ಆಶ್ವಾಸನೆಗೆ ಸೀಮಿತವಾಗಿರುವ ಗುಜ್ಜರಕೆರೆ -ಅರೆಕೆರೆ ಬೈಲಿನಲ್ಲಿ ಮತ್ತೆ ಡ್ರೈನೇಜ್ ಸಮಸ್ಯೆ

ಮಳೆಗಾಲ ಆರಂಭವಾಯಿತೆಂದರೆ ಜೆಪ್ಪು ಗುಜ್ಜರಕೆರೆ ಸಮೀಪದ ಅರೆಕೆರೆಬೈಲು ನಿವಾಸಿಗಳ ಸಂಕಷ್ಟ ಹೇಳ ತೀರದು. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಒಂದೆಡೆಯಾದರೆ.. ಅವ್ಯವಸ್ಥಿತ ಚರಂಡಿ ವ್ಯವಸ್ಥೆಯಿಂದ ರಸ್ತೆ ಮೇಲೆ ಡ್ರೈನೇಜ್ ನೀರು ಉಕ್ಕಿ ಹರಿಯುತ್ತಿದೆ. ಮಾತ್ರವಲ್ಲದೆ ಮನೆಗಳಿಗೆ ಕೊಳಚೆ ನೀರು ನುಗ್ಗುವ ಪರಿಸ್ಥಿತಿಯಲ್ಲಿದೆ. ಈ ಬಗ್ಗೆ ಒಂದು ವರದಿ.

ಹಲವು ದಶಕಗಳಿಂದ ಈ ಸಮಸ್ಯೆ ವಿಪರೀತವಾಗಿ ಬೆಳೆಯುತ್ತಿದ್ದು, ಇಲ್ಲಿಯವರೆಗೆ ಇದಕ್ಕೆ ಪರಿಹಾರ ಮರೀಚಿಕೆಯಾಗಿದೆ. ಕಳೆದ ಕೆಲವು ದಶಕಗಳಿಂದ ಪ್ರತಿ ಬಾರಿ ಮಳೆಗಾಲದಲ್ಲಿಸಮಸ್ಯೆ ಸೃಷ್ಟಿಯಾದಾಗ ಜನಪ್ರತಿನಿಧಿಗಳು ಸ್ಥಳಕ್ಕಾಗಮಿಸಿ ಆಶ್ವಾಸನೆ ನೀಡುವುದು ಒಂದು ಸಂಪ್ರದಾಯದಂತೆ ಇಲ್ಲಿ ಪರಿಪಾಠವಾಗಿದೆ. ಈ ಪ್ರದೇಶದಲ್ಲಿ ಮಳೆನೀರು ಹರಿಯುವ ಚರಂಡಿ ಹಾಗೂ ಡ್ರೈನೇಜ್ ವ್ಯವಸ್ಥೆ ಸಮರ್ಪಕವಾಗಿಲ್ಲದ ಪರಿಣಾಮ ಸ್ಥಳೀಯರಿಗೆ ಈ ಸಮಸ್ಯೆ ಹಲವು ವರ್ಷಗಳಿಂದ ಬಗೆ ಹರಿಯದೆ ಗೋಳಾಗಿ ಪರಿಣಮಿಸಿದೆ.

ಈ ಹಿಂದೆ ಡೆಂಗ್ಯೂ ಪ್ರಕರಣಗಳು ಈ ಭಾಗದಲ್ಲಿ ಉಲ್ಬಣಿಸಲು ಇಲ್ಲಿನ ಚರಂಡಿಗಳ ಅವ್ಯವಸ್ಥೆ ಪ್ರಮುಖ ಕಾರಣವಾಗಿತ್ತು. ಈ ಬಾರಿಯೂ ಇಲ್ಲಿನ ಚರಂಡಿಗಳ ಅವ್ಯವಸ್ಥೆಯ ಕಾರಣದಿಂದಾಗಿ ಹಾಗೂ ಪ್ರಮುಖವಾಗಿ ಸಂಬಂಧ ಪಟ್ಟವರ ಬೇಜವಾಬ್ದಾರಿತನದಿಂದ ಈ ಬಾರಿಯೂ ಸಮಸ್ಯೆಗಳು ಸೃಷ್ಟಿಯಾಗುವ ಭೀತಿ ಸ್ಥಳೀಯರಲ್ಲಿ ಎದುರಾಗಿದೆ. ಇಲ್ಲಿನ ಇಂತಹ ಸಮಸ್ಯೆಯಿಂದ ಕೊಳಚೆ ನೀರು ನಿಂತು, ಈ ಪ್ರದೇಶವು ಸೊಳ್ಳೆ ಉತ್ಪಾದನಾ ತಾಣವಾಗಿ ಈ ಹಿಂದಿನಂತೆ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಸ್ಥಳೀಯರಲ್ಲಿ ಮೂಡಿದೆ.

ಸ್ಥಳೀಯ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವಿರುವ ಪವಿತ್ರ ತೀರ್ಥ ಕೆರೆ ಹಾಗೂ ಪುರಾತನ ಜಲಮೂಲ ಗುಜ್ಜರಕೆರೆ ವಿಚಾರವಾಗಿ ತೋರಿದ ಎರಡು ದಶಕಗಳ ನಿರ್ಲಕ್ಷ್ಯ ಈ ವಿಚಾರದಲ್ಲೂ ಮುಂದುವರೆಸದೆ, ಈ ಬಾರಿಯಾದರೂ ಹಿಂದಿನಂತೆ ಸ್ಥಳಕ್ಕೆ ಭೇಟಿ ನೀಡಿ ಆಶ್ವಾಸನೆ ನೀಡುವ ದಶಕಗಳ ಸಂಪ್ರದಾಯಕ್ಕೆ ಮುಕ್ತಿ ಹಾಡಬೇಕಿದೆ. ನೆಪ ಮಾತ್ರಕ್ಕೆ ಅರೆ ಬರೆ ಕಾಮಗಾರಿ ನಡೆಸಿ, ಕಣ್ಣೊರೆಸುವ ತಂತ್ರ ಅನುಸರಿಸುವ ಬದಲು ಶಾಶ್ವತವಾದ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಂಡು ಈ ಸಮಸ್ಯೆಯನ್ನ ಬಗೆ ಹರಿಸಿ ಕೊಡಬೇಕೆಂದು ಸಂಬಂಧಿತ ಜನಪ್ರತಿನಿಧಿಗಳು ಹಾಗೂ ಇಲಾಖೆಯವರಲ್ಲಿ ಈ ಮೂಲಕ ವಿನಂತಿ ಮಾಡುತ್ತಿದ್ದಾರೆ. ಅಲ್ಲಿಯ ಪರಿಸರದ ನಿವಾಸಿಗಳು ಗುಜ್ಜರಕೆರೆ -ಅರೆಕೆರೆ ಬೈಲು ಚರಂಡಿ ಅವ್ಯವಸ್ಥೆಗೆ ಶಾಶ್ವತ ಪರಿಹಾರ ಕ್ರಮಕ್ಕಾಗಿ ಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಇಲಾಖೆಯವರಿಗೆ ಜೆಪ್ಪು ಗುಜ್ಜರಕೆರೆ ಸಮೀಪದ ಅರೆಕೆರೆಬೈಲು ನಿವಾಸಿಗಳ ಮನವಿ ಮಾಡುತ್ತಿದ್ದಾರೆ.

Related Posts

Leave a Reply

Your email address will not be published.