ವ್ಯಕ್ತಿಯೋರ್ವನಿಂದ ಮಂಗಳೂರಿನ ಹೊಟೇಲ್ ಗಳಿಗೆ ಪಂಗನಾಮ: ಬಂಧನ

ವ್ಯಕ್ತಿಯೊಬ್ಬ ನಗರದ ವಿವಿಧ ಹೊಟೇಲ್ ಗಳಲ್ಲಿ ಉಳಿದುಕೊಂಡು ಮೋಸ ಎಸಗಿರುವ ಆರೋಪಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್ ಬಂಧಿತ ಆರೋಪಿಯಾಗಿದ್ದಾನೆ.
ಈತ ದೆಹಲಿ ಏಮ್ಸ್ ಆಸ್ಪತ್ರೆಯ ಡಾಕ್ಟರ್ ಅಂತ ಹೇಳಿಕೊಂಡು , ಪ್ರೊಫೆಸರ್ ಮತ್ತು ಸರ್ಜನ್ ಆಗಿರುವ ಐಡಿ ತೋರಿಸಿದ್ದ. 


ನಗರದ ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಹೊಟೇಲ್ ಸಿಟಿ ವಾಕ್ ರೆಸಿಡೆನ್ಸಿಯಲ್ಲಿ ರೂಮ್ ಪಡೆದು ಕೊನೆಗೆ ಚೆಕ್ ಔಟ್ ವೇಳೆ, ಹಣ ಕೊಡದೆ ಪರಾರಿಯಾಗಿದ್ದ. ಹೊಟೇಲ್ ರೂಮ್ ಬಾಡಿಗೆ ನಾಲ್ಕು ಸಾವಿರ ರೂಪಾಯಿ ಆಗಬೇಕಿತ್ತು. ಈ ಬಗ್ಗೆ ಹೊಟೇಲಿನ ಮಾಲಕರೂ, ಮಂಗಳೂರು ಹೊಟೇಲ್ ಅಸೋಸಿಯೇಶನಲ್ಲಿ ಖಜಾಂಚಿಯೂ ಆಗಿರುವ ಅಬ್ರಾರ್ ಬಂದರು ಪೊಲೀಸರಿಗೆ ದೂರು ನೀಡಿದ್ದರು. ಆನಂತರ ಆತ ನೀಡಿದ್ದ ಐಡಿ ಕಾರ್ಡನ್ನು ಹೊಟೇಲ್ ಅಸೋಸಿಯೇಶನ್ ಗ್ರೂಪಲ್ಲಿ ಷೇರ್ ಮಾಡಿದ್ದರು.

ಈ ವೇಳೆ, ಅದೇ ವ್ಯಕ್ತಿ ನವಭಾರತ ವೃತ್ತದಲ್ಲಿರುವ ಪ್ಯಾಪಿಲಾನ್ ಪ್ಯಾಲೇಸ್ ಎನ್ನುವ ಹೊಟೇಲಿನಲ್ಲಿಯೂ ಇದೇ ರೀತಿ ಮೋಸ ಮಾಡಿದ್ದು ತಿಳಿದುಬಂದಿದೆ. ಸಿಟಿ ವಾಕ್ ಹೊಟೇಲಿಗೆ ಬರುವುದಕ್ಕೂ ಮುನ್ನ ಪ್ಯಾಪಿಲಾನ್ ಹೊಟೇಲಿಗೆ ತೆರಳಿದ್ದ. ಅಲ್ಲಿ ಒಂದಷ್ಟು ದಿನ ಇದ್ದುಕೊಂಡು ಬಳಿಕ ಅಲ್ಲಿಂದ ಹಣ ಕೊಡದೆ ತೆರಳಿದ್ದ. ಈ ವಿಚಾರ ತಿಳಿಯುತ್ತಲೇ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತು ಜನರಲ್ ಸೆಕ್ರೆಟರಿ ನಿಶಾಂಕ್ ಸುವರ್ಣ, ಪ್ಯಾಪಿಲಾನ್ ಹೊಟೇಲಿಗೆ ಭೇಟಿ ನೀಡಿದ್ದು, ಬಂದರು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ.

ಎಸಿಪಿ ಪಿಎ ಹೆಗಡೆ ಮತ್ತು ಬಂದರು ಇನ್ ಸ್ಪೆಕ್ಟರ್ ರಾಘವೇಂದ್ರ ನಕಲಿ ವ್ಯಕ್ತಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿದಾಗ ಆತನಲ್ಲಿರುವುದು ಫೇಕ್ ಐಡಿಯೆಂದು ಗೊತ್ತಾಗಿದೆ. ಅಲ್ಲದೆ, ಈ ಹಿಂದೆ ಇದೇ ವ್ಯಕ್ತಿ ತಮಿಳುನಾಡಿನ ಸೇಲಂನಲ್ಲಿ ನಲಂದಾ ಎನ್ನುವ ಹೊಟೇಲ್ ನಲ್ಲಿ ಉಳಿದುಕೊಂಡು 15 ಸಾವಿರ ರೂ. ಮೋಸ ಮಾಡಿದ್ದ ಎನ್ನುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Related Posts

Leave a Reply

Your email address will not be published.