ಪಡುಬಿದ್ರಿಯ ಕಡಲತೀರದಲ್ಲಿ ತೆರವಾಗದ ಟಗ್: ಸ್ಥಳೀಯ ನಿವಾಸಿಗಳಿಗೆ ತೊಂದರೆ

ಕಳೆದ ಚಂಡಮಾರುತದ ಸಂದರ್ಭ ಪಡುಬಿದ್ರಿಯ ಕಡಲತೀರ ಸೇರಿದ ಟಗ್ ತೆರವುಗೊಳಿಸುವಂತೆ ಒತ್ತಾಯಿಸಿದ ಮೀನುಗಾರ ಮುಖಂಡರು ತೆರವುಗೊಳಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ ನೀಡಿದ್ದರು. ಆದರೆ ಇದುವರೆಗೆ ಟಗ್ ತೆರವು ಕಾರ್ಯಕ್ಕೆ ಮುಂದಾಗಿಲ್ಲ.

ಮಂಗಳೂರು ಮೂಲದ ಬಿಲಾಲ್ ಸಂಸ್ಥೆ ಪಲ್ಟಿಯಾಗಿದ್ದ ಟಗ್ ತೆರವುಗೊಳಿಸುವ ಗುತ್ತಿಗೆ ಪಡೆದಿದ್ದರೂ, ಬಹಳಷ್ಟು ದಿನಗಳ ಪ್ರಯತ್ನದ ಬಳಿಕ ವಿಫಲಗೊಂಡು ಮತ್ತೊಂದು ಸಂಸ್ಥೆಯ ಸಹಾಯ ಯಾಚಿಸಿ ಉಡುಪಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಅವಳಿ ಸಂಸ್ಥೆಗಳು ಜಂಟಿಯಾಗಿ ಕಾರ್ಯಚರಿಸುವ ಬಗ್ಗೆ ತೀರ್ಮಾನಿಸಲಾಯಿತು. ಅದೇ ಸಭೆಯಲ್ಲಿ ಈ ಟಗ್ ಇಲ್ಲೇ ಕಡಲತೀರದಲ್ಲಿ ಉಳಿದರೆ ತೀರ ಮೀನುಗಾರಿಕೆಗೆ ಸಮಸ್ಯೆಯಾಗುತ್ತದೆ. ಆ ನಿಟ್ಟಿನಲ್ಲಿ ತಕ್ಷಣ ತೆರವುಗೊಳಿಸುವಂತೆ ಎಂಆರ್‌ಪಿಎಲ್ ಮುಖ್ಯಸ್ಥ ವೆಂಕಟೇಶ್ ರವರಲ್ಲಿ ಮೀನುಗಾರರು ಒತ್ತಾಯದ ಮೇರೆಗೆ, ಟಗ್ಗನ್ನು ತಕ್ಷಣ ಮಂಗಳೂರಿನ ಹಳೆ ಬಂದರಿಗೆ ಸಾಗಿಸಲಾಗುವುದು ಎಂಬ ಭರವಸೆ ನೀಡಿದ್ದರು. ಇದೀಗ ಅವರು ನೀಡಿದ ಭರವಸೆ ಸುಳ್ಳಗಾಗಿದ್ದು, ಈ ಬಗ್ಗೆ ಸಭೆಯ ಮೇಲೆ ಸಭೆ ನಡೆಸಿ ತೆರವುಗೊಳಿಸುವ ಗಡವು ವಿಸ್ತಾರಗೊಳಿಸುತ್ತಿದ್ದಾರೆ ಎಂಬ ಆರೋಪವಿದೆ. ಇದೀಗ ಇದರಿಂದ ಮತ್ತೊಂದು ಸಮಸ್ಯೆ ಉದ್ಭವಗೊಂಡಿದ್ದು, ಹಗಲು ರಾತ್ರಿ ಎನ್ನದೆ ಎಲ್ಲಿಂದಲೋ ಬರುವ ಮಂದಿ ತೀರಕ್ಕೆ ಅಂಟಿಕೊಂಡಿರುವ ಟಗ್ಗನ್ನು ಏರಿ ಚೇಷ್ಟೆ ನಡೆಸುವುದರಿಂದ ಸ್ಥಳೀಯ ನಿವಾಸಿಗಳಿಗೆ ಹೊಸತ್ತೊಂದು ಕಿರಿಕಿರಿ ಆರಂಭಗೊಂಡಿದೆ ಎಂಬ ಆರೋಪ ಕೇಳಿ ಬರುತ್ತಿದೆ.

Related Posts

Leave a Reply

Your email address will not be published.