋ ಹತ್ತಿಸಿಕೊಂಡ ಎಂಬ ನೆಪವೊಡ್ಡಿ ಬಸ್ ಚಾಲಕನೊರ್ವ ಅಟೋ ರಿಕ್ಷಾಕ್ಕೆ ಬಸ್‌ನ್ನು ಅಡ್ಡವಿರಿಸಿ ಗೂಂಡಾಗಿರಿ ಪ್ರದರ್ಶಿಸಿದ್ದಾನೆ ಎಂಬುದಾಗಿ ಆರೋಪಿಸಿ ಪಡುಬಿದ್ರಿ ಅಟೋ ರಿಕ್ಷಾ ಚಾಲಕರು ರಿಕ್ಷಾ ಬಂದ್ ನಡೆಸಿ ಪಡುಬಿದ್ರಿ ಠಾಣೆಗೆ ಮುತ್ತಿಗೆ ಹಾಕಿ ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಘಟನೆ ನಡೆದಿದೆ.

ಉಡುಪಿಯಿಂದ ಕಟೀಲಿಗೆ ಹೋಗುವ ಬಸ್ “ಶಫತ್” ಹೆಸರಿನ ಖಾಸಾಗಿ ಬಸ್ ಚಾಲಕ ಉಚ್ಚಿಲ ನಿವಾಸಿ ತನ್ಸಿರ್ ಎಂಬಾತನೆ ಆರೋಪಿಯಾಗಿದ್ದಾನೆ. ಈತ ಪಡುಬಿದ್ರಿ ಅಟೋ ಯುನಿಯನ್ ಸದಸ್ಯ ರಮೇಶ್ ಎಂಬವರ ಅಟೋ ರಿಕ್ಷಾಕ್ಕೆ ಬಸ್ ಅಡ್ಡವಿರಿಸಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅಟೋದಲ್ಲಿದ್ದ ಇರ್ವರು ವಯೋ ವೃದ್ಧರನ್ನು ಅಟೋದಿಂದ ಇಳಿಸಿ ಬಸ್ ಹತ್ತಿಸಿಕೊಂಡು ಹೊರಟು ಹೋಗಿದ್ದ ಎನ್ನುತ್ತಾರೆ ಅಟೋ ಚಾಲಕ ಬಡಪಾಯಿ ರಮೇಶ್.

ವಿಡಿಯೋ ವೈರಲ್: ಕೆಲವೇ ಹೊತ್ತಲ್ಲಿ ಈ ಪ್ರಕರಣದ ವಿಡಿಯೋ ವೈರಲ್ ಆಗಿದ್ದು ಇದರಿಂದ ಕುಪಿತಗೊಂಡ ಅಟೋ ಯೂನಿಯನ್ ಸದಸ್ಯರೆಲ್ಲಾ ಅಟೋ ರಿಕ್ಷಾ ಬಂದ್ ಮಾಡಿ ಪಡುಬಿದ್ರಿ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಅಟೋ ಯುನಿಯನ್ ಅಧ್ಯಕ್ಷ ಲೋಕೇಶ್ ಕಂಚಿನಡ್ಕ ಮಾತನಾಡಿ, ನಮ್ಮ ಆಟೋ ಚಾಲಕನಿಂದ ತಪ್ಪಾಗಿದ್ದರೆ ಕಾನೂನು ಕ್ರಮಕ್ಕಾಗಿ ದೂರು ನೀಡಲಿ, ಅದು ಬಿಟ್ಟು ಅಟೋ ರಿಕ್ಷಾಕ್ಕೆ ಬಸ್ ಅಡ್ಡವಿರಿಸಿ ಗೂಂಡಾಗಿರಿ ಪ್ರದರ್ಶಿಸುವುದು ಅದೇಷ್ಟು ಸರಿ, ಪ್ರಯಾಣಿಕರಿಗೆ ಏನಾದರೂ ಅಪಾಯ ಸಂಭವಿಸಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದರು.

ರಾಜಿಯಲ್ಲಿ ಅಂತ್ಯ: ಎಸ್ಸೈ ಬರುವುದು ವಿಳಂಬವಾಗಲಿದೆ ಎಂಬ ಕಾರಣಕ್ಕೆ ಠಾಣಾ ಅಪರಾಧ ವಿಭಾಗದ ಎಸ್ಸೈ ಮಾತುಕತೆ ನಡೆಸಿ ಬಸ್ ಚಾಲಕನಿಗೆ ಎಚ್ಚರಿಕೆ ನೀಡಿದ್ದಲ್ಲದೆ ಮುಚ್ಚಳಿಕೆ ಬರೆಯಿಸಿ ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸಿದ್ದಾರೆ.

 

 

Related Posts

Leave a Reply

Your email address will not be published.