ಸರ್ಕಾರದ ಜನವಿರೋಧಿ ನೀತಿಗಳಿಂದ ನಿರುದ್ಯೋಗ ಸೃಷ್ಟಿ: ಪ್ರೊಫೆಸರ್ ಚಂದ್ರ ಪೂಜಾರಿ

ಜನರಿಗೆ ಉದ್ಯೋಗಕ್ಕಿಂತ ಮಂದಿರ ನಿರ್ಮಾಣ ದೊಡ್ಡ ವಿಚಾರವಾಗಿದೆ: ಪ್ರೊಫೆಸರ್ ಚಂದ್ರ ಪೂಜಾರಿದೇಶದಲ್ಲಿ ನಿರುದ್ಯೋಗ ಈಗ ಹೆಚ್ಚಳ ಆಗುತ್ತಿರುವ ನಡುವೆ ಉದ್ಯೋಗ ಇರುವವರಿಗೆ ಗುಣಮಟ್ಟದ ಉದ್ಯೋಗ ಇಲ್ಲ. ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ಗಮನ ಹರಿಸಲ್ಲ. ಬರೀ ಕೈಗಾರಿಕೆ ಮೇಲೆ ಗಮನ ಹರಿಸುತ್ತಿದೆ ಎಂದು ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಚಂದ್ರ ಪೂಜಾರಿ ಹೇಳಿದರು.

CPIM 23ನೇ ದ.ಕ ಜಿಲ್ಲಾ ಸಮ್ಮೆಳನದ ಭಾಗವಾಗಿ ಸಿಪಿಐಎಂ ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ಸಮಿತಿಗಳ ಆಯೋಜನೆಯಲ್ಲಿ “ಉದ್ಯೋಗದ ಹಕ್ಕು, ಸರಕಾರದ ನೀತಿಗಳು” ಎಂಬ ವಿಚಾರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಫ್ರೊಫೆಸರ್ ಚಂದ್ರ ಪೂಜಾರಿ ವಿಷಯ ಮಂಡನೆ ಮಾಡಿದರು.

ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕಾದ ಸರ್ಕಾರವೇ ಸುಮ್ಮನಿದೆ. ಸರ್ಕಾರದ ನೀತಿಯಿಂದ ಆರ್ಥಿಕ ಕುಸಿತ ಉಂಟಾಗಿದೆ. 2016 ರಲ್ಲಿ ನೋಟು ಅಮಾನ್ಯೀಕರಣದಿಂದಾಗಿ ಆರ್ಥಿಕತೆ ಹಠಾತ್ ಕುಸಿತವಾಗಿದೆ. ಬಳಿಕ ಜಿಎಸ್ಟಿಯಿಂದಾಗಿ ಆರ್ಥಿಕತೆ ಮತ್ತಷ್ಟು ಕುಸಿಯಿತು ಎಂದು ತಿಳಿಸಿದರು.

ಜನರು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಬೇಸತ್ತು ಈಗ ಅರ್ಜಿ ಸಲ್ಲಿಸುವುದನ್ನೇ ಬಿಟ್ಟಿದ್ದಾರೆ. ಲಾಕ್ ಡೌನ್ ಬಳಿಕ ಇನ್ನಷ್ಟು ಸಂಕಷ್ಟ ಉಂಟಾಗಿದೆ. ಹಲವಾರು ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಆದರೂ ಸರ್ಕಾರ ಉದ್ಯೋಗ ಸೃಷ್ಟಿಗಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದರು.

ಉದ್ಯೋಗ ಇರುವವರಿಗೆ ಯಾವುದೇ ಭದ್ರತೆ ಇಲ್ಲ. ಅಸಂಘಟಿತ ವಲಯ ಅಧಿಕವಾಗಿದೆ. ಕನಿಷ್ಠ ಸಂಬಳವೂ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರಿಗೆ ಪರಿಸ್ಥಿತಿಯ ಬಗ್ಗೆ ತಿಳಿಯುವುದಿಲ್ಲ. ಮೇಲ್ನೋಟಕ್ಕೆ ಜನರು ತೊಂದರೆಯಲ್ಲಿ ಇಲ್ಲದಂತೆ ಕಾಣುತ್ತದೆ. ಜನರಿಗೆ ಇರುವ ಕಷ್ಟದ ಬಗ್ಗೆ ಅವರಿಗೆಯೇ ಅರಿವು ಇಲ್ಲ. ನಿರುದ್ಯೋಗ ಯಾಕೆ ಇದೆ ಎಂಬುವುದರ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆಯಬೇಕಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

ಸರ್ಕಾರ ಈಗ ಬರೀ ಜಿಡಿಪಿ ಮೇಲೆ ಗಮನ ಇರಿಸಿದೆ. ಆರ್ಥಿಕ ಸಮಾನತೆ ಇಲ್ಲದಿರುವಾಗ ಜಿಡಿಪಿ ಹೆಚ್ಚಲವಾದರೂ ಏನು ಪ್ರಯೋಜನ ಎಂದು ಪ್ರಶ್ನಿಸಿದ ಚಂದ್ರ ಪೂಜಾರಿ, ಸರ್ಕಾರಕ್ಕೆ ಶ್ರೀಮಂತರಿಗಿಂತ ಅಧಿಕ ಬಡವರೇ ತೆರಿಗೆ ಪಾವತಿ ಮಾಡುತ್ತಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಬರೀ ಜಾತಿ, ಧರ್ಮದ ರಾಜಕೀಯ ನಡೆಯುತ್ತಿದೆ. ಜನರ ಸಮಸ್ಯೆ, ನಿರುದ್ಯೋಗದ ಬಗ್ಗೆ ಮಾತನಾಡುವವರು ಇಲ್ಲ. ಉದ್ಯೋಗಕ್ಕಿಂತ ಮಂದಿರ ನಿರ್ಮಾಣವೇ ದೊಡ್ಡ ವಿಷಯವಾಗಿದೆ. ಈ ನಡುವೆ ಪ್ರಮುಖ ಪಾತ್ರ ವಹಿಸಬೇಕಾದ ಮಾಧ್ಯಮ ಬೇಜವಾಬ್ದಾರಿಯ ವರ್ತನೆ ತೋರುತ್ತಿದೆ. ಪ್ರಸ್ತುತ ಸರ್ಕಾರ ಶಿಕ್ಷಣ, ಆರೋಗ್ಯ, ಉದ್ಯೋಗದ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಎಂ ದ. ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮುನೀರ್ ಕಾಟಿಪಳ್ಳ, ನಮ್ಮ ಜಿಲ್ಲೆ ಮೇಲ್ನೋಟಕ್ಕೆ ಅಭಿವೃದ್ಧಿ ಹೊಂದಿದಂತೆ ಕಾಣುತ್ತದೆ. ಆದರೆ ಆಂತರಿಕವಾಗಿ ಪರಿಸ್ಥಿತಿ ಗಂಭೀರವಾಗಿದೆ. ಜಿಲ್ಲೆಯಲ್ಲಿ ಕಳ್ಳತನ, ಸುಳಿಗೆ ಪ್ರಕರಣ ಹೆಚ್ಚುತ್ತಿದೆ. ನಿರುದ್ಯೋಗ ಸಮಸ್ಯೆಯೇ ಈ ಕಳ್ಳತನ, ಸುಳಿಗೆ, ಆತ್ಮಹತ್ಯೆ ಪ್ರಕರಣಗಳಿಗೆ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ ಪ್ರತಿ ಮನೆಯಲ್ಲಿ ಒಬ್ಬರಿಗೆ ನಿರುದ್ಯೋಗ ಸಮಸ್ಯೆ ಇದೆ. ಆದರೆ ಯುವಕರು ಈ ವಿಚಾರದ ಕುರಿತು ಮಾತಾನಾಡುವುದಿಲ್ಲ. ಯುವ ಜನರು ಮತೀಯ ಅಜೆಂಡಾಕ್ಕೆ ಬಲಿಯಾಗಿದ್ದಾರೆ ಎಂದರು.

ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ವಹಿಸಿದರು. ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿ, ಸಿಪಿಐಎಂ ಮಂಗಳೂರು ನಗರ ಉತ್ತರ ಕಾರ್ಯದರ್ಶಿ ಬಶೀರ್ ಧನ್ಯವಾದ ಸಲ್ಲಿಸಿದರು.

Related Posts

Leave a Reply

Your email address will not be published.