ಸಂಪ್ಯದಲ್ಲಿ ನೇಗಿಲು ಹಿಡಿದು ಉಳುಮೆ ಮಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು

ಪುತ್ತೂರು: ಪೊರ್ತು ಕಂತ್ಂಡ್ ಓ ಎರು ಮಗನೇ…ಇದು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪಕ್ಕದಲ್ಲೇ ಹಡೀಲು ಬಿದ್ದ ಗದ್ದೆಯಲ್ಲಿ ಭಾನುವಾರ ಕೇಳಿಬಂದ ಸಂಧಿಯ ಕೆಲವು ಸಾಲು.ಶಾಸಕ ಸಂಜೀವ ಮಠಂದೂರು ಅವರು ಉಟ್ಟಿದ್ದ ಪಂಚೆಯನ್ನು ಎತ್ತಿಕಟ್ಟಿ, ಗದ್ದೆಗೆ ಇಳಿದು, ಎತ್ತುಗಳನ್ನು ಕಟ್ಟಿದ್ದ ನೇಗಿಲನ್ನು ಕೈಗೆ ತೆಗೆದುಕೊಳ್ಳುತ್ತಿದ್ದಂತೆ, ಉಳುಮೆ ಮಾಡುತ್ತಿದ್ದ ಬೇಸಾಯಗಾರರ ಉತ್ಸಾಹ ನೂರ್ಮಡಿಗೊಂಡಿತು. ಸಂಧಿಯ ಸಾಲುಗಳು ಪುಂಖಾನು ಪುಂಖವಾಗಿ ಗದ್ದೆಯ ತುಂಬಾ ಮಾರ್ದನಿಸತೊಡಗಿತು.

ಪುತ್ತೂರು ಕೆಲ ದಿನಗಳ ಹಿಂದೆ ಟ್ರಾಕ್ಟರ್ ಚಲಾಯಿಸಿ ಗದ್ದೆ ಉಳುಮೆಗೆ ಚಾಲನೆ ನೀಡಿ ಗಮನ ಸೆಳೆದಿದ್ದ ಶಾಸಕ ಸಂಜೀವ ಮಠಂದೂರು, ಇದೀಗ ನೇಗಿಲು ಹಿಡಿದು ಎತ್ತುಗಳ ಮೂಲಕ ಸಾಂಪ್ರದಾಯಿಕ ಶೈಲಿಯಲ್ಲಿ ಗದ್ದೆ ಉಳುಮೆ ಮಾಡಿದ್ದಾರೆ. ಎತ್ತುಗಳ ಮೂಲಕ ಗದ್ದೆ ಉಳುಮೆ ಮಾಡುವ ಕೆಲವೇ ಕೆಲವು ಗದ್ದೆಗಳ ಪೈಕಿ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪಕ್ಕದಲ್ಲೇ ಹಡೀಲು ಬಿದ್ದ ಗದ್ದೆಯೂ ಒಂದೆನಿಸಿಕೊಂಡಿತು.

ಆರ್ಯಾಪು ಗ್ರಾಮದ ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಸಂಪ್ಯ ನವಚೇತನಾ ಯುವಕ ಮಂಡಲದ ಸಹಭಾಗಿತ್ವದಲ್ಲಿ ಜು. ೪ರಂದು ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ದಿ. ಉಗ್ಗಪ್ಪ ಗೌಡ ಅವರ ಹಡೀಲು ಬಿದ್ದ ಗದ್ದೆಯಲ್ಲಿ ‘ಗದ್ದೆಗೆ ಇಳಿಯೋಣ-ಬೇಸಾಯ ಮಾಡೋಣ’ ಅಭಿಯಾನ ನಡೆಯಿತು. ಅಭಿಯಾನ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಸ್ವತಃ ತಾವೇ ಗದ್ದೆಗೆ ಇಳಿದು ನೇಗಿಲ ಹಿಡಿದು ಎತ್ತುಗಳನ್ನು ಓಡಿಸುವ ಸಾಂಪ್ರದಾಯಿಕ ಶೈಲಿಯಲ್ಲಿ ಉಳುಮೆ ಮಾಡುವ ಮೂಲಕ ಚಾಲನೆ ನೀಡಿದರು. ಇವರ ಜೊತೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯರವರೂ ನೇಗಿಲ ಹಿಡಿದು ಸಾಂಪ್ರಾದಾಯಿಕ ಉಳುಮೆ ಮಾಡಿದರು. ಊರಿನ ಹಿರಿಯರಾದ ಗುಡ್ಡಪ್ಪ ಗೌಡ ಬೈಲಾಡಿಯವರು, ಗದ್ದೆ ಬೇಸಾಯದ ಸಂದರ್ಭದಲ್ಲಿ ಹಾಡುವ ಸಂಧಿ(ಹಾಡು)ನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು. ಬಳಿಕ ನೆರೆದಿದ್ದ ಸಾರ್ವಜನಿಕರು ನೇಜಿ ನೆಟ್ಟು ತುಳುನಾಡಿನ ಪರಂಪರೆಯನ್ನು ಮತ್ತೋಮ್ಮೆ ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಕಳೆದ ಸುಮಾರು 40 ವರ್ಷಗಳಿಂದ ಸ್ವತಃ ತಾನೇ ಸಾಂಪ್ರದಾಯಿಕ ಶೈಲಿಯಲ್ಲಿ ಉಳುಮೆ ಮಾಡಿ ಬೇಸಾಯ ಮಾಡುತ್ತಿರುವ ಎಪ್ಪತ್ತು ವರ್ಷದ ಬಾರಿಕೆ ಪರಮೇಶ್ವರ ನಾಯ್ಕರವರನ್ನು ಸನ್ಮಾನಿಸಲಾಯಿತು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ಜಯಕುಮಾರ್ ನಾಯರ್, ಪ್ರೇಮಾ ಸಪಲ್ಯ, ವಿನ್ಯಾಸ್ ಗೌಡ, ತಾ.ಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಉಮೇಶ್, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ, ಉಪಾದ್ಯಕ್ಷೆ ಪೂರ್ಣಿಮಾ, ಉದ್ಯಮಿ ಶಿವರಾಮ ಆಳ್ವ, ಗದ್ದೆ ಮಾಲಕಿ ಚಂದ್ರಾವತಿ ಉಗ್ಗಪ್ಪ ಗೌಡ, ಸಂಪ್ಯ ನವಚೇತನ ಯುವಕ ಮಂಡಲ ಅಧ್ಯಕ್ಷ ವಿಜಯ ಬಿ.ಎಸ್., ಹರಿಣಿ ಪುತ್ತೂರಾಯ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published.