ಪರ್ಕಳದ ಸಣ್ಣಕ್ಕಿಬೆಟ್ಟುವಿನಲ್ಲಿ ಹಡೀಲು ಭೂಮಿಯಲ್ಲಿ ಕೃಷಿ ಆಂದೋಲನ

ಉಡುಪಿಯಲ್ಲಿ “ಹಡೀಲು ಭೂಮಿ ಕೃಷಿ ಆಂದೋಲನ”ದಡಿ ಉಡುಪಿ ನಗರಸಭಾ ವ್ಯಾಪ್ತಿಯ ಹಡಿಲು ಭೂಮಿಗಳ ಕಡೇ ನಾಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ನಾಟಿ ಕಾರ್ಯದಲ್ಲಿ ಪಾಲ್ಗೊಂಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಒಬ್ಬ ಜನಪ್ರತಿನಿಧಿ ಕೇವಲ ಮತದ ಲೆಕ್ಕಾಚಾರಗಳನ್ನು ಹಾಕುವುದಲ್ಲ. ವಿಭಿನ್ನವಾದ ಕಾರ್ಯಗಳನ್ನು ಮಾಡಬೇಕು. ಇಂದು ನಶಿಸಿ ಹೋಗುತ್ತಿದ್ದ ಕೃಷಿ ಪರಂಪರೆಯನ್ನು ಉಳಿಸುವ ಕೆಲಸವಾಗಿದೆ. ಕೃಷಿಯ ಮೇಲಿನ ಪ್ರೀತಿ, ವಿಶ್ವಾಸ, ನಂಬಿಕೆ ಬರುವ ಕಾರ್ಯ ಶಾಸಕ ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ಮೂಲಕ ನಡೆದಿದೆ. ಉಡುಪಿಯಲ್ಲಿ ಕೃಷಿ ಕ್ರಾಂತಿ ನಡೆದಿದೆ. ಇದು ರಾಷ್ಟ್ರಕ್ಕೆ ಮಾದರಿ ಎಂದು ಹೇಳಿದರು.

ಅವರು ಪರ್ಕಳದ ಸಣ್ಣಕ್ಕಿಬೆಟ್ಟುವಿಲ್ಲಿ ನಾಟಿ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಜನ ಕೃಷಿಯನ್ನು ಲಾಭದ ದೃಷ್ಟಿಯಿಂದ ನೋಡಿಲ್ಲ. ಪೂಜ್ಯನೀಯ ಭಾವನೆಯಲ್ಲಿ ನೋಡಿದವರು. ತುಳುನಾಡಿನ ಸಂಸ್ಕೃತಿಯಲ್ಲಿ, ಆರಾಧನೆಯಲ್ಲಿ, ಜನಪದದಲ್ಲಿ ಕೃಷಿಯೇ ಆಧಾರವಾಗಿದೆ. ವ್ಯವಹಾರದ ದೃಷ್ಟಿಯಿಂದ ಇಂದು ಕೃಷಿ ಚಟುವಟಿಕೆಗಳು ಸ್ತಬ್ಧವಾಗಿದೆ. ಕೋವಿಡ್ ನಂತರ ಪರಿವರ್ತನೆಯಾಗಿದೆ. ಜನ ಇಂದು ಮತ್ತೆ ಜನ ಕೃಷಿಯತ್ತ ಒಲವು ತೋರುತ್ತಿದ್ದಾರೆ. ಈಗ ಅರಿವಾಗಿದೆ ,ಕೃಷಿಯೇ ಶಾಶ್ವತ ಅದುವೇ ಜೀವನ ಎಂಬ ಅಂಶ. ಕೃಷಿ ಕ್ಷೇತ್ರ ನಷ್ಟವಲ್ಲ. ಅದು ಲಾಭದಾಯಕ ಕ್ಷೇತ್ರವಾಗಿದೆ. ಪ್ರಯೋಗ ಶೀಲತೆಯಿಂದ ವಿವಿಧ ಬಗೆಯಲ್ಲಿ ಕೃಷಿ ಮಾಡಬೇಕು. ಕೇಂದ್ರದಲ್ಲಿ – ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ಭರಪೂರ ಸೌಲಭ್ಯಗಳನ್ನು ಒದಗಿಸಿದೆ. ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದ ಅವರು ಶಾಸಕ ರಘುಪತಿ ಭಟ್ ಅವರ ಈ ಕೃಷಿ ಕ್ರಾಂತಿ ರಾಷ್ಟ್ರಕ್ಕೆ ಮಾದರಿ. ಮುಂದೊಂದು ದಿನ “ಕೃಷಿ ಪರಂಪರೆಯ ಕ್ರಾಂತಿಯನ್ನು ತಂದವರು ರಘುಪತಿ ಭಟ್” ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು. ಬಳಿಕ ಸ್ಥಳೀಯರೊಂದಿಗೆ ಸೇರಿ ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ಭಾಗಿಯಾದರು.

Related Posts

Leave a Reply

Your email address will not be published.